ಯುಗಾದಿ ಎನ್ನುತ್ತ ಹೊಸ ವರುಷದ ಶುಭಾಶಯ ಹೇಳುವಾಗ ಭಾರತವು ಸ್ವಾತಂತ್ರ್ಯ ಗಳಿಸಿದ ವೇಳೆ ಇಲ್ಲಿ 68 ಕ್ಯಾಲೆಂಡರ್‌ಗಳಿದ್ದವು ಎಂಬುದನ್ನು ನೆನಪಿಡಬೇಕು.

68 ವರುಷ ಗಣನೆ ಎಂದರೆ 68 ಹೊಸ ವರುಷದ ಮೊದಲ ದಿನ ಎಂದೇ‌ ಲೆಕ್ಕ. ಜಗತ್ತಿನಲ್ಲಿ ಇಂಥ ಸಾವಿರಾರು ವರುಷದ ಲೆಕ್ಕಾಚಾರಗಳು ಇವೆ. ಇಂದು ಹೆಚ್ಚಿನವು ಅಳಿದಿವೆ. ಕಾರಣ ಸಾರ್ವತ್ರಿಕಗೊಂಡ ಜಾರ್ಜಿಯನ್ ಕ್ಯಾಲೆಂಡರ್.

92 ವರುಷಗಳ ಹಿಂದೆ ನಾರಾಯಣ ಗುರುಗಳ ಅಭಿಮಾನಿಗಳು ವಾರ್ಷಿಕ ಶಿವಗಿರಿ ಯಾತ್ರೆ ನಡೆಸುವ ತೀರ್ಮಾನ ತೆಗೆದುಕೊಂಡು ಗುರುಗಳಲ್ಲಿ ವಿನಂತಿಸಿತು. ಅವರ ಮನದಲ್ಲಿ‌ವಿಶು ಇದ್ದರೆ ಗುರುಗಳು ಹೇಳಿದ್ದೇನು? ನಿಮಗೆ ವಿಶು ಹೊಸ ವರುಷವಾದರೆ ಬಹುತೇಕ ಜಗತ್ತು ಯಾವುನ್ನು ಹೊಸ ವರುಷವಾಗಿ ಆಚರಿಸುತ್ತದೆ, ಜನವರಿ 1 ಶಿವಗಿರಿ ಯಾತ್ರೆ‌ ನಡೆಯಲಿ ಎಂದರು. ಅದರಂತೆ ಇಂದಿಗೂ ನಡೆಯುತ್ತದೆ.

ಆದರೆ ಗ್ರೀಕ್, ರೋಮನ್ ನಾಗರಿಕತೆಯಿಂದ ಹಿಡಿದು ಮಧ್ಯ ಕಾಲದವರೆಗೂ ಯೂರೋಪಿನ ಕ್ಯಾಲೆಂಡರ್‌ನಲ್ಲೂ ಹೊಸ ವರುಷದ ದಿನ ಮಾರ್ಚ್ ಆಗಿತ್ತು. ಜಗತ್ತಿನಲ್ಲಿ ಬೇರೆ ಬೇರೆ ಕ್ರಮ, ದಿನಗಣನೆ ಇದ್ದರೂ  ಬಹುತೇಕರ ಹೊಸ ವರುಷದ ದಿನ ವಸಂತ ಮಾಸ ಇಲ್ಲವೇ ಋತುವಿನಲ್ಲಿ ಬರುತ್ತದೆ. ಮುಂದೆ ಕ್ರಿಸ್‌ಮಸ್‌ಗೆ ಯೂರೋಪಿನ ಕ್ಯಾಲೆಂಡರ್ ಹೊಂದಿಸಿದ್ದರಿಂದ ಜಾರ್ಜಿಯನ್ ಕ್ಯಾಲೆಂಡರ್‌ನ ಹೊಸ ವರುಷದ ದಿನ ಚಳಿಗಾಲದಲ್ಲಿ ಬಿತ್ತು. ರಶಿಯಾದಲ್ಲಿ ಜಾರ್ಜಿಯನ್ ಕ್ಯಾಲೆಂಡರ್‌ಗಿಂತ ಹಳೆಯ ಕ್ಯಾಲೆಂಡರ್ ಬಳಕೆ ಇರುವುದರಿಂದ ನವೆಂಬರ್‌ನಲ್ಲಿ ನಡೆದ ಕಮ್ಯೂನಿಸ್ಟ್‌ ಕ್ರಾಂತಿಯನ್ನು ಅಕ್ಟೋಬರ್ ಕ್ರಾಂತಿ ಎಂದು ಕರೆಯುವುದು ರೂಢಿ.

ಕುವೆಂಪುರವರು ದೇವರು ರುಜು ಮಾಡಿದನು ಎಂದು ಪ್ರಕೃತಿಯ ಬಗೆಗೆ ಹಾಡಿದಂತೆ ವಸಂತ ಋತು ನಿಸರ್ಗದತ್ತ ಹೊಸ ವರ್ಷವಾಗಿದೆ. ಹೊಸ‌ ಹೂರಾಜಿ, ಹೊಸ ಫಲರಾಶಿ ಈ ಕಾಲದ ವಿಶೇಷ. ಅಲ್ಲದೆ ಬಿಸು, ಬೈಶಾಕಿ, ಬಿಹು, ವಿಶು ಸೌರಮಾನ ಯುಗಾದಿಯಂತೂ ನಿಸರ್ಗದತ್ತ ಹೂಗಳೊಂದಿಗೆ ತಳುಕು ಹಾಕಿಕೊಂಡಿದೆ. ಚಾಂದ್ರಮಾನ ಯುಗಾದಿ ಆಚರಣೆಯಲ್ಲಿ ಬೆಳೆದ ಹೂವಿಗೆ ಡಿಮಾಂಡಪ್ಪೊ ಡಿಮಾಂಡು.

ಮುಸ್ಲಿಮರ ಹೊಸ ವರುಷವು ಚಂದ್ರನ ದಿನಗಣನೆ‌ ಆಗಿರುವುದರಿಂದ ಪ್ರತಿ ವರುಷ ರಮಜಾನ್ 5- 6 ದಿನ ಮೊದಮೊದಲು ಬರುತ್ತಲೇ ಇರುತ್ತದೆ. ಚಾಂದ್ರಮಾನ ಯುಗಾದಿ ವೈದಿಕರ ಲೆಕ್ಕಾಚಾರ ಆಗಿದ್ದು ವರುಷದ 360ನ್ನು ಸೂರ್ಯನ 365ಕಾಲಿಗೆ ಸರಿಹೊಂದಿಸಲು ಆಗಾಗ ಅಧಿಕ‌ ಮಾಸ ಬರುತ್ತದೆ. ದುರ್ಭಿಕ್ಷದಲ್ಲಿ ಅಧಿಕ ಮಾಸ ಎನ್ನುವುದು ಕನ್ನಡದ ಒಂದು ಗಾದೆ. ಮೋದಿಯವರ ಸರಕಾರವನ್ನು ಕೆಲವರು ಈ ಗಾದೆಗೆ ಹೋಲಿಸುತ್ತಾರೆ.

ಈ ಬಾರಿ ಮಂಗಳೂರಿನಲ್ಲಿ ‌ವೈದಿಕರ ಚಾಂದ್ರಮಾನ ಯುಗಾದಿ ಮತ್ತು ತುಳು ಮತ್ತು ಭಾರತೀಯ ಮೂಲನಿವಾಸಿಗಳ ಸೌರಮಾನ ಯುಗಾದಿಯು ಬೆನ್ಮುಬೆನ್ನಿಗೆ ಬಂದಿದೆ. ನಾನು ಸಣ್ಣವನಿದ್ದಾಗ ಬಿಸು ಏಪ್ರಿಲ್ ‌14ರಂದು ಮತ್ತು ಮಕರ ಸಂಕ್ರಾಂತಿ ಜನವರಿ 14ರಂದೇ ಬರುತ್ತಿತ್ತು. ಅನಂತರ ರಾಷ್ಟ್ರೀಯ ಕ್ಯಾಲೆಂಡರ್ ಎಂದು ಇದನ್ನೂ ಕೆಲವರು ಕುಲಗೆಡಿಸಿದ್ದಾರೆ.

ಸ್ವಾತಂತ್ರ್ಯ ದೊರೆತ ಆರಂಭದಲ್ಲಿ ದೇಶದ 68 ಕ್ಯಾಲೆಂಡರ್‌ಗಳನ್ನು ಪರಿಶೀಲನೆ ಮಾಡಿ ಒಂದು ರಾಷ್ಟ್ರೀಯ ಕ್ಯಾಲೆಂಡರ್ ರಚಿಸಲು ಸಮಿತಿಯೊಂದನ್ನು ಮಹಲನೋಬಿಸ್ ಅಧ್ಯಕ್ಷತೆ ರಚಿಸಲಾಯಿತು. ಅದು ಏನು‌ ಮಾಡಿದರೂ ವೈದಿಕರು ಸೌರಮಾನದೊಂದಿಗೆ ಹೊಂದಿಕೊಳ್ಳಲು ಹಿಂಜರಿದರು. ಅಂತಿಮವಾಗಿ ರಾಷ್ಟ್ರೀಯ ಕ್ಯಾಲೆಂಡರ್ ನೆಪದಲ್ಲಿ ಹಬ್ಬಗಳೆಲ್ಲ ಎರಡೆರಡು ದಿನ ಬರತೊಡಗಿದ್ದಷ್ಟೆ ಲಾಭ. 

-By ಪೇಜಾ