ಮಂಗಳೂರು:- ರಾಜೇಂದ್ರ ಕುಮಾರ್ ಅವರು ದಕ್ಷಿಣ ಕನ್ನಡ ಮಾತ್ರವಲ್ಲ, ಉತ್ತರ ಕರ್ನಾಟಕದಲ್ಲೂ ದಾತರು. 25 ವರುಷಗಳ ಯಾರೂ ಕೊಡದ ಕಾಲದಲ್ಲಿ ಸಾಲದ ಮೂಲಕ ಬಾಗಲಕೋಟೆಯಲ್ಲಿ ಸಕ್ಕರೆ ಕಾರ್ಖಾನೆಗೆ ನೆರವಾದವರು. ಅದು ಇಂದು ದೇಶದ 2ನೇ ದೊಡ್ಡ ಮತ್ತು ಏಶಿಯಾದ ನಂಬರ್ ವನ್ ಎತನಾಲ್ ತಯಾರಿಸುವ ಕಾರ್ಖಾನೆ, ಅದರ 75,000 ಕಾರ್ಮಿಕರು ರಾ.ಕು. ಅವರಿಗೆ ಋಣಿ ಎಂದು ಗಣಿ ಮತ್ತು ಭೂವಿಜ್ಞಾನ ಸಚಿವ ಮುರುಗೇಶ್ ನಿರಾಣಿ ಹೇಳಿದರು.
ಮಾನ್ಯ ಮಂತ್ರಿಗಳು ಇಲ್ಲಿನ ಸಹಕಾರಿಗಳ ಪರವಾಗಿ ಟಿ. ವಿ. ರಮಣ ಪೈ ಹಾಲಿನಲ್ಲಿ ನಡೆದ ಗುರು ವಂದನೆ, ರಾಮ ಮಂದಿರಕ್ಕೆ ನಿಧಿ ಸಮರ್ಪಣೆ, ಸಹಕಾರ ರತ್ನ ರಾಜೇಂದ್ರ ಕುಮಾರರ 72ನೇ ಹುಟ್ಟು ಹಬ್ಬದ ಗೌರವ ಅಭಿನಂದನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಶಾಖೆಗಳನ್ನು 12 ಪಟ್ಟು ಹೆಚ್ಚಿಸಿ, ವ್ಯವಹಾರವನ್ನು ನೂರಾರು ಪಟ್ಟು ಹೆಚ್ಚು ಮಾಡಿದ ರಾಜೇಂದ್ರರದು ಅಸೀಮ ಸಾಧನೆ. ಅವರು ದೇಶಕ್ಕೇ ಮಾದರಿ ಸಹಕಾರಿ ಧುರೀಣ ಎಂದು ನಿರಾಣಿ ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಮುಜರಾಯಿ ಮಂತ್ರಿ ಕೋಟ ಶ್ರೀನಿವಾಸ ಪೂಜಾರಿ ಅವರು ಬೆಂಗಳೂರಿಗೆ ಹೊರಟು ನಿಂತು ಅವಸರದಲ್ಲಿದ್ದರು. ರಾಜೇಂದ್ರ ಕುಮಾರ್ ಅವರು ಮೊಳಹಳ್ಳಿ ಶಿವರಾಯರ ಬಳಿಕದ ಶ್ರೇಷ್ಠ ಸಹಕಾರ ನಾಯಕ. ಅವರಿಗಿಂತ ಚಿಕ್ಕವನಾದ ನಾನು ಅವರಿಗಿಂತ ಮುದುಕನಾಗಿ ಕಾಣುತ್ತೇನೆ. ಅವರು ಸೇವೆಯಲ್ಲಿ ಮುದುಕ ಆಗದಿರಲಿ. ನಿನ್ನೆ ಪೇಜಾವರ ಸ್ವಾಮೀಜಿ ನಮ್ಮ ಮನೆಗೆ ಬಂದಿದ್ದರು. ಕುಚೇಲನ ಮನೆ ಕೃಷ್ಣ ಎಂದು ನಾನು ಹೇಳಿದರೆ, ಸ್ವಾಮೀಜಿ 90 ವರುಷದ ನನ್ನ ತಾಯಿಯನ್ನು ನೋಡಿ ಶಬರಿಯ ಮನೆಗೆ ಬಂದಿದ್ದೇನೆ ಎಂದರು. ಇದು ಪಕ್ಷರಹಿತ, ಜಾತಿ ರಹಿತ ಕಜ್ಜ ಎಂದು ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಉದ್ಘಾಟನೆ ಮಾಡಬೇಕಿದ್ದ ಸಂಸದ ನಳಿನ್ ಕುಮಾರ್ ಕಟೀಲು ಅನಂತರ ಸೇರಿಕೊಂಡರು. ಭೂತಕಾಲದ ಬೆಳಕಿಗಿಂತ ಭವಿಷ್ಯದ ಬೆಳಕು ಹಚ್ಚುವುದು ಮುಖ್ಯ. ಅದನ್ನು ಸಾಧಿಸಿದ ಸಾಧಕ ರಾಜೇಂದ್ರ ಕುಮಾರ್. ಅವರದು ಸಹಕಾರ ಕ್ಷೇತ್ರದಲ್ಲಿ ಶಾಶ್ವತ ಹೆಸರು, ಈಗ ರಾಮ ಮಂದಿರಕ್ಕೆ ಕೋಟಿ ಕೂಡಿಸಿ ಮರೆಯದ ಮಾಣಿಕ್ಯ ಆಗಿದ್ದಾರೆ ಎಂದರು.
ರಾಜೇಂದ್ರ ಕುಮಾರ್ ಅಭಿನಂದನೆ ಸ್ವೀಕರಿಸಿ ಬದುಕು ಬದುಕಲು ಬಿಡು ಎಂಬ ನೀತಿಯಡಿ ಬ್ಯಾಂಕಿನ ಮಾರ್ಗ ನೇರ ಮಾಡಿದ್ದೇನೆ. ಸಹಕಾರದ ಚಿಹ್ನೆ ಕೂಡಿಸುವ ಜೋಡಿ ಹಸ್ತ. ದೇಶದ ಎಲ್ಲ ಕಡೆ ಮನಸು ಕನಸು ಕೂಡಿಸುವುದು ನಮ್ಮ ಗುರಿ ಎಂದವರು ಅಭಿಮಾನಿಗಳೆದುರು ಹನಿಗಣ್ಣರಾಗಿ ಮಾತು ನಿಲ್ಲಿಸಿದರು.
ರಾಜೇಂದ್ರ ಕುಮಾರ್ ಮತ್ತು ಅವರ ಪತ್ನಿ ಅರುಣಾ ರಾಜೇಂದ್ರ ಕುಮಾರ್ ಅವರನ್ನು ಸನ್ಮಾನಿಸಲಾಯಿತು. ಆಗ ಅಭಿನಂದನಾ ಭಾಷಣ ಮಾಡಿದ ಮೋಹನ್ ಆಳ್ವ ಅವರು ಜೀರೋಗಳನ್ನು ಹೀರೋ ಮಾಡುವ ಶಕ್ತಿ ರಾಜೇಂದ್ರ ಕುಮಾರ್ ಅವರಿಗಿದೆ. ಎಸ್ ಸಿಡಿಸಿಸಿ ಬ್ಯಾಂಕ್ ಎಂದರೆ ರಾಜೇಂದ್ರ ಕುಮಾರ್ ಎಂಬಂತೆ ಸಾಧನೆ ಮಾಡಿದ ಅವರು ಸಂಘಟನಾ ಚತುರ, ಸಹಕಾರಿ ರಾಜ ಎಂದು ಹೇಳಿದರು.
ಪೇಜಾವರ ಸ್ವಾಮೀಜಿ ಅವರ ಮೂಲಕ ಸಹಕಾರಿಗಳ ಪರವಾಗಿ ರಾಜೇಂದ್ರ ಕುಮಾರ್ ಅವರು ರಾಮ ಮಂದಿರ ನಿರ್ಮಾಣಕ್ಕೆ ಒಂದು ಕೋಟಿಯ ಒಂದು ಲಕ್ಷದ ಹನ್ನೊಂದು ಸಾವಿರದ ಎಪ್ಪತ್ತೆರಡು ರೂಪಾಯಿಗಳ ನಿಧಿಯನ್ನು ವಿಶೇಷ ಬೆಳ್ಳಿ ಕೊಡದಲ್ಲಿ ಸಮರ್ಪಿಸಿದರು. ಆಶೀರ್ವಚನ ಮಾಡಿದ ಸ್ವಾಮೀಜಿ ಪೇಜಾವರ ವಿಶ್ವಪ್ರಸನ್ನ ತೀರ್ಥರು ರಾಮನಂತಿರಿ, ಸುವರ್ಣ ಲಂಕೆ ಗೆದ್ದರೂ ರಾಮ ತಾಯಿ ನಾಡೇ ಶ್ರೇಷ್ಠ ಎಂದ. ಅದರ ಪ್ರತೀಕವಾಗಿ ಅಯೋಧ್ಯೆಯಲ್ಲಿ ನಿರ್ಮಾಣ ಆಗುತ್ತಿರುವ ರಾಮ ಮಂದಿರವು ದೇಶದ ಸಂಸ್ಕೃತಿಯ ಪ್ರತೀಕ ಎಂದರು.
ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಬೆಳ್ಳಿ ಪ್ರಕಾಶ್ ಮಾತನಾಡಿ, ರಾಜೇಂದ್ರ ಕುಮಾರರು ಸಹಕಾರಿ ಕ್ಷೇತ್ರದ ರಾಜ ಮತ್ತು ಇಂದ್ರ, ಅಲ್ಲದೆ ಕುಮಾರ, ಇನ್ನೂ ನೂರು ವರುಷ ಬಾಳಿ ಸಹಕಾರವನ್ನು ಬಾನಿಗೇರಿಸುತ್ತಾರೆ ಎಂದರು.
ಶ್ರೀನಿವಾಸ ಪೂಜಾರಿ ಬದಲಿಗೆ ಅಧ್ಯಕ್ಷ ಭಾಷಣ ಮಾಡಿದ ಸ್ಥಳೀಯ ಶಾಸಕ ವೇದವ್ಯಾಸ ಕಾಮತರು ಮಂಗಳೂರು ಸುತ್ತಿನಲ್ಲಿ ಒಂದು ಕೋಟಿ ನಿಧಿ ಒಂದೇ ಕಡೆ ಕೊಟ್ಟಿರುವುದು ಇಲ್ಲಿ. ಇದು ನಮ್ಮೆಲ್ಲರ ಭಾಗ್ಯ. ಉತ್ಸಾಹಿಗೆ ಅಸಾಧ್ಯ ಯಾವುದೂ ಇಲ್ಲ ಎನ್ನುವುದಕ್ಕೆ ರಾಜೇಂದ್ರ ಕುಮಾರ್ ಉದಾಹರಣೆ ಎಂದರು.
ನಡುವೆ ನವೋದಯ ಸ್ವಸಹಾಯ ಸಂಘದ ಹಲವು ಸದಸ್ಯರಿಗೆ ಸಮವಸ್ತ್ರ ವಿತರಣೆ ಮಾಡಲಾಯಿತು. ಜೊತೆಗೆ ಹಲವಾರು ಜನರಿಗೆ 25,000ದಿಂದ ರೂ. 1 ಲಕ್ಷದವರೆಗೆ ಧನ ಸಹಾಯವನ್ನು ತೊಂದರೆಯಲ್ಲಿ ಇರುವ ಜನರಿಗೆ ಒದಗಿಸಲಾಯಿತು.
ಆರಂಭದಲ್ಲಿ ದೇವಿಪ್ರಸಾದ್ ಶೆಟ್ಟಿ ಬೆಳಪು ಅವರು ಆರಂಭದಲ್ಲಿ ಎಲ್ಲರನ್ನೂ ಸ್ವಾಗತಿಸಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ಅವರು ಜಾತಿ ಧರ್ಮ ಮರೆತು ನಾವೆಲ್ಲ ಒಂದೇ ಎಂಬಂತೆ ಈ ಕಾರ್ಯಕ್ರಮ ನಡೆಸಲು ರಾಜೇಂದ್ರ ಕುಮಾರ್ ಅವರೇ ಪ್ರೇರಣೆ ಎಂದರು.
ಕ್ಯಾಂಪ್ಕೋದ ಕಿಶೋರ್ ಕುಮಾರ್ ಕೊಡ್ಗಿ, ಹಾಲು ಮಹಾಮಂಡಲದ ರವಿರಾಜ ಹೆಗ್ಡೆ ಕೊಡವೂರು, ಪ್ರಧಾನ ಕಾರ್ಯದರ್ಶಿ ಭಾಸ್ಕರ ಎಸ್. ಕೋಟ್ಯಾನ್, ರವೀಂದ್ರ, ವಿನಯಕುಮಾರ್ ಸೂರಿಂಜೆ ಮೊದಲಾದವರು ಉಪಸ್ಥಿತರಿದ್ದರು. ಕೊನೆಯಲ್ಲಿ ಶಶಿಕುಮಾರ್ ರೈ ಬಾಲ್ಯೊಟ್ಟು ವಂದಿಸಿದರು. ನೂರಾರು ಸಂಘ ಸಂಸ್ಥೆಗಳವರು ರಾಜೇಂದ್ರ ಕುಮಾರ್ ಅವರನ್ನು ಅಭಿನಂದಿಸಿದರು.