ಮಂಗಳೂರು: ಪ್ರಖ್ಯಾತ ಭಾರತ್ ಬೀಡಿ ವರ್ಕ್ಸ್ ಸಂಸ್ಥೆಯ ನಿರ್ದೇಶಕರಾಗಿದ್ದ ದಿ.ಅನಂತ ಜಿ. ಪೈ ಅವರ ಸ್ಮರಣಾರ್ಥ ಸಂಸ್ಥೆಯ ಸಾಮಾಜಿಕ ಜವಾಬ್ದಾರಿ ಯೋಜನೆಯಡಿ ಮಾರುತಿ ಅಂಬ್ಯುಲೆನ್ಸ್ ಅನ್ನು ದಾನವಾಗಿ ಮಂಗಳೂರು ವಿಧಾನ ಸಭಾ (ಉಳ್ಳಾಲ) ಕ್ಷೇತ್ರಕ್ಕೆ ಭಾರತ್ ಬೀಡಿಯ ನಿರ್ದೇಶಕರಾದ ಸುಬ್ರಾಯ ಎಂ.ಪೈ ಮತ್ತು ನಾಗೇಂದ್ರ ಡಿ.ಪೈ ಅವರ ಸಮಕ್ಷಮದಲ್ಲಿ ಭಾರತ್ ಅಟೋ ಕಾರ್‍ಸ್ ಶೋರೂಮ್‌ನಲ್ಲಿ ಸೋಮವಾರ ಹಸ್ತಾಂತರಿಸಲಾಯಿತು. ಕ್ಷೇತ್ರದ ಶಾಸಕ ಯು. ಟಿ.ಖಾದರ್ ಅವರು ಆಂಬುಲೆನ್ಸ್ ವಾಹನದ ಕೀಲಿ ಕೈ ಸ್ವೀಕರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸುಬ್ರಾಯ ಎಂ. ಪೈ ಅವರು, ಶಾಸಕ ಯು.ಟಿ. ಖಾದರ್ ಅವರು ಕ್ಷೇತ್ರದಲ್ಲಿ ಬಹಳಷ್ಟು ಸಮಾಜ ಸೇವೆ ಹಾಗೂ ಬಡ ಜನರ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತಿದ್ದು, ಈ ಅಂಬ್ಯುಲೆನ್ಸ್‌ನ ಕೊಡುಗೆಯು ಅವರ ಸೇವೆಯನ್ನು ಮತ್ತಷ್ಟು ಹೆಚ್ಚಿಸಲು ಸಹಾಯವಾಗುವುದು ಎಂದರು.

ಶಾಸಕ ಯು.ಟಿ.ಖಾದರ್ ಮಾತನಾಡಿ ಭಾರತ್ ಬೀಡಿ ಸಂಸ್ಥೆಯು ಲಕ್ಷಾಂತರ ಜನರಿಗೆ ಉದ್ಯೋಗ ಕಲ್ಪಿಸಿ ಇಂದಿಗೂ ಸಮಾಜ ಸೇವೆಗೆ ಹೆಸರುವಾಸಿಯಾಗಿದೆ. ಭಾರತ್ ಬೀಡಿ ವರ್ಕ್ಸ್‌ನ ನಿರ್ದೇಶಕ ಅನಂತ ಜಿ. ಪೈ ಅವರು ಇಂದು ನಮ್ಮೊಂದಿಗೆ ಇಲ್ಲವಾದರೂ ಅವರ ಹೆಸರಿಗೆ ಈ ಸೇವೆ ಸಲ್ಲಲಿದೆ ಎಂದರು.

ಸಮಾರಂಭದಲ್ಲಿ ಭಾರತ್ ಬೀಡಿ ವರ್ಕ್ಸ್‌ನ ಲೆಕ್ಕ ಪರಿಶೋಧಕ ಶಿವಾನಂದ ಪೈ, ಭಾರತ್ ಅಟೋ ಕಾರ್‍ಸ್‌ನ ಜನರಲ್ ಮ್ಯಾನೇಜರ್ ವಿಶ್ವ ಕುಮಾರ್, ಸೀನಿಯರ್ ಸೇಲ್ಸ್ ಮ್ಯಾನೇಜರ್ ಡೆನಿಸ್ ಗೊನ್ಸಾಲ್ವಿಸ್ ಮತ್ತು ಭಾರತ್ ವೆಹಿಕಲ್ ವರ್ಕ್ಸ್ ನ ಮುಖ್ಯ ಕಾರ್ಯನಿರ್ವಾಹಕ ಅದಿಕಾರಿ ಸಂದೇಶ್ ಶೆಣೈ ಉಪಸ್ಥಿತರಿದ್ದರು.