ಮಂಗಳೂರು, ಏಪ್ರಿಲ್  04: ಹಿಂದೂ ಮಹಾ ವಿಕಾಸ ಅಭಿಯಾನ ಕಾರ್ಯಕ್ರಮದ ಬಗೆಗೆ ಅಖಿಲ ಭಾರತ ಹಿಂದೂ ಮಹಾಸಭಾದ ರಾಜ್ಯಾಧ್ಯಕ್ಷ ರಾಜೇಶ್ ಪವಿತ್ರನ್ ಮತ್ತು ಪ್ರಧಾನ ಕಾರ್ಯದರ್ಶಿ ಧರ್ಮೇಂದ್ರ ಅವರುಗಳು ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದರು. 

ನಾವು ನಕಲಿ ಹಿಂದುತ್ವದ ಬಿಜೆಪಿ ವಿರುದ್ಧ ಇದ್ದೇವೆ ನಿಜ. ಸರ್ವರ ವ್ಯಾಪಾರ ಹಕ್ಕುಗಳ ಬಗೆಗೆ ಎಸ್‌ಡಿಪಿಐ ಹಿಂದೂ ಮಹಾಸಭಾ ತಮ್ಮ ಜೊತೆಗೆ ಇರುವುದಾಗಿ ಹೇಳಿದ್ದಾರೆ. ಎಸ್‌ಡಿಪಿಐಯನ್ನು ಹುಟ್ಟಿಸಿದ್ದೇ ಬಿಜೆಪಿ. ನಮ್ಮದು ಬೆಳೆಯುತ್ತಿರುವ ಸಂಘಟನೆ. ಬಿಜೆಪಿಯ ಬಿ ಟೀಮ್ ಆದ ಎಸ್‌ಡಿಪಿಐ ಜೊತೆಗೆ ನಾವು ಯಾವ ಕಾರಣಕ್ಕೂ ಸೇರುವ ಪ್ರಶ್ನೆ ಇಲ್ಲ. ಇದು ಬಿಜೆಪಿಯ ಕುತಂತ್ರ ಎಂದು ರಾಜೇಶ್ ಪವಿತ್ರನ್ ಹೇಳಿದರು.

ಎಸ್‌ಡಿಪಿಐ ಬಿಜೆಪಿ ಬೆಳೆಸಿರುವ ಆತಂಕಕಾರಿ ಬೆಳವಣಿಗೆಯಾಗಿದೆ. ಬಿಜೆಪಿ ಮತ್ತು ಎಸ್‌ಡಿಪಿಐ ಎಲ್ಲ ಕಡೆ ಹೊಂದಾಣಿಕೆ ರಾಜಕೀಯ ನಡೆಸಿವೆ. ನಮ್ಮ ಸಂಘಟನೆಯು ಬಿಜೆಪಿಗಿಂತ ಹಳೆಯದು. ಇಡೀ ಭಾರತವು ಪರ್ಯಾಯ ಶಕ್ತಿಗಾಗಿ ಎದುರು ನೋಡುತ್ತಿದೆ. ನಾವು ಗೆದ್ದು ಬಂದು ಗೋಡ್ಸೆ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸುವುದಾಗಿ ಧರ್ಮೇಂದ್ರ ತಿಳಿಸಿದರು.

ಅಖಿಲ ಭಾರತ ಹಿಂದೂ ಮಹಾ ಸಭಾವು ಹಿಂದೂ ಮಹಾ ವಿಕಾಸ ಯಾನ ಆರಂಭಿಸಲಿದ್ದು ಅದನ್ನು ದಕ್ಷಿಣ ಕನ್ನಡ ಜಿಲ್ಲೆಯಿಂದ ಆರಂಭಿಸಲಿದೆ. ಹಿಂದೂ ಯುವಕರ ಸರಣಿ ಹತ್ಯೆ ಖಂಡಿಸಿ ಈ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ಅದೇ ರೀತಿ ಹಿಂದೂ ರಕ್ಷಣೆಗಾಗಿ ಹೋರಾಡಿ ಮೊಕದ್ದಮೆ ದಾಖಲಿಸಿಕೊಂಡವರ ಒಳಿತು ಬಯಸಿ ಈ ಅಭಿಯಾನ ನಡೆಯುತ್ತದೆ. ಹಿಂದೂಗಳೆಲ್ಲರಿಗೂ ವಸತಿ, ಗುರುಕುಲ ಮಾದರಿಯ ಶಿಕ್ಷಣ, ಉದ್ಯೋಗ ಅವಲಂಬಿತ ಶಿಕ್ಷಣ ತಂದು ಸುಧಾರಿಸುವುದಾಗಿ ಧರ್ಮೇಂದ್ರ ತಿಳಿಸಿದರು.

ಹುಟ್ಟುತ್ತ ಯಾರೂ ಬ್ರಾಹ್ಮಣರಲ್ಲ. ಎಸ್‌ಡಿಪಿಐ ದಲಿತರು ಎನ್ನುತ್ತ ವಿಭಜಿಸುವ ಕೆಲಸ ಮಾಡುತ್ತಿದೆ. ನಮ್ಮದು ಬ್ರಾಹ್ಮಣ, ವೈಶ್ಯ, ಕ್ಷತ್ರಿಯ, ಶೂದ್ರ ಆಧಾರಿತ ಹೊರತು ಇವರಂತೆ ಜಾತಿ ಆಧಾರಿತ ಅಲ್ಲ. ಜಾತಿ ಆಧಾರದಲ್ಲಿ ಒಡೆದ ಪಕ್ಷ ಬಿಜೆಪಿ. ವಿರೋಧ ಪಕ್ಷದಲ್ಲಿದ್ದಾಗ ಜಾತಿ ಇಲ್ಲ ಎಂದ ಬಿಜೆಪಿಯವರು ಈಗ ಜಾತಿ ಆಧಾರದಲ್ಲಿ ಯಡಿಯೂರಪ್ಪನವರ ಮಗನನ್ನು ತನ್ನಿ ಎನ್ನುತ್ತಿದ್ದಾರೆ. ಮೋದಿಯವರು ಕೂಡ ಅಧಿಕಾರಕ್ಕೆ ಬರುವಾಗ ಹೇಳಿದ್ದೇ ಬೇರೆ ಈಗ ಹೇಳುತ್ತಿರುವುದೇ ಬೇರೆ ಎಂದು ಧರ್ಮೇಂದ್ರ ತಿಳಿಸಿದರು.

ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷರಾಗಿ ಪ್ರಮೋದ್ ಉಚ್ಚಿಲ ಅವರನ್ನು ರಾಜ್ಯ ಪ್ರಭಾರಿ ಪೂಜಾರಿಯವರ ಶಿಫಾರಸ್ಸಿನ ಮೇಲೆ ಅ. ಭಾ. ಹಿಂ. ಮಹಾಸಭಾ ಅಧ್ಯಕ್ಷರಾದ ರಾಜೇಶ್ ಪವಿತ್ರನ್ ಆರಿಸಿದ್ದಾರೆ. ಪ್ರಮೋದ್ ಉಚ್ಚಿಲ ದೀರ್ಘ ಕಾಲ ಕಾಂಗ್ರೆಸ್‌ನಲ್ಲಿ ಇದ್ದವರು. ಕಾಂಗ್ರೆಸ್‌ನ ಹಿಂದೂಗಳನ್ನು ಒಡೆದಾಳುವ ನೀತಿಗೆ ಬೇಸತ್ತು ಪ್ರಮೋದ್ ಹಿಂದೂ ಮಹಾ ಸಭಾಕ್ಕೆ ಸೇರ್ಪಡೆ ಆಗಿದ್ದಾರೆ ಎಂದೂ ಸಹ ಧರ್ಮೇಂದ್ರ ಹೇಳಿದರು.

ಪ್ರಮೋದ್ ಅವರು ಮಾತನಾಡಿ  ಉಲ್ಲಾಳ ರಾಜಧಾನಿ ಆಗಿದ್ದ ಊರು. ಈಗ ಗಬ್ಬೆದ್ದು ಹೋಗಿದೆ. ಅಭಿವೃದ್ಧಿ ಯೋಜನೆ ಹಣ ಮಾಡುವುದಾಗಿದೆಯೇ ಹೊರತು ಜನಸೇವೆಯಲ್ಲ ಎಂದು ಹೇಳಿದರು.

ಹಿಂದೂ ಮಹಾಸಭಾ ಬಿಜೆಪಿಗೆ ಮೂಲ. ಅವರು ಅಧಿಕಾರಕ್ಕಾಗಿ ಹಿಂದೂ ಒಲವು ಬಿಟ್ಟು ರಾಜಕೀಯದತ್ತ ಹೋದವರು. ಶ್ಯಾಮ್ ಪ್ರಸಾದ್ ಮುಖರ್ಜಿ ಹಿಂದೂ ಸಭಾದವರು. ಯೋಗಿ ಇದ್ದುದೆಲ್ಲಿ? ಇವರೆಲ್ಲ ಅಧಿಕಾರದ ರುಚಿ ಹಚ್ಚಿದಾಗ ರಾಜಕೀಯ ಮಾಡುತ್ತಾರೆ. ಈ ಬಿಜೆಪಿಯವರು ಹಿಂದೂಗಳನ್ನು ದುರುಪಯೋಗ ಮಾಡಿ ಜೈಲಿಗೆ ಕಳುಹಿಸುತ್ತಾರೆ. ಬಿಜೆಪಿಯವರದ್ದು ಅಧಿಕಾರ ಹೊರತು ಹಿಂದೂ ಪರ ಅಲ್ಲ ಎಂದೂ ಪವಿತ್ರನ್ ಹೇಳಿದರು.

ದೇಶದಲ್ಲಿ 1990ರವರೆಗೆ ಅತಿ ಬಡ ಪಕ್ಷವಾದ ಬಿಜೆಪಿ ಇಂದು ದೇಶದ ಅತಿ ಸಿರಿವಂತ ಪಕ್ಷವಾಗಿದೆ. ಬೇರೆಲ್ಲ ಪಕ್ಷಗಳ ಒಟ್ಟು ಸಂಪತ್ತನ್ನು ಮೀರಿಸಿದ್ದು ಹೇಗೆ ಎಂದು ಧರ್ಮೇಂದ್ರ ಪ್ರಶ್ನಿಸಿದರು.

ಪತ್ರಿಕಾಗೋಷ್ಠಿಯಲ್ಲಿ ರಾಜೇಶ್ ಪೂಜಾರಿ, ಚಿದಂಬರರಾವ್ ಮೊದಲಾದವರು ಉಪಸ್ಥಿತರಿದ್ದರು.