ಮoಗಳೂರಿನ ಕೇಂದ್ರ ಮಾರುಕಟ್ಟೆಯು 1965ರಲ್ಲಿ ಉದ್ಘಾಟನೆಯಾಗಿತ್ತು. ನಗರದ ಸುತ್ತಲಿನ ಹಲವು ಗ್ರಾಮಗಳಲ್ಲಿ ರೈತರು ಬೆಳೆಸಿದ ಹಲವು ಬಗೆಯ ಕೃಷಿ ಉತ್ಪನ್ನಗಳನ್ನು ಈ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದ್ದರು. ಎತ್ತಿನಗಾಡಿ ಮೋಟರು ವಾಹನಗಳಲ್ಲಿ ತಂದ ಕೃಷಿ ಉತ್ಪನ್ನಗಳನ್ನುರೈತರುಸಗಟು ವ್ಯಾಪಾರಿಸ್ಥರಿಗೂ ಕಾಲು ದಾರಿ, ಬಸ್ಸುಗಳಲ್ಲಿ ತಂದ ಉತ್ಪನ್ನಗಳನ್ನು ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡುವ ಅವಕಾಶವನ್ನು ನಗರ ಆಡಳಿತ ಒದಗಿಸಿತು. ಜನರಲ್ಲಿ ದುಡ್ಡಿನ ಚಲಾವಣೆ ತುಂಬಾ ಕ್ಷೀಣವಾಗಿತ್ತು. ಖರೀದಿಸಿದ, ಮಾರಾಟ ಮಾಡಲು ಶೇಖರಿಸಿದ್ದ ಉತ್ಪನ್ನಗಳಲ್ಲಿ ಕೆಲಭಾಗ ಬಾಡಿ, ಕೊಳೆತು ತ್ಯಾಜ್ಯವಾಗುತ್ತಿತ್ತು. ಈ ಕಾರಣದಿಂದ ಮಾರುಕಟ್ಟೆ ಸುತ್ತಲು ಸಾಕು ದನ, ಹಂದಿಗಳು ಕಂಡು ಬರುತ್ತಿದ್ದವು. ಈ ಕಾರಣದಿಂದ ಅಂದು ತರಕಾರಿ ವ್ಯಾಪಾರ ಲಾಭದಾಯಕ, ಆಕರ್ಷಕವಾಗಿ ಇರಲಿಲ್ಲ, ಜನರ ಗಮನವು ಅಕ್ಕಿ, ಅನ್ನದ ಕಡೆಗೆ ಮಾತ್ರ ಇತ್ತು. ಶ್ರಮಪಟ್ಟು ಗಳಿಸಿದ ದುಡ್ಡನ್ನು ವೆಚ್ಚ ಮಾಡುವಾಗ ಎಚ್ಚರಿಕೆ ವಹಿಸುತ್ತಿದ್ದರು. ಖರೀದಿ ಸಮಯದಲ್ಲಿ ಅಲ್ಪ ಮೊತ್ತಕ್ಕಾಗಿ ಚೌಕಾಸಿ ಮಾಡುವುದು ಸಾಮಾನ್ಯವಾಗಿತ್ತು.

ಇಂತಹ ಪರಿಸ್ಥಿತಿ ಇರುವಾಗ 1975 ಎಪ್ರಿಲ್ ತಿಂಗಳಲ್ಲಿ ನನ್ನ 13ನೇ ವಯಸ್ಸಿನಲ್ಲಿ ಮಾರುಕಟ್ಟೆಯಲ್ಲಿ ವ್ಯಾಪಾರಿಯಾಗಿ ಸೇರಿಕೊಂಡೆನು. ಕಾಲಿಗೆ ಚಪ್ಪಲಿ ಒಳ ಉಡುಪು ಇಲ್ಲದ ಆ ಸಮಯದಲ್ಲಿ ನಗರದ ಜನರು, ಗ್ರಾಹಕರಲ್ಲಿ ವ್ಯವಹರಿಸಲು ಮುಜುಗರವಾಗುತ್ತಿತ್ತು. ಆ ವರ್ಷದ ಎರಡು ಘಟನೆಗಳು ನೆನಪಿವೆ. ಸೆಕೆಗಾಲದ ಕೊನೆಯಲ್ಲಿ ಕಾರ್ಕಳದಲ್ಲಿ ಏಕಶಿಲೆಯಲ್ಲಿ ಕೆತ್ತಿದ ಗೋಮಟೇಶ್ವರ ವಿಗ್ರಹವು ಮಂಗಳೂರು ರೈಲು ನಿಲ್ದಾಣದಲ್ಲಿ ಇರಿಸಲಾಗಿತ್ತು. ರೈಲು ಎಂಬ ಶಬ್ದವನ್ನು ಕೇಳಿಸಿಕೊಂಡಿದ್ದವನಿಗೆ ರೈಲು ನಿಲ್ದಾಣ, ನಿಂತಿದ್ದ ರೈಲು ನೋಡುವ ಅವಕಾಶ ಸಿಕ್ಕಿತ್ತು. ಇನ್ನೊಂದು ಘಟನೆ ದೇಶದಲ್ಲಿ ತುರ್ತು ಪರಿಸ್ಥಿತಿ. ರಾಜಕೀಯ ಕಾರಣಗಳಿಂದಾಗಿ ಆಂದಿನ ಪ್ರಧಾನಿ ಶ್ರೀಮತಿ ಇಂದಿರಾಗಾoಧಿಯವರು ಜೂನ್ ತಿಂಗಳಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಿದ್ದರು. ಮರುದಿನ ದಿನಪತ್ರಿಕೆ ಮುದ್ರಣವಾಗಿರಲಿಲ್ಲ. ದೇಶದಲ್ಲಿ ಏನೋ ನಿಗೂಢ ಸಂಭವಿಸುತ್ತಿದೆ ಎಂದು ಕೆಲವರು ಪಿಸುಮಾತಿನಲ್ಲಿ ಮಾತಾಡುತ್ತಿದ್ದರು. ರಸ್ತೆಗಳಲ್ಲಿ ಜನ ಸಂಚಾರ ತೀರಾ ಕಡಿಮೆಯಾಗಿತ್ತು. ಸಾಯಂಕಾಲ ಅಂಗಡಿಗಳು ಬೇಗನೆ ಮುಚ್ಚುತ್ತಿದ್ದವು. ಹಲವರು ಏನೋ ಸಂಭವಿಸಲಿದೆ ಎಂದು ಆತಂಕದಲ್ಲಿರುವುದು ಕಾಣುತ್ತಿತ್ತು. ಕೇರಳ ಕಡೆಯವರು 2 ಕಿಲೋ ಅಕ್ಕಿ ಪೊಟ್ಟಣಗಳನ್ನು ಧರಿಸಿದ ಉಡುಪಿನಲ್ಲಿ ಟೊಮೆಟೊ ಬುಟ್ಟಿಗಳಲ್ಲಿ ಆಡಗಿಸಿಕೊಂಡು ಒಯ್ಯುತ್ತಿದ್ದರು. 20 ತಿಂಗಳ ನಂತರ ಲೋಕಸಭೆ ಚುನಾವಣೆ ಘೋಷಣೆಯ ನಂತರ ಹಲವು ಪತ್ರಿಕೆಗಳಲ್ಲಿ ತುರ್ತು ಪರಿಸ್ಥಿತಿ ಕಾಲದ ಕರಾಳತೆಯನ್ನು ಓದಿದ ಮೇಲೆ ತುರ್ತು ಪರಿಸ್ಥಿತಿ ಏನೆಂದು ತಿಳಿದು ಬಂತು.

ಆ ಕಾಲದಲ್ಲಿ ಜನರ ಆರೋಗ್ಯ ಸ್ಥಿತಿಯು ನಾಜೂಕಿನದಾಗಿತ್ತು. ಆನೆಕಾಲು ರೋಗ ಇದ್ದವರು ನಗರದಲ್ಲಿ ಕಾಣಿಸುತ್ತಿದ್ದರು. ಬೇಸಿಗೆಯಲ್ಲಿ ನೀರಿನ ಅಭಾವ ಇರುತ್ತಿತ್ತು. ಆ ಕಾಲದಲ್ಲಿ ಅರಸಿನ ಕಾಯಿಲೆ (ಮಂಜಲ್‌ರೋಗ)ಗೆ ಮದ್ದು ಎಳೆಯ ಸೋರೆಕಾಯಿ, ರಕ್ತಬೇದಿ ಕಾಯಿಲೆಗೆ ಒಣ ದಾಳಿಂಬೆ ಸಿಪ್ಪೆ ಹುಡುಕಿಕೊಂಡು ಜನರು ಬರುತ್ತಿದ್ದರು. ಆ ಸೀಜನ್ ಅವೆರಡೂ ಲಭ್ಯ ಇರುತ್ತಿರಲಿಲ್ಲ ಆಗಿನ್ನೂ 10,5,3 ಸೆಂಟ್ಸ್ ಸರಕಾರಿ ನಿವೇಶನಗಳು ಆರಂಭವಾಗಿರಲಿಲ್ಲ, ಹಲವು ಕುಟುಂಬಗಳು ಬಾಡಿಗೆ ಮನೆಗಳಲ್ಲಿ ವಾಸ ಮಾಡುತ್ತಿದ್ದರು. ದುಡಿಮೆಯ ಬಹುಪಾಲು ಮನೆ ಬಾಡಿಗೆ, ಉರುವಲು ಮತ್ತು ಅನ್ನಕ್ಕಾಗಿ ವೆಚ್ಚ ಆಗುತ್ತಿತ್ತು.

ಹಂಚು, ಗೇರು ಬೀಜ ಕಾರ್ಖಾನೆ, ಬೀಡಿ ಉದ್ಯಮದಲ್ಲಿ ಇದ್ದವರಿಗೆ ಹಬ್ಬದ ದಿನಗಳಲ್ಲಿ ‘ಬೋನಸ್’ ಸಿಗುತ್ತಿತ್ತು. ಆ ಸಮಯದಲ್ಲಿ ಕೈಗಳಿಗೆ ಹೊರಲು ಸಾಧ್ಯವಾದಷ್ಟು  ಭಾರದ ತೆಂಗಿನಕಾಯಿ, ಗೆಣಸುಗಳನ್ನು ಜನರು ಕೊಂಡು ಹೋಗುತ್ತಿದ್ದರು. ಆಹಾರ ಸೇವನೆ ಅಲ್ಪ ಪ್ರಮಾಣದಲ್ಲಿತ್ತು. ಆ ಕಾಲದಲ್ಲಿ ಇದ್ದ ಒಂದು ನಾನ್ನುಡಿ ‘ಹೊಟ್ಟೆ ತುಂಬಾ ಉಣ್ಣಲು ಇಂದು ಆಷ್ಟಮಿ ಹಬ್ಬವೆ?’

1974ನೇ ವರ್ಷದಲ್ಲಿ ರಾಜ್ಯದಲ್ಲಿ ಭೂ ಸುಧಾರಣೆ ಕಾಯ್ದೆ ಜಾರಿ ಆಗಿತ್ತು. ಅವಿಭಾಜಿತ ಜಿಲ್ಲೆಯಲ್ಲಿ ಈ ಕಾನೂನು ಪರಿಣಾಮಕಾರಿಯಾಗಿ ಜಾರಿ ಆಗಿ ಸಾವಿರಾರು ಗೇಣಿದಾರರು ಭೂ-ಮಾಲಿಕತ್ವವನ್ನು ಪಡೆದರು. ಈ ಕಾಯ್ದೆಯ ತಿರುಳನ್ನು ರೈತರಿಗೆ ಕನ್ನಡ ತುಳು ಕೊಂಕಣಿ ಭಾಷೆಯಲ್ಲಿ ತಿಳಿ ಹೇಳಿದ್ದೆ ಇಬ್ಬರು ಮಹಾನಿಯರನ್ನು ರೈತರು, ಜನರು ಸದಾ ಸ್ಮರಿಸಬೇಕಿದೆ ಒಬ್ಬರು ದಿವಂಗತ ವಕೀಲರು ಶ್ರೀ ಶಿರ್ತಾಡಿ ವಿಲಿಯಂ ಪಿಂಟೊ ಇನ್ನೊಬ್ಬರು ವಂದನಿಯ ಮಾರ್ಕ್ ವಾಲ್ಡರ್.

ಈ ಕಾಯ್ದೆಯಿಂದಾಗಿ ರೈತರಿಗೆ ಗೇಣಿಗೆ ಪಡೆದುಕೊಂಡಿದ್ದ ಹೊಲಗಳು, ಹೊಲಗಳ ಸಮೀಪ ಇದ್ದ ತೆಂಗು ಕಂಗುಗಳು ಲಭಿಸಿದವು. ನೀರು ಲಭ್ಯವಿದ್ದ ಸ್ಥಳಗಳಲ್ಲಿ ಬೇಗನೆ ಕೈಗೆ ದುಡ್ಡು ಸಿಗುವ ತರಕಾರಿಗಳನ್ನು ಬೆಳೆಸಲು ರೈತರು ಆರಂಭಿಸಿದರು. ನಗರದಲ್ಲಿ ಹಬ್ಬದ ದಿನಗಳಲ್ಲಿ ಹರಿವೆದಂಟು ಜೋರಾಗಿ ಮಾರಾಟ ಆಗುತ್ತಿತ್ತು. ಚೀಲಗಳಲ್ಲಿ ತುಂಬುವಷ್ಟು ದಂಟುಗಳನ್ನು ಗ್ರಾಹಕರು ಒಯ್ಯುತ್ತಿದ್ದರು. ಕಳಲೆಯನ್ನು ಕದ್ದುಮುಚ್ಚಿ ಮಾರಾಟ ಮಾಡಬೇಕಿತ್ತು. ಕೆಲ ಬಗೆಯ ತರಕಾರಿಗಳು ಕಿಲೊ ಗ್ರಾಂ ಲೆಕ್ಕದಲ್ಲಿ ಇತ್ತು. ಸಗಟು ವ್ಯಾಪಾರವು ಮಣಗಳಲ್ಲಿ ಇತ್ತು.

ಆ ಕಾಲದಲ್ಲಿ ಕೊಲ್ಲಿ ರಾಷ್ಟçಗಳಲ್ಲಿ ಉದ್ಯೋಗ ಅವಕಾಶವು ಆರಂಭವಾಗಿತ್ತು. ನೆರೆಯ ಕಾಸಾರಗೋಡು ಪರಿಸರದಲ್ಲಿ ತರಕಾರಿ ಬೇಡಿಕೆ ಅಧಿಕವಾಗಿತ್ತು. ಅಲ್ಲಿನ ವ್ಯಾಪಾರಿಗಳು ಮಾರುಕಟ್ಟೆಗೆ ಬರಲು ತೊಡಗಿದರು. ಓಣಂ ಹಬ್ಬದ ಸಮಯದಲ್ಲಿ ಹಾಗಲಕಾಯಿಯ ಬೇಡಿಕೆ ಅಧಿಕವಾಗಿತ್ತು.

ಇಲ್ಲಿ ಒಂದಿಷ್ಟು ವಿವರಣೆ ಬೇಕಿದೆ, ರೈತರು ತಲೆಹೊರೆಯಲ್ಲಿ ತಂದ ತರಕಾರಿಗಳು ಎಣಿಕೆ ರೂಪದಲ್ಲಿ ಮಾರುತ್ತಿದ್ದರು. ಕೇರಳದಲ್ಲಿ ಆಗಲೇ ಕಿಲೊಗ್ರಾಂ ಬಳಕೆಯಲ್ಲಿತ್ತು. ತೂಕ ಮಾಡುವ ಅವಕಾಶ ಮತ್ತು ಆಲ್ಪ ಸ್ವಲ್ಪ ಮಲೆಯಾಳಿ ಭಾಷೆ ತಿಳಿದಿದ್ದ ಕಾರಣದಿಂದಾಗಿ ಮಧ್ಯವರ್ತಿ ವ್ಯಾಪಾರಿ ಆಗಿ ಮುಂದಿನ 45 ವರ್ಷಗಳಷ್ಟು ಕಾಲ ವರ್ಷದ 365ದಿನಗಳಲ್ಲೂ ಬೆಳಗಿನ ಜಾವದಿಂದ ಆರಂಭಿಸಿ ರಾತ್ರಿ 7,8 ಘಂಟೆಗಳವರೆಗೆ ದುಡಿದ ಸಂತೃಪ್ತಿ ಇದೆ. ನೂರಾರು ಜನ ಎಲ್ಲಾ ಧರ್ಮದ ಹಿತೈಶಿಗಳೂ ಪ್ರತಿಸ್ಪರ್ಧಿಗಳೂ, ಶತ್ರುಗಳೂ, ವಂಚಕರು ಇದ್ದ ಈ ಪರಿಸರದಲ್ಲಿ 2020 ಎಪ್ರಿಲ್ ತಿಂಗಳವರೆಗೆ ದುಡಿದು ಬಳಲಿದೆ. ಈಗ ಈ ಪರಿಸರ ನೆನಪು ಮಾತ್ರ.

ಬಾಲ್ಯದಲ್ಲಿ ರೈತ ಕುಟುಂಬದಲ್ಲಿ ಆಹಾರದ ಅಭಾವವನ್ನು ಆರ್ಥಿಕ ಆಡಚಣೆಯನ್ನು ಹತ್ತಿರದಿಂದ ನೋಡುವ ಅವಕಾಷ ದೊರಕಿತ್ತು. ಮಾನವನಾಗಿ ಹುಟ್ಟಿದ್ದು ಆತನ ತಪುö್ಪ ಅಲ್ಲ, ಬಡತನದಲ್ಲಿ ಸಾಯುವುದು ತಪುö್ಪ ಎಂಬ ನುಡಿಯನ್ನು ಓದಿ. ಗಳಿಸಿದ ದುಡ್ಡನ್ನು ಉಳಿತಾಯ ಮಾಡಲು ಪ್ರೇರಣೆ ನೀಡಿತು ಅನಾದಿ ಕಾಲದಿಂದಲೂ ದೇಶದ ಅನ್ನದಾತ ಬಡವನಾಗಿಯೇ ಇದ್ದಾನೆ ಎಂಬುದನ್ನು ಅರಿತ ಮೇಲೆ ರೈತರಿಗೆ ಆರ್ಥಿಕ ಭದ್ರತೆ ನೀಡಲು ಸಾಧ್ಯವಾಗುವ ಹರಿವೆ, ಬಸಳೆ, ಸ್ಥಳೀಯ ಮುಳ್ಳು ಸೌತೆ ಕ್ರಮಬದ್ಧವಾಗಿ ಬೆಳೆಸುವಂತೆ ಪ್ರೇರಿಪಿಸಲು ಸಾಧ್ಯವಾಯಿತು. ಹರಿವೆ ಸೊಪ್ಪಿನ ಬೀಜವನ್ನು ರೈತರಿಂದ ಖರೀದಿಸಿ ರೈತರಿಗೆ ಮಾರುವ ಅವಕಾಶ ಬಳಸಿಕೊಂಡೆ. ಜಿಲ್ಲೆಯಲ್ಲಿ ವರ್ಷಕ್ಕೆ 4 ಸಾವಿರ ಮಿ.ಮೀ ಮಳೆ ಇದ್ದರೂ ಬೇಸಿಗೆಯಲ್ಲಿ ನೀರಿನ ಕೊರತೆ ನೀಗಿಸಲು ಮಳೆನೀರು ಕೊಯ್ಲು ವಿಧಾನವನ್ನು ರೈತರಿಗೆ ತಲುಪಿಸಲು ಪ್ರಯತ್ನಿಸಿದೆ. ಹಗಲು ರಾತ್ರಿ ದುಡಿಯುತ್ತಿದ್ದ ರೈತರಿಗೆ ನಗರದಲ್ಲಿ ಆಗುತ್ತಿದ್ದ ಶೋಷಣೆ ತಡೆಯಲು ಮಹಿಳಾ ತಲೆಹೊರೆ ಮಾರಾಟಗಾರರ ಜೊತೆಗೆ ಕೈ ಜೋಡಿಸಲು ಅವಕಾಶ ಲಭಿಸಿತು. ರೈತರು ಬೆಳೆದ ಕೃಷಿ ಉತ್ಪನ್ನಗಳನ್ನು ಕೀಟಾನಾಶಕದ ವಿಷದ ಕಾರಣದಿಂದ ರೈತರು ಸೇವಿಸಲು ನಿರಾಕರಿಸುತ್ತಾರೆ ಎಂದು ತಿಳಿದ ನಂತರ ಸಾವಯವ ಕೃಷಿ ವಿಧಾನ ಜನಪ್ರಿಯ ಆಗುವಂತೆ ಮಾಡಲು ಸಹಾಯಕನಾದೆ. ವರ್ಷದ ಕೆಲಕಾಲ ಲಭ್ಯವಿದ್ದ ಸ್ಥಳೀಯ ಹುಣಸೆ ಹುಳಿ ಕೆಲವು ತಿಂಗಳುಗಳ ಕಾಲ ಗ್ರಾಹಕರಿಗೆ ಲಭಿಸುವಂತಹ ವ್ಯವಸ್ಥೆ ಮಾಡಿಕೊಂಡೆ. ಮನೆಮದ್ದು ಲೋಳೆಸರ, ತುಳಸಿ, ಕರಿಬೇವು ಒಂದೆಲಗ ಪುನರ್ಪುಳಿ, ಎಸಳ್ ಹುಳಿ, ಅರಸಿನ ಮುಂತಾದವುಗಳು ಬೆಳೆಗಾರರಿಗೆ ಮಾತ್ರ ಲಭ್ಯವಿರುತ್ತಿದ್ದವು. ಇವುಗಳಿಗೂ ಮಾರಾಟ ಅವಕಾಶ ನೀಡಲು ಸಾಧ್ಯವಾಯಿತು.

ಇಲ್ಲಿ ಕೆಲ ಕುತೂಹಲಭರಿತ, ಚಿಂತಾಜನಕ ವಿಷಯಗಳನ್ನು ಹಂಚಿಕೊಳ್ಳಬೇಕಿದೆ. ಒಬ್ಬಾಕೆ ತಾಯಿ ನಾಲ್ವರು ವಯಸ್ಕ ಹೆಣ್ಣು ಮಕ್ಕಳು ಇದ್ದ ಕುಟುಂಬದಲ್ಲಿ ಆದಾಯ ತೀರಾ ಕಡಿಮೆ ಇತ್ತು. ಕಳಲೆಯನ್ನು ಕೊಚ್ಚಿ ಪೊಟ್ಟಣವನ್ನು ಮಾರಾಟ ಮಾಡಿದರೆ ಸಂಪಾದನೆ ಮಾಡಬಹುದೆಂದು ಅರಿತರು. ನಂತರ ಇವರು ಬೆಳಿಗ್ಗೆ 2 ಘಂಟೆಗೆ ದುಡಿಮೆ ಆರಂಭಿಸಿ ಮೂರು ನಾಲ್ಕು ಘಂಟೆ ದುಡಿದು ದಿನಕ್ಕೆ 5 ಸಾವಿರದಷ್ಟು ಗಳಿಸಲು ಆರಂಭಿಸಿದರು. ನಾಲ್ವರು ಮಕ್ಕಳು ಕೂಡಾ ಉನ್ನತ ಶಿಕ್ಷಣವನ್ನು ಪಡೆದರು.

ಇನ್ನೊಬ್ಬ ರೈತ ಕೈಯಲ್ಲಿದ್ದ ದುಡ್ಡನ್ನು ಪೈನಾನ್ಸ್ ಕಂಪೆನಿಯಲ್ಲಿ ಹೂಡಿಕೆ ಮಾಡಿ ಎಲ್ಲವನ್ನು ಕಳೆದುಕೊಂಡು ಚಿಂತಾಜನಕವಾಗಿದ್ದ ಪರಿಸ್ಥಿತಿಯಲ್ಲಿ ಲಾಭದಾಯಕವಾಗಿ ಬಸಳೆ ಬೆಳೆಯುವುದನ್ನು ಕಲಿತು ವಾರಕ್ಕೆ 25 ಸಾವಿರ ಮೊತ್ತದ ಬಸಳೆಯನ್ನು ಮಾರಾm ಮಾಡಲು ಅವಕಾಶ ಲಭಿಸಿತು. ವರ್ಷದ 10 ತಿಂಗಳುಗಳಷ್ಟು ಕಾಲ ನಿತ್ಯವೂ ಮಾರಾಟ ಮಾಡುವ ವ್ಯವಸ್ಥೆ ಮಾಡಿಕೊಂಡಿದ್ದರು. ಒಬ್ಬಾಕೆ ಓದುತ್ತಿದ್ದ ಮಗನಿಗೆ ಪೆನ್ನ್ ಕೊಡಿಸುವ ಆರ್ಥಿಕ ಸಾಮರ್ಥ್ಯವಿಲ್ಲದೆ ಬೆಳ್ಳಿಯ ಸೊಂಟ ನೂಲನ್ನು ಮಾರಾಟ ಮಾಡಬೇಕಾಯಿತು ನಂತರ ತರಕಾರಿ ವ್ಯಾಪಾರ ಮಾಡಿ ಮಗನನ್ನು ಓದಿಸಿ ಉನ್ನತ ಹುದ್ದೆ ಲಭಿಸುವಂತೆ ಮಾಡಿದರು.

ಯುವಕನೋರ್ವ ತಾಂತ್ರಿಕ ಶಿಕ್ಷಣವನ್ನು ಪಡೆಯುತ್ತಿದ್ದ ಕಾಲದಲ್ಲಿ ಸ್ಥಳೀಯ ಮುಳ್ಳುಸೌತೆಯನ್ನು ಬೆಳೆದು ಮಾರುಕಟ್ಟೆಗೆ ತರುತ್ತಿದ್ದ ಆತನ ಒಂದು ವರ್ಷದ ಆದಾಯದಲ್ಲಿ ತಾಯಿಗೆ ಪ್ರೀತಿಯ ಕೊಡುಗೆಯಾಗಿ ಕರಿಮಣಿಯನ್ನು, ಆತನಿಗೆ ದ್ವಿ-ಚಕ್ರ ವಾಹನವನ್ನು ಖರೀದಿಸಿದ, ಚಾಲನಾ ಅನುಮತಿ ಪಡೆಯುವ ವಯಸ್ಸು ಕೂಡಾ ಆತನಿಗೆ ಆಗಿರಲಿಲ್ಲ.

ಇತ್ತೀಚೆಗಿನ ವರ್ಷಗಳಲ್ಲಿ ವರ್ಷದ ಏಳೆಂಟು ತಿಂಗಳುಗಳ ಕಾಲ ಹಲಸಿನ ಗುಜ್ಜೆಗಳು ಮಾರುಕಟ್ಟೆಯಲ್ಲಿ ಲಭ್ಯವಿರುತ್ತವೆ. ಸಪ್ಟೆಂಬರ್ ತಿಂಗಳಲ್ಲಿ ಹಿಂಗಾರು ಮಳೆ ಪ್ರದೇಶದ ಕಾಡುಗಳಿಂದ ಸಂಗ್ರಹಿಸಿದ ಗುಜ್ಜೆಯ ಬೆಲೆ ಒಂದು ಕಿಲೊಗ್ರಾಂಗೆ ಒಂದು ಕಿಲೊಗ್ರಾಂ ಸೇಬು ಹಣ್ಣಿನ ಬೆಲೆಯಷ್ಟಿರುತ್ತದೆ. ಮಾರುಕಟ್ಟೆ ಆರಂಭದಲ್ಲಿ ಗುಜ್ಜೆ ಮಾರಿದ ಘಟನೆಯನ್ನು ಈ ರೀತಿ ವರ್ಣಿಸಿದ್ದಾರೆ. “ಒಂದು ಗುಜ್ಜೆ ಕದ್ದು ಮುಚ್ಚಿ ಗ್ರಾಹಕನ ಚೀಲದೊಳಗೆ ಹಾಕಿ 25 ಪೈಸೆಯನ್ನು ಪಡೆದುಕೊಂಡಿದ್ದೆ. ಗುಜ್ಜೆ ಮಾರಾಟ ಮಾಡುವದುರ್ಗತಿ ಬಂದಿದೆಯೇ ಎಂದು ನೋಡಿದವರು ಹಿಯಾಳಿಸಬಹುದೆಂದು ಹೆದರಿದ್ದೆ. ಆ ಕಾಲದಲ್ಲಿ ಯುಗಾದಿ ಹಬ್ಬದ ಸಮಯದಲ್ಲಿ ಹಸಿಗೇರು ಬೀಜ ಎಲೆಯಲ್ಲಿ 100 ಎಣಿಸಿ ಕಟ್ಟಿದ ಪೊಟ್ಟಣ ಮಾರಾಟವಾಗುತ್ತಿತ್ತು. ಈಗಿನ ದಿನಗಳಲ್ಲಿ ವರ್ಷದ ನೂರು ನೂರಿಪ್ಪತ್ತು ದಿನ ಹಸಿಗೇರು ಬೀಜ ಲಭ್ಯ ಇವೆ.

ಜಿಲ್ಲೆಯ ರೈತರ ಗ್ರಾಹಕರ ಆರ್ಥಿಕ ಬೆಳವಣಿಗೆಗೆ ಈ ಮಾರುಕಟ್ಟೆಯು ಕಾರಣವಾಗಿತ್ತು. ಕೈ-ಗೆಟುಕುವ ಬೆಲೆಗೆ ಗ್ರಾಹಕರು ಆಪೇಕ್ಷಿಸುವ ತರಕಾರಿ, ಕೃಷಿ ಉತ್ಪನ್ನಗಳು ಔಷದಿ-üಗಿಡ ಮೂಲಿಕೆಗಳು ಗ್ರಾಹಕರಿಗೆ ಲಭ್ಯವಿದ್ದವು. ಸುತ್ತಲಿನ ಹಲವು ಹೋಟೆಲು, ಆಸ್ಪತ್ರೆ, ಹೋಸ್ಟೆಲುಗಳಿಗೆ ಇಲ್ಲಿಂದಲೇ ತರಕಾರಿ ಹಣ್ಣು ಹಂಪಲುಗಳು ಪೂರೈಕೆ ಆಗುತ್ತಿತ್ತು. ಯಾವ ಮಾಯೆಯೋ ಏನೋ ಒಂದು ಊರಿನ ತರಕಾರಿ ಸೀಜನ್ ಮುಗಿಯುತ್ತಲೆ ಇನ್ನೊಂದು ಊರಿನ ಆವಕ ಆರಂಭವಾಗುತ್ತಿತ್ತು. ವಾರ್ಷಿಕ ನೂರಾರು ಕೋಟಿಯ ವ್ಯವಹಾರವು ದಿನನಿತ್ಯವೂ ಸಾವಿರದಷ್ಟು ಜನರಿಗೆ ಉದ್ಯೋಗವನ್ನು ನೀಡಿದ್ದ ಈ ಮಾರುಕಟ್ಟೆ ವ್ಯವಸ್ಥೆಯನ್ನು ಕೋವಿಡ್ 19 ನುಂಗಿಹಾಕಿತು.

Article by

David Dsouza, Vamanjoor