ಹಿಂದೂ ಪದ್ದತಿಯ ಪ್ರಕಾರ ಕನ್ಯಾದಾನವು ಮಹತ್ವವಾದದ್ದು ಹಾಗೂ ಅತಿ ಶ್ರೇಷ್ಠವಾದ ದಾನ ಎಂದು ಹೇಳಲಾಗಿದೆ. ಕನ್ಯಾದಾನ ಮಾಡದ ತಂದೆಗೆ ಮೋಕ್ಷವು ದೊರಕದು ಎಂದು ಹೇಳುವಷ್ಟು ಕನ್ಯಾದಾನಕ್ಕೆ ನಮ್ಮ ಪೂರ್ವಜರು ಅಷ್ಟೊಂದು ಮಹತ್ವ ನೀಡಿದ್ದಾರೆ ಅಷ್ಟಕ್ಕೂ ಕನ್ಯಾದಾನ ಎಂದರೇನು ...ಕನ್ಯಾದಾನ ಎರಡು ಪದಗಳಿಂದ ಕೂಡಿದೆ ಕನ್ಯಾ ಎಂದರೆ ಹುಡುಗಿ ದಾನ ಎಂದರೆ ಧಾರೆ ಎರೆಯುವುದು. ವೇದಕಾಲದಿಂದಲೂ ಇಂದಿಗೂ ಕನ್ಯಾದಾನ ಆಚರಣೆ ಬಹು ಪ್ರಾಮುಖ್ಯತೆಯನ್ನು ನೀಡಲಾಗಿದೆ. ಕನ್ಯಾದಾನ ವಧುವಿನ ತಂದೆ ತಾಯಿ ತನ್ನ ಮಗಳನ್ನು ಆನಂದದಿಂದ ಧಾರೆ ಎರೆಯುವರು. ಇದು ಅವರ ಮಹತ್ವವಾದ ಕರ್ತವ್ಯವು ಹೌದು, ತನ್ನ ಮಗಳು ಬೇರೆ ಮನೆಯ ಸೊಸೆಯಾಗುವಳು, ತನ್ನ ಮಗಳ ಜವಾಬ್ದಾರಿಯನ್ನು ಅಳಿಯನಿಗೆ ನೀಡುವರು.
ಒಬ್ಬ ಹೆಣ್ಣು ಮಗಳ ಜೀವನದ ಮಹತ್ತರ ಬದಲಾವಣೆಯ ಘಟ್ಟವಿದು. ವಧುವನ್ನು ಸಾಕ್ಷಾತ್ ಲಕ್ಷ್ಮೀ ಸ್ವರೂಪ ವರನನ್ನು ವಿಷ್ಣುವಿನ ಸ್ವರೂಪವಾಗಿರುತ್ತಾರೆ. ಇತ್ತಿಚಿಗೆ ಕನ್ಯಾದಾನದ ಬಗ್ಗೆ ಒಂದು ಪ್ರಶ್ನೆ ಕೇಳಿ ಬಂತು ಲಕ್ಷ್ಮಿ ಸ್ವರೂಪ ವಧುವಾದರೆ ಅವಳನ್ನು ಧಾರೆ ಎರೆದ ನಂತರ ತಂದೆ ಲಕ್ಷ್ಮೀ ಯನ್ನು ಧಾರೆ ಎರೆದು ಐಶ್ವರ್ಯಹೀನನಾಗುವನಾ ಎಂದು...ನಿಜ ಹೇಳಬೇಕೆಂದರೆ ಲಕ್ಷ್ಮಿ ನಾರಾಯಣನನ್ನು ವಿವಾಹವೆಂಬ ಪವಿತ್ರ ಬಂಧನದಲ್ಲಿ ಕಟ್ಟಿದ ಪುಣ್ಯ ಕನ್ಯಾದಾನ ಮಾಡಿದ ತಂದೆತಾಯಿಗೆ ದೊರೆಯುವುದು ಕನ್ಯಾದಾನದಂತಹ ಪುಣ್ಯ ಎಲ್ಲರಿಗೂ ದಕ್ಕುವುದಿಲ್ಲ ಅವರು ಎಷ್ಟೋ ಜನುಮದ ಕರ್ಮಗಳಿಂದ ಹಗುರಾಗುತ್ತಾರೆಂದು ಹೇಳಲಾಗುತ್ತದೆ. ಹಿಂದಿನವರು ಮದುವೆ ಸಮಾರಂಭಗಳಲ್ಲಿ ಕನ್ಯಾದಾನದ ಮಹೂರ್ತದಲ್ಲಿ ತಪ್ಪದೆ ಹಾಜರಾಗುತ್ತಿದ್ದರು. ಹಾಲು ಹಾಕಿ ಅಕ್ಷತೆ ಹಾಕುವರ, ಈಗೆಲ್ಲ ಬರಿ ರಿಸೆಪ್ಶನ್ಗಳಲ್ಲಿ ಪಾಲ್ಗೊಂಡು ಸಿಗುವ ಪುಣ್ಯ ಕಳೆದುಕೊಳ್ಳುವರು.
ಪುರಾಣ ಕಾಲದಲ್ಲಿ ಕನ್ಯಾದಾನದ ಬಗ್ಗೆ ಎಷ್ಟೊಂದು ಉಚ್ಛ ವಿಚಾರಗಳಿವೆ ಶ್ರೀರಾಮಚಂದ್ರನು ಶಿವ ಧನುಸ್ಸನ್ನು ಮುರಿದು ಸ್ವಯಂವರ ಗೆದ್ದ ಸುಸಂಧರ್ಭದಲ್ಲಿ ಧಶರಥ ಮಹಾರಾಜ ಜನಕನ ಅರಮನೆಗೆ ಬರುವರು. ಜನಕ ಮಹಾರಾಜ ಆದರ ಪೂರ್ವಕವಾಗಿ ಸ್ವಾಗತಿಸುವರು ದಶರಥ ಜನಕರಾಜನನನ್ನು ನಮಸ್ಕರಿಸಿದಾಗ ಜನಕರಾಜನು ಗಲಿಬಿಲಿಗೊಂಡು ಮಹಾರಾಜರೆ ಇದೇನಿದು ನೀವು ನಮ್ಮನ್ನು ನಮಸ್ಕರಿಸುವುದೇ ನೀವು ವರನ ಕಡೆಯವರು ನಾವು ಹೆಣ್ಣಿನ ಕಡೆಯವರು ಎಂದಾಗ ದಶರಥನ ಉತ್ತರ ಹೀಗಿತ್ತು ನಾನು ಯಾಚಕ ನೀವು ದಾನಿ, ಇವರಲ್ಲಿ ಯಾರು ಶ್ರೇಷ್ಠರು? ನಾನು ಮಗನಿಗಾಗಿ ಕನ್ಯೆಗಾಗಿ ಯಾಚಕನಾಗಿರುವೆ, ನೀವು ಕನ್ಯಾದಾನ ಮಾಡುವ ದಾನಿ ಗಂಡು ಹೆತ್ತವ ಯಾಚಕ ಹೆಣ್ಣು ಹೆತ್ತವ ದಾನಿ ಪುಣ್ಯವಂತರಿಗೆ ಮಾತ್ರ ಪುತ್ರಿ ಭಾಗ್ಯ ಮತ್ತು ಕನ್ಯಾದಾನದ ಪುಣ್ಯವೆಂದು ಹೇಳುತ್ತಾರೆ. ಜನಕ ರಾಜನ ಕಣ್ಣ್ಣಲ್ಲಿ ಆನಂದ ಭಾಷ್ಪ, ಎಂಥಹ ಅದ್ಭುತ ಆಲೋಚನೆಗಳು ನಮ್ಮ ಸನಾತನ ಸಂಸ್ಕೃತಿಯಲ್ಲಿ ಅಲ್ಲವೇ.
ಇತ್ತಿಚಿಗೆ ವಿವಾಹದ ನಂತರ ವಧುವನ್ನು ಬಿಳ್ಕೊಡುವ ಸಂಧರ್ಭದಲ್ಲಿ ಹಾಸ್ಯಾಸ್ಪದ ವ್ಯಂಗ್ಯ ಮಾಡುವುದುಂಟು. ಕರುಳ ಕಿತ್ತು ಕೊಡುವ ಕರಳ ಬಳ್ಳಿಯ ಸಂಬಂಧ ಹೆಣ್ಣು ಹೆತ್ತವರಿಗೆ ಮಾತ್ರ ಗೊತ್ತು, ದುಃಖ ಅಣುಕಿಸುವುದು ಅಲಕ್ಷಣವೇ ಸರಿ ಪ್ರತಿಯೊಬ್ಬರ ಭಾವನೆಗಳಿಗೆ ಸ್ಪಂದಿಸುವ ಮನಸ್ಸುಗಳಾಗೊಣ.
Article BY
✍ ಅಂಜಲಿ ಶ್ರೀನಿವಾಸ