ಬೆಳ್ತಂಗಡಿ. ಜೂ.15: ಬೆಳ್ತಂಗಡಿ ತಾಲೂಕು, ಜನಜಾಗೃತಿ ವೇದಿಕೆಯ ಸಭೆಯು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸಭಾಭವನದಲ್ಲಿ ನಡೆಸಲಾಯಿತು. ಸಭೆಯಲ್ಲಿ ತಾಲೂಕಿನಾದ್ಯಂತ ಜಾತ್ರೋತ್ಸವ, ಧಾರ್ಮಿಕ ಕಾರ್ಯಕ್ರಮಗಳ ಕಾರಣವನ್ನು ಮುಂದಿಟ್ಟು ವ್ಯಾಪಕವಾಗಿ ನಿರಂತರ ಕೋಳಿ ಅಂಕಗಳನ್ನು ನಡೆಸಿ ಜೂಜಿನ ಅವ್ಯವಹಾರಗಳು ನಡೆಯುತ್ತಿದ್ದು, ಪೋಲಿಸು ಇಲಾಖೆ ಈ ನಿಟ್ಟಿನಲ್ಲಿ ಸಡಿಲ ಧೋರಣೆಯನ್ನು ಅನುಸರಿಸುತ್ತಿದೆ. ಜೂಜು ಹೊಂದಿರುವ ಕೋಳಿ ಅಂಕ ಕಾನೂನು ಬಾಹಿರವಾಗಿದೆ. ಇದಕ್ಕೆ ಯಾವುದೇ ಅಧಿಕೃತವಾದ ಅನುಮತಿ ನ್ಯಾಯಾಲಯದಿಂದ ಬಂದಿಲ್ಲ. 

ಆದರೂ ಕೋಳಿ ಅಂಕದ ಮೂಲಕ ನಡೆಸುವಜೂಜು ಪ್ರೇಮಿಗಳು ಪೋಲೀಸರ ಅನುಮತಿ ಪಡೆದು ನ್ಯಾಯಾಲಯದ ಆದೇಶದಂತೆಯೇ ಮಾಡುತ್ತಿದ್ದೇವೆ ಎಂದು ಅಮಾಯಕ ಜನರನ್ನು ಮೋಸ ಮಾಡುವ ವ್ಯವಸ್ಥೆ ನಡೆಯುತ್ತಿದೆ. ಇದನ್ನು ವೇದಿಕೆ ಬಲವಾಗಿ ಖಂಡಿಸಿ ಮುಂದಿನ ದಿನಗಳಲ್ಲಿ ಇದನ್ನು ತಡೆಹಿಡಿದು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದೆ.

 ಅದೇ ರೀತಿ ಬೆಳ್ತಂಗಡಿ ತಾಲೂಕಿನಲ್ಲಿ ಯಾವುದೇ ಮದ್ಯದಂಗಡಿಗಳ ಸ್ಥಳಾಂತರ, ಹೊಸ ಮದ್ಯದಂಗಡಿ, ವೈನ್‍ಶಾಪ್ ಮತ್ತು ಬಾರ್‍ಎಂಡ್ ರೆಸ್ಟೋರೆಂಟ್‍ಗಳ ಸ್ಥಾಪನೆಗೆ ಅವಕಾಶ ನೀಡಬಾರದು. ವೇದಿಕೆಯ ಮೂಲಕ ವ್ಯಸನಮುಕ್ತ ಸಮಾಜದ ಉದ್ದೇಶದೊಂದಿಗೆ ಕೆಲಸ ಮಾಡುವ ನಮ್ಮ ಪ್ರಯತ್ನಎಲ್ಲ ವ್ಯರ್ಥವಾಗುತ್ತಿದೆ. ಆದುದರಿಂದ ಮದ್ಯಪಾನ, ಧೂಮಪಾನ, ಗಾಂಜಾ, ಮಾದಕ ವಸ್ತುಗಳ ತಡೆಗಟ್ಟುವಿಕೆಯಲ್ಲಿ ಜಿಲ್ಲಾಡಳಿತ, ತಾಲೂಕು ಆಡಳಿತ, ಮಾನ್ಯ ಶಾಸಕರು, ವಿಧಾನ ಪರಿಷತ್ ಶಾಸಕರುಗಳು ವಿಶೇಷವಾದ ಗಮನವನ್ನು ಹರಿಸಿ ಸಹಕರಿಸಬೇಕು. 

ಈ ವಿಚಾರದಂತೆ ಶೀಘ್ರವೇ ಶಾಸಕರ, ವಿಧಾನ ಪರಿಷತ್ ಶಾಸಕರುಗಳ, ತಹಶೀಲ್ದಾರರ ನೇತೃತ್ವದಲ್ಲಿ ವೇದಿಕೆಯ ಸಭೆಯನ್ನು ಕರೆದು ಇದಕ್ಕೆ ಪರಿಹಾರ ಕಂಡುಕೊಳ್ಳಬೇಕೆಂಬ ಅಭಿಪ್ರಾಯ ಚರ್ಚೆಯಾಗಿದ್ದು, ಇದನ್ನು ಶೀಘ್ರವೇ ನಡೆಸಲಾಗುವುದು ಎಂದು ಸಭೆಯಲ್ಲಿ ನಿರ್ಣಯಿಸಲಾಯಿತು. 

ಸಭೆಯ ಅಧ್ಯಕ್ಷತೆಯನ್ನು ತಾಲೂಕು ಜನಜಾಗೃತಿ ವೇದಿಕೆ ಅಧ್ಯಕ್ಷರಾದ ಶಾರದ ಆರ್. ರೈ ವಹಿಸಿದ್ದರು. ಸ್ಥಾಪಕಾಧ್ಯಕ್ಷರಾದ ವಸಂತ ಸಾಲ್ಯಾನ್, ನಿಕಟಪೂರ್ವ ತಾಲೂಕು ಅಧ್ಯಕ್ಷರುಗಳಾದ ಪಿ.ಕೆ.ರಾಜು ಪೂಜಾರಿ, ಡಿ.ಎ.ರಹಿಮಾನ್, ತಿಮ್ಮಪ್ಪಗೌಡ, ಕಿಶೋರ್ ಹೆಗ್ಡೆ, ಪ್ರಾದೇಶಿಕ ನಿರ್ದೇಶಕರಾದ ವಿವೇಕ್ ವಿ. ಪಾೈಸ್, ನಿರ್ದೇಶಕರಾದ ಸತೀಶ್ ಶೆಟ್ಟಿ, ಯೋಜನಾಧಿಕಾರಿಗಳಾದ ಯಶವಂತ್‍ಎಸ್. ಮೋಹನ್ ಕೆ. ತಿಮ್ಮಯ್ಯ ನಾಯ್ಕ, ಸುರೇಂದ್ರ, ತಾಲೂಕು ಕೇಂದ್ರ ಒಕ್ಕೂಟ ಅಧ್ಯಕ್ಷರಾದ ಪ್ರಭಾಕರ ಪಿ., ಮತ್ತು ಕಾರ್ಯಕಾರಿ ಸಮಿತಿ ಸದಸ್ಯರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಟ್ರಸ್ಟಿಗಳಾದ ಡಾ| ಯಶೋವರ್ಮರವರಿಗೆ ಶ್ರದ್ಧಾಂಜಲಿ ಸಮರ್ಪಿಸಲಾಯಿತು.