ಮಂಗಳೂರು,ಏ.28:-ಯಾವ ಗ್ರಾಮದಲ್ಲಿ ಎಷ್ಟು ಡಿ.ಸಿ ಮನ್ನಾ ಜಮೀನು ಲಭ್ಯವಿದೆ ಎಂಬ ಪಟ್ಟಿಯನ್ನು ನೀಡುವುದರೊಂದಿಗೆ ಅಂತಹಾ ಜಾಗದಲ್ಲಿರುವ ಅತಿಕ್ರಮಣದಾರರು ಯಾರು ಎಂಬುದರ ಮಾಹಿತಿ ನೀಡುವಂತೆ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸೂಚಿಸಿದರು.

ಅವರು ಇಂದು ಗುರುವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ 2020-21ನೇ ಸಾಲಿನ ಧಾರ್ಮಿಕ ದತ್ತಿ ಇಲಾಖೆಯಲ್ಲಿ ಪ್ರಸ್ತಾವನೆ ಸಲ್ಲಿಸದೇ ಬಳಕೆಯಾಗದೆ ಉಳಿದಿರುವ ಅನುದಾನದ ಬಗ್ಗೆ, ಡಿ.ಸಿ ಮನ್ನಾ ಜಮೀನಿನ ಬಗ್ಗೆ ಹಾಗೂ  ಸಮಾಜ ಕಲ್ಯಾಣ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗೆ ಸಂಬಂಧಪಟ್ಟ ವಿಷಯಗಳ ಬಗ್ಗೆ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ  ಮಾತನಾಡಿದರು.

ನಿವೇಶನ ರಹಿತ ಹಾಗೂ ಗೃಹ ರಹಿತ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದವರು ಈಗಾಗಲೇ ನಿವೇಶನ ಕೋರಿ ಅರ್ಜಿ ಸಲ್ಲಿಸಿದ್ದು ಅವರಿಗೆ ಸರ್ಕಾರದಿಂದ ಅನುಮೋದನೆ ಯಾಗಿರುವ ಜಾಗವನ್ನು ಗುರುತಿಸಿ ನೀಡಬೇಕು. ಪ್ರತೀ ಗ್ರಾಮ ಪಂಚಾಯತ್‍ಗಳಲ್ಲಿಯೂ ಮನೆ ರಹಿತರು ಹಾಗೂ ನಿವೇಶನ ರಹಿತರ ಪಟ್ಟಿ ಈಗಾಗಲೇ ಲಭ್ಯವಿರುವುದರಿಂದ ಅದರ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಕೂಲಂಕುಷವಾಗಿ ಪರಿಶೀಲಿಸಿ ಅರ್ಹ ಪ.ಜಾತಿ ಹಾಗೂ ಪ.ಪಂಗಡದ ಫಲಾನುಭವಿಗಳ ಪಟ್ಟಿಯನ್ನು ಮೇ.10ರೊಳಗೆ ತಯಾರಿಸುವಂತೆ ಸೂಚಿಸಿದರು.

 ಈಗಾಗಲೇ ಪರಿಶಿಷ್ಟ ಜಾತಿಯ 4,974 ಹಾಗೂ ಪರಿಶಿಷ್ಟ ಪಂಗಡದ 501 ಅರ್ಜಿಗಳನ್ನು ಸಲ್ಲಿಸಿರುತ್ತಾರೆ. ಜಿಲ್ಲೆಯಲ್ಲಿ ಒಟ್ಟು 223 ಗ್ರಾಮ ಪಂಚಾಯತಿಗಳು ಇದ್ದು, ಪ್ರತೀ ಗ್ರಾಮ ಪಂಚಾಯತ್‍ಗಳಲ್ಲಿರುವ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಜನರನ್ನು ಗುರುತಿಸಿ ಸ್ವಂತ ಜಾಗ, ಮನೆ ಹಾಗೂ ಕೃಷಿ ಭೂಮಿ ಹೊಂದಿರದವರ  ಬಗ್ಗೆ ಸಮೀಕ್ಷೆ ಮಾಡಬೇಕು ಎಂದರು. 

ಮೀನುಗಾರಿಕೆ ಒಳನಾಡು ಬಂದರು ಹಾಗೂ ಜಲಸಾರಿಗೆ ಸಚಿವ ಎಸ್. ಅಂಗಾರ, ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ, ಅಪರ ಜಿಲ್ಲಾಧಿಕಾರಿ ಡಾ. ಕೃಷ್ಣಮೂರ್ತಿ, ಪುತ್ತೂರು  ಶಾಸಕ ಸಂಜೀವ ಮಠಂದೂರು, ಮೇಯರ್ ಪ್ರೇಮಾನಂದ ಶೆಟ್ಟಿ, ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.