ಸುಮ್ಮನೆ ಹಲುಬುತ್ತಿರುತ್ತೇವೆ ಕೆಲವೊಮ್ಮೆ. ಅಂತಾ ದೊಡ್ಡ ಕಾರಣಗಳೇನು ಇರುವುದಿಲ್ಲ. ಆದರೂ ಪ್ರಪಂಚದಲ್ಲಿ ಭರಿಸಲಾರದಷ್ಟು ದುಃಖ ನಮಗೆ ಮಾತ್ರ ಇರುವುದು ಎಂಬಂತೆ ನಡೆದುಕೊಳ್ಳುತ್ತಿರುತ್ತೇವೆ. ಇನ್ನು ಕೆಲವೊಮ್ಮೆ ವಿಪರೀತ ಕೋಪ, ಸಿಟ್ಟು ಸಿಡುಕು ಮಾಡಿಕೊಳ್ಳುತ್ತೇವೆ. ಅದು ಯಾರದೋ ತಪ್ಪಿಗೆ ನಮಗೆ ನಾವೇ ಕೊಟ್ಟುಕೊಳ್ಳುವ ಶಿಕ್ಷೆ ಎಂದು ಗೊತ್ತಿದ್ದರೂ ಹಾಗೆ ವರ್ತಿಸಿರುತ್ತೇವೆ..! ದೊಡ್ಡ ಮೇಧಾವಿಗಳಂತೆ ಸ್ಟೇಟಸ್ ಗಳನ್ನು ಹಾಕಿಕೊಂಡು, ವೈಯಕ್ತಿಕ ಬೇಜಾರು, ಮುನಿಸುಗಳನ್ನು ಜಗಜ್ಜಾಹೀರು ಮಾಡಿಕೊಂಡು ಶೋಅಪ್ ಮಾಡಿಕೊಳ್ಳುತ್ತೇವೆ..! ಅದರಿಂದ ಆ ಕ್ಷಣಕ್ಕೆ ನಮ್ಮ ಮನಸಿಗೆ ಸಮಾಧಾನ ದಕ್ಕಬಹುದು. ಆದರೆ ನೋಡುವವರ ಎದುರಿಗೆ ತೆರೆದಿಟ್ಟ ನಮ್ಮ ಬದುಕು, ಅವರಿವರ ಕಣ್ಣಲ್ಲಿ ಅಧೋಗತಿಗೆ ಇಳಿದಿರುವುದು ನಮ್ಮರಿವಿಗೆ ಬರುವುದೇ ಇಲ್ಲ..! ದಿನಾ ಸಾಯುವವರಿಗೆ ಅಳೋರ್ಯಾರು ಎಂಬ ವಾತಾವರಣದ ನಡುವೆ ನಾವು ನಮ್ಮ ಮನಸ್ಥಿತಿಗಳನ್ನು ತೋರಿಸಿ, ಸಾಂತ್ವನ ನಿರೀಕ್ಷಿಸಿದರೆ ಫಲವೇನು !? ಇಂತಹ ನಮ್ಮೆಲ್ಲ ಅನುಚಿತ ನಡವಳಿಕೆಗೆ ಕಾರಣವೇನು ? ಅತಿಯಾದ ಮೋಹವ ? ನಿರೀಕ್ಷೆಗಳ ಭಾರವಾ? ಅಥವಾ ವಾಸ್ತವ ಒಪ್ಪಿಕೊಳ್ಳಲಾರದ ದೌರ್ಬಲ್ಯವಾ ? ಹೀಗೆ ಹುಡುಕುತ್ತ ಹೋದರೆ ಮನಸ್ಸು ಅನೇಕ ಕಾರಣಗಳನ್ನು ನಮ್ಮೆದುರು ಇರಿಸುತ್ತದೆ.
ಆದರೆ ಯೋಚಿಸಿ ಕಾರಣಗಳ ಹುಡುಕಿಕೊಂಡು, ನಮ್ಮನ್ನ ನಾವು ತಿದ್ದಿಕೊಳ್ಳುವ ಹೊತ್ತಿಗೆಲ್ಲ ಬಹುಪಾಲು ಜನರ ವಿಷಯದಲ್ಲಿ ಸಮಯ ಮೀರಿ ಹೋಗಿರುತ್ತದೆ ಎನ್ನುವುದೇ ವಿಪರ್ಯಾಸ.! ಬದುಕು ಎಲ್ಲರಿಗೂ ಎರಡನೇ ಅವಕಾಶ ಕೊಡುವುದಿಲ್ಲ ನೋಡಿ..! ಯಾರೋ ಉಳ್ಳವರು ತಮ್ಮಲ್ಲಿರುವ ಒಡವೆ ತೋರಿಸಿಕೊಳ್ಳಲು ಮೈಮೇಲೆ ಹೇರಿಕೊಂಡು ಬಂದರೆ, ನಮ್ಮಲ್ಲಿರುವ ಒಂದು ಸಣ್ಣ ಚಿನ್ನದ ಸರವು ಕಮ್ಮಿ ಅನ್ನಿಸುತ್ತದೆ. ಅವರೆದುರು ನಮಗಿಲ್ಲದ ಜೀವನವನ್ನು ಅವರಿಗೆ ಹೋಲಿಸಿ ನೋಡಿಕೊಂಡು, ನಮ್ಮ ಸಂತೋಷಕ್ಕೆ ನಾವೇ ಕಲ್ಲು ಹಾಕಿಕೊಂಡಿರುತ್ತೇವೆ..! ಅಸಲಿಗೆ ಆ ಶೋಕಿ ಮಾಡುವ ದೊಡ್ಡ ಜನರಿಗಿಂತ, ಇದ್ದುದರಲ್ಲೇ ಜೀವನ ಕಟ್ಟಿಕೊಂಡು ಒಂದು ಚೌಕಟ್ಟಿನೊಳಗೆ ಜೀವಿಸುವವರೇ ಹೆಚ್ಚು ನೆಮ್ಮದಿಯಾಗಿರುತ್ತಾರೆ. ಆದರೆ ನಮಗಿರುವ ನೆಮ್ಮದಿಯನ್ನು ಕೆಡಿಸಿಕೊಳ್ಳಲು ನಾವೇ ಕೆಲವೊಮ್ಮೆ ಹಾದಿ ಹುಡುಕಿಕೊಳ್ಳುತ್ತೇವೆ..! ಮತ್ತೊಬ್ಬರ ಜೀವನವನ್ನು ಕಂಡು ಅವರಂತೆ ನಾವಿಲ್ಲವಲ್ಲ ಎಂದುಕೊಳ್ಳುತ್ತಲೇ ನಮ್ಮ ಖುಷಿಯನ್ನು ಹಳ್ಳಕ್ಕೆ ತಳ್ಳಿರುತ್ತೇವೆ.
ಬದುಕು ಎಲ್ಲರಿಗೂ ಒಂದೇ ಆಗಿರುವುದಿಲ್ಲ ನಿಜ. ಆದರೆ ಪ್ರತಿಯೊಬ್ಬರಿಗೂ ಅವಕಾಶಗಳನ್ನು ಕೊಡುತ್ತದೆ. ಅದನ್ನು ಸರಿಯಾಗಿ ಬಳಸಿಕೊಂಡು, ಬೆಳೆಯುವ ಕಲೆ ಗೊತ್ತಿಲ್ಲದವರು, ಹಾಗೆ ಪರರಿಗೆ ತಮ್ಮನ್ನು ಹೋಲಿಸಿಕೊಂಡು ನರಳುವರು. ಕೆಲವರಿಗೆ ಜೀವನದಲ್ಲಿ ಎಲ್ಲವೂ ಸುಲಭವಾಗಿ ಸಿಗುತ್ತದೆ. ಮತ್ತೆ ಕೆಲವರು ತಮ್ಮ ಪರಿಶ್ರಮ, ಪ್ರಾಮಾಣಿಕ ಪ್ರಯತ್ನಗಳಿಂದ ತಮಗೆ ಬೇಕಾದ್ದನ್ನು ದಕ್ಕಿಸಿಕೊಳ್ಳುತ್ತಾರೆ. ಅವರಂತೆ ನಾವಿಲ್ಲವಲ್ಲ ಎಂದು ಕೊರಗುವುದಕ್ಕಿಂತ, ಅವರು ಆ ಸ್ಥಾನಕ್ಕೇರಲು ಎಷ್ಟು ಕಷ್ಟಪಟ್ಟಿರಬಹುದು, ತಮ್ಮ ಜೀವನದ ಎಷ್ಟೋ ಅಮೂಲ್ಯ ಕ್ಷಣಗಳನ್ನು ಬಲಿ ಕೊಟ್ಟಿರಬಹುದು ಎನ್ನುವ ನಿಟ್ಟಿನಲ್ಲಿ ಯೋಚಿಸಿದರೆ ಒಳಿತೇನೋ. ಈ ಜಗತ್ತಿನಲ್ಲಿ ಎಲ್ಲವೂ ಇರುವಂತ ಪರಿಪೂರ್ಣ ವ್ಯಕ್ತಿಗಳು ಅಂತೇನು ಇರುವುದಿಲ್ಲ. ಎಲ್ಲರಲ್ಲೂ ಏನಾದರೊಂದು ಕೊರತೆ ಇದ್ದೆ ಇರುತ್ತದೆ. ಬೇಕಾದಷ್ಟು ಆಸ್ತಿ ಅಂತಸ್ತು ಇರುವಂತವನು ಕೂಡ, ಹಿಡಿ ನೆಮ್ಮದಿಗಾಗಿ ಎಲ್ಲೆಲ್ಲೋ ಅಲೆಯಬಹುದು. ಏನೇನೂ ಇಲ್ಲದೆಯೂ ಒಬ್ಬ ಯಾವುದೋ ಜಗುಲಿಯ ಮೇಲೆ ಸಿಕ್ಕಷ್ಟು ಜಾಗದಲ್ಲಿ ನೆಮ್ಮದಿಯಿಂದ ನಿದ್ರಿಸುವರಿರುತ್ತಾನೆ..! ಎಲ್ಲವೂ ಅವರವರ ಮನಸ್ಥಿತಿಗೆ ತಕ್ಕಂತೆ, "ಯದ್ಭಾವಂ ತದ್ಭವತಿ" ಅಲ್ಲವೇ ? ಬಡತನ ಎನ್ನುವುದು ನಾವು ಸಂಪಾದಿಸಿದ ಆಸ್ತಿಯಲ್ಲಲ್ಲ, ಮನಸ್ಥಿತಿಯಲ್ಲಿರುವುದು.
ಮಿತಿಗಳಿರುವುದು ಬಾಹ್ಯಕ್ಕೆ, ಅಂತರಂಗದೊಳಗಿನ ಆನಂದಕ್ಕಲ್ಲ. ಅಸಲಿಗೆ ಮಿತಿಗಳಿಲ್ಲದ ಜೀವನ ಸೂತ್ರ ಹರಿದ ಗಾಳಿಪಟದಂತೆ ಎತ್ತೆತ್ತಲೋ ಸಾಗಿ ಬದುಕಿನ ಹಳಿ ತಪ್ಪಿಸಬಹುದು, ಅಥವಾ ಅತಿಯಾದ ಮಿತಿಗಳು ನಮ್ಮೊಳಗಿನ ಆತ್ಮವಿಶ್ವಾಸವನ್ನೇ ಕುಂದಿಸಬಹುದು. ಈ ಎಲ್ಲ ಸುತ್ತಲಿನ ಸಂಕೋಲೆಗಳ ನಡುವೆ ಮನದಿ ಸಮತ್ವ ಸಾಧಿಸಿಕೊಂಡು ಬದುಕನ್ನು ಸುಂದರವಾಗಿ ಸಿಂಗರಿಸಿಕೊಳ್ಳುವುದು ನಮ್ಮ ಕೈಯಲ್ಲೇ ಇರುವ ಆಯ್ಕೆ.. ಏನಂತೀರಿ ?
- ಪಲ್ಲವಿ ಚೆನ್ನಬಸಪ್ಪ