ಪೇರೂರಿನ ಒಂದು ಕಾಲದ ಹೆದ್ದಾರಿ ನಾಶವಾಗಿದೆ. ಆಧುನಿಕ ಹೆದ್ದಾರಿ ಹತ್ತಿರದಲ್ಲೇ ಹಾದು ಹೋಗಿದೆ. ಆದರೆ ಒಂದು ದಶಕದಿಂದ ಮತ್ತೆ ಶನಿವಾರ, ಭಾನುವಾರ ಪೇರೂರಿಗೆ ವಾಹನಗಳ ಓಡಾಟ ಅಧಿಕರಿಸಿದೆ. ಪ್ರೇಮಿಗಳ ಬೈಕ್ ದಾಳಿ, ಕಾರು ದಾಳಿ ನಡೆದಿದೆ.

ಇಲ್ಲಿ 2008ರಲ್ಲಿ ಒಂದು ತೂಗು ಸೇತುವೆ ಆಗಿದ್ದು ಅದಕ್ಕೆ ಪ್ರೇಮಿಗಳ, ಹೋಗಿಗಳ ಲಗ್ಗೆ ಭಾರೀ ಮಾರಾಯರೆ. ಇದು ಒಬ್ಬ ವ್ಯಕ್ತಿಯ ಸಾಹಸ. ಅವರು ವಿಶ್ವನಾಥ ಸನಿಲ್. 

60 ವರುಷಗಳ ಹಿಂದೆ ಶಾಲೆ ಬೇಡ, ಕೋಣ ಮೇಯಿಸು ಎಂದ ಅಜ್ಜನಿಗೆ ಬೆನ್ನು ಹಾಕಿ ಬೊಂಬಾಯಿಗೆ ಓಡಿದವರು ಈ ಸನಿಲ್. ಅಲ್ಲಿ ಹಲವು ಕೆಲಸ, ಕೊನೆಗೆ ಕೈ ಹಿಡಿದದ್ದು ಡೈ ಮೇಕಿಂಗ್. 

30 ವರುಷದ ಹಿಂದೆ ಬೆಂಗಳೂರಿಗೆ ಬಂದು ಸ್ವಂತ ಉದ್ಯಮ ಆರಂಭಿಸಿದರು. ಮೊದಲು ತಾನೊಬ್ಬನೆ ಕೆಲಸ ಮಾಡಿದರು. ಮುಂದೆ 40 ಜನರು ಕೆಲಸ ಮಾಡುವ ಸಂಸ್ಥೆ ಆಯಿತು ಅದು. ಈಗ ಲೇಸರ್ ಕಟಿಂಗ್ ಬಂದಿರುವುದರಿಂದ ಡೈ ಮೇಕಿಂಗ್ ದಾರಿ ಬದಲಾಗಿದೆ.

25 ವರುಷಗಳ ಹಿಂದೆ ನಾನು ಬೆಂಗಳೂರಿನಲ್ಲಿ ಸನಿಲ್‌ರನ್ನು ಭೇಟಿಯಾದಾಗ ನನ್ನದು ನಿಮ್ಮೂರು ಎಂದರು. ಆದರೆ ಅವರಿಗೆ ತನ್ನ ಮನೆಯ ಹೆಸರು  ನೆನಪಿರಲಿಲ್ಲ.

2006ರಲ್ಲಿ ಒಮ್ಮೆಗೇ ಊರಿಗೆ  ಬಂದರು. ತಾಯಿ ಮನೆಯಲ್ಲಿ ಕೆಲವು ಅಭಿವೃದ್ಧಿ ಮಾಡಿ, ಕೊನೆಗೆ ಈ ಸೇತುವೆ ಕಟ್ಟಿದರು.

ತಾಯಿ ಅಜ್ಜಿ ಪಿಜ್ಜಿಯರಾದ ಬೊಗ್ಗಿ, ಬಡ್ಡು, ರಾಮು ಪೂಜಾರ್ದಿಯರ ನೆನಪಿಗೆ ಈ ಸೇತುವೆ ಕಟ್ಟಿದ್ದಾರೆ.

ಸ್ವಲ್ಪ ತಡವಾಯಿತು. ಈಗ ಹಳ್ಳಿಗಳಲ್ಲಿ ರಸ್ತೆ ಮತ್ತು ರಿಕ್ಷಾ ಸವಾರಿ ಜೋರು. ಆದ್ದರಿಂದ ಈ ತೂಗುಸೇತುವೆ ಬಳಸುವವರು ಕೆಲವರು. ಆದರೆ ನೋಡಲು ಬರುವವರು ಹಲವರು.


-By ಪೇಜಾ