ಮಂಗಳೂರು, ಜೂನ್ 24: ಕಾಂಗ್ರೆಸ್ ಪಕ್ಷವು ದೇಶದ ಎಲ್ಲೆಡೆ ಅಗ್ನಿಪಥ ವಿರುದ್ಧ ಜೂನ್ 27ರಂದು ಪ್ರಚಂಡ ಪ್ರತಿಭಟನೆ ನಡೆಸಲಿದ್ದು, ಕರ್ನಾಟಕದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿಯೂ ಭಾರೀ‌ ಪ್ರತಿಭಟನೆ ನಡೆಯುತ್ತದೆ ಎಂದು ಮಾಜೀ ಶಾಸಕ ಐವಾನ್ ಡಿಸೋಜಾ ಹೇಳಿದರು.

ಈ ಪ್ರತಿಭಟನೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಮತ್ತು ಮಹಿಳೆಯರನ್ನು ಒಗ್ಗೂಡಿಸಲಾಗುವುದು. ಅಗ್ನಿಪಥ ನೇಮಕಾತಿಯು ಯುವ ಜನಾಂಗದ ಶಿಕ್ಷಣವನ್ನು ಅರ್ಧಕ್ಕೆ ನಿಲ್ಲುವಂತೆ ಮಾಡುತ್ತದೆ. ನಾಲ್ಕು ವರುಷದ ಬಳಿಕ ಇವರು ನಿರುದ್ಯೋಗಿಗಳಾಗಿ, ಶಿಕ್ಷಣವಿಲ್ಲದೆ ಎಡೆಬಿಡಂಗಿ ಆಗುತ್ತಾರೆ ಎಂದು ಐವಾನ್ ಡಿಸೋಜಾ ಹೇಳಿದರು.

ದೇಶದ ಎಲ್ಲ ಕಡೆ ಪಕ್ಷ ಮತ್ತು ಇತರರು ಪ್ರತಿಭಟನೆಯಲ್ಲಿ ತೊಡಗಿದ್ದಾರೆ. ಬೇರೆ ದೇಶಗಳಲ್ಲಿ ಇಂತಾ ಯೋಜನೆ ಇರಬಹುದು. ಇತರ ದೇಶಗಳಲ್ಲಿ  ನಿರುದ್ಯೋಗ ಭತ್ಯೆ ಇದೆ. ಇಲ್ಲಿ ಇಲ್ಲವಲ್ಲ. ಯಾವುದೇ ರೀತಿಯಿಂದಲೂ ಅಗ್ನಿಪಥ ಯೋಜನೆ ಭಾರತಕ್ಕೆ ಸೂಕ್ತವಲ್ಲ ಎಂದು ಡಿಸೋಜಾ ತಿಳಿಸಿದರು.

ಮಂಗಳೂರಿನ 60 ವಾರ್ಡ್‌ಗಳಲ್ಲೂ ಸ್ಮಾರ್ಟ್ ಸಿಟಿ ಹೆಸರಿನಲ್ಲಿ ನಾನಾ ಕಾಮಗಾರಿ ನಡೆದಿದೆ. ಆದರೆ ಎಲ್ಲ ಅಭಿವೃದ್ಧಿ ಕೆಲಸಗಳು ಅರೆಬರೆ ನಡೆದಿರುವುದರಿಂದ ಎಲ್ಲೂ‌ ಸುಸ್ಥಿರತೆ ಇಲ್ಲ. ನಾನು ಕೇಳುವ ಪ್ರಶ್ನೆ ಇದು. ಕಳೆದ ಮೂರು ವರುಷಗಳಿಂದ ಯಾವುದಾದರೂ ಒಂದು ಸ್ಮಾರ್ಟ್ ಸಿಟಿ ಯೋಜನೆ ಕಾಮಗಾರಿಯನ್ನು ನೀವು ಮುಗಿಸಿ ಜನರಿಗೆ ವಹಿಸಿಕೊಟ್ಟ ಒಂದೇ ಒಂದು ಉದಾಹರಣೆ ಕೊಡಿ ನೋಡೋಣ? ಎಂದು ಐವಾನ್‌ರು ಹೇಳಿದರು.

ಇನ್ನು ರಸ್ತೆ ಅಗಲಕ್ಕೆ ವಶಪಡಿಸಿಕೊಂಡ ಜಾಗವನ್ನು ಉದ್ಯಾನ ಮಾಡುವುದೇಕೆ? ಕದ್ರಿ ಪಾರ್ಕ್ ಉತ್ತಮ ಮಾಡಿದೆವು. ಅಲ್ಲಿ ವಾಹನ ಪಾರ್ಕಿಂಗ್ ಇಲ್ಲದಂತೆ ಮಾಡಿದರೆ ಜನರಿಗೆ ಏನುಪಯೋಗ? ಕ್ಲಾಕ್ ಟವರ್,  ಬಸ್ಸು ನಿಲ್ದಾಣದ ಸುತ್ತ ನಿಮ್ಮ ಕಾಮಗಾರಿ ಜನರಿಗಂತೂ ಉಪಯೋಗವಿಲ್ಲ. ಇಷ್ಟೊಂದು ಬಸ್ಸುಗಳಿರುವ ಮಂಗಳೂರಿಗೆ ಸ್ಟೇಟ್ ಬ್ಯಾಂಕ್ ಬಳಿಯ ಜಾಗ ಸಾಲದು. ಸ್ಮಾರ್ಟ್ ಸಿಟಿ ಯೋಜನೆ ಮನಪಾ ಭಾಗವೇ ಆಗಿದೆ. ಅದರ ಹಣ ದುರುಪಯೋಗ ಸಲ್ಲ ಎಂದು ಐವಾನ್ ಡಿಸೋಜಾ ಹೇಳಿದರು.

ಕಳಪೆ ಕಾಮಗಾರಿ ನಡೆದಿದ್ದು ಇದರ ಬಗೆಗೆ ಸರಿಯಾದ ವೈಟ್ ಪೇಪರ್ ಬಿಡುಗಡೆ ಮಾಡಬೇಕು. ನಾವು ನಗರ ಸಂಚಾರ ನಡೆಸಿ ಅಲ್ಲೇ ಪ್ರತಿಭಟನೆ ನಡೆಸುವ ಯೋಜನೆ ಇರುವುದಾಗಿಯೂ ಅವರು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಭಾಸ್ಕರರಾವ್, ಆಲಿಸ್ಟರ್ ಡಿಕೂನಾ, ಸಲೀಂ ಮುಕ್ಕ, ಮುಸ್ತಫಾ, ಹುಸೇನ್ ಕೂಳೂರು, ವಿಕಾಸ ಶೆಟ್ಟಿ ಉಪಸ್ಥಿತರಿದ್ದರು.