ಫೋಟೋ ವರದಿ ರಾಯಿ ರಾಜಕುಮಾರ ಮೂಡುಬಿದಿರೆ 

ಸುಮಾರು ಸಾವಿರದ ಮುನ್ನೂರು ವರ್ಷಗಳ ಹಿಂದೆ ನಾಡೂರು ಎಂದು ಪ್ರಖ್ಯಾತವಾಗಿದ್ದ ಮೂಡುಬಿದಿರೆ ಪ್ರಾಂತ್ಯ ಗ್ರಾಮದ ಲಾಡಿ ಚತುರ್ಮುಖ ಬ್ರಹ್ಮ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯ ನಡೆಯುತ್ತಿದೆ. ವ್ಯವಸ್ಥಾಪನಾ ಸಮಿತಿ, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಅನಂತ ಕೃಷ್ಣ ರಾವ್ ಬಹಳ ಮುತುವರ್ಜಿ ವಹಿಸಿ ಎಲ್ಲಾ ಕಾರ್ಯಗಳನ್ನು ಮುನ್ನಡೆಸುತ್ತಿದ್ದಾರೆ.

ಇಲ್ಲಿರುವ ಚತುರ್ಮುಖ ಬ್ರಹ್ಮ ದೇವರ ಮೂರ್ತಿಯು ಹಂಸವಾಹನ, ಜಪ ಮಾಲೆ, ಅಮೃತ ಕಲಶ, ವೇದ ಪುಸ್ತಕಧಾರಿ, ಅಭಯ ಹಸ್ತದ ಅಪೂರ್ವ ಶಿಲ್ಪ. ದೇವಳದ ಮುಂಭಾಗದಲ್ಲಿರುವ ಚಿತ್ರಕೂಟ ನಾಗಬನವು ವಿಶಿಷ್ಟ ನಾಗಶಿಲ್ಪಗಳಿಂದ ಕೂಡಿದೆ. ಈ ಬ್ರಹ್ಮ ಮೂರ್ತಿಯು ಧನ್ವಂತರಿಯ ಸ್ವರೂಪ ಎಂದು ಪ್ರತೀತಿ.

ಮಂಗಳೂರಿನ ಅರಸ ದೇವಬನ್ನಾಯರೊಂದಿಗೆ ಅಂಗ ರಕ್ಷಕ 'ಸದರ್ನಾಡು' ಬಂದರೂ, ಬ್ರಹ್ಮ ದೇವರ ಪ್ರಸಾದ ಸ್ವೀಕರಿಸುವುದಿಲ್ಲ. ಸಿಟ್ಟುಗೊಂಡ ಬ್ರಹ್ಮ ಸದರ್ನಾಡನ್ನು ಕುದುರೆಯೊಂದಿಗೆ ಶಿಲೆ ಮಾಡುತ್ತಾನೆ. ಅದುದರಿಂದ ದೇವಾಲಯದ ಪೂರ್ವ ದಿಕ್ಕಿನಲ್ಲಿರುವ ನೀರಿನ ಗುಂಡಿಗೆ ಕುದುರೆ ಗುಂಡಿ ಎಂದು ಕರೆಯಲಾಗುತ್ತದೆ. ಹಾಗೂ ಇದೇ ಪ್ರದೇಶದಲ್ಲಿ ಕುದುರೆಯೊಂದಿಗೆ ಶಿಲೆ ಮಾಡಲಾಗಿತ್ತಂತೆ. ಇದರ ಪುರಾವೆ ನಾಗಬ್ರಹ್ಮ ಚಿತ್ರ ಕೂಟದಲ್ಲಿದೆ. ಸದರ್ನಾಡು ಬಲಾಂಡಿ ಹೆಸರಿನ ದೈವವಾಗಿ ಸತ್ಯ, ಧರ್ಮ ಕಾಪಾಡುತ್ತ ಪೆರಾರ ದಲ್ಲಿ ಬ್ರಹ್ಮ ಬಲಾಂಡಿ ಹೆಸರಿನಲ್ಲಿ ಪ್ರಸಿದ್ಧವಾಗಿದೆ. 

ಸದರ್ನಾಡು ಶಿಲೆಯಾದ ಸ್ಥಳ ಕುದುರೆಗುಂಡಿ ಎಂಬ ಹೆಸರಿನಿಂದ ಪ್ರಸಿದ್ಧವಾಗಿದ್ದು ಈಗಿನ ಲಾಡಿ ಚತುರ್ಮುಖ ಬ್ರಹ್ಮ ದೇವಸ್ಥಾನದ ಪೂರ್ವದಲ್ಲಿ ಕಂಡುಬರುತ್ತಿದೆ. ಕೆಲವು ಸ್ಥಾಪಿತ ಹಿತಾಸಕ್ತಿಗಳು ಆ ಪ್ರದೇಶವನ್ನು ಅತಿಕ್ರಮಿಸಲು, ಅಲ್ಲಿರುವ ವಿಶಾಲ ಮರಗಳನ್ನು ಕಡಿಯಲು ಪ್ರಯತ್ನಿಸಿದ ಕುರುಹುಗಳು ಈಗಲೂ ಲಭ್ಯವಿದೆ. ಇಲ್ಲಿ ಉಗಮಗೊಳ್ಳುವ ಶಾಂಭವಿ ನದಿ ಪುತ್ತಿಗೆ, ಕಡೆಂದಲೆ ಮಾರ್ಗವಾಗಿ ಮುಲ್ಕಿ, ಬಪ್ಪನಾಡು ದಾಟಿ ಸಮುದ್ರ ಸೇರುತ್ತದೆ. 

ಪ್ರಸ್ತುತ ಕುದುರೆಗುಂಡಿಯು ಹುಳು ತುಂಬಿ ಅತಿಕ್ರಮಣಕ್ಕೆ ಒಳಗಾಗುತ್ತಿದೆ. ಸರಕಾರ ಹಾಗೂ ಆಸಕ್ತರು ಈ ಅತ್ಯುತ್ತಮ 12 ತಿಂಗಳು ನೀರಿನ ಆಶ್ರಯದ ಗುಂಡಿ ಪ್ರದೇಶದ ಹೂಳನ್ನು ತೆಗೆದು ಸುಂದರವಾದ ಕೆರೆಯನ್ನು ಅಭಿವೃದ್ಧಿ ಪಡಿಸಲು ಸರಕಾರ, ತಾಲೂಕು ಕಚೇರಿ, ಸಂಘ ಸಂಸ್ಥೆ, ಆಸಕ್ತರು ಮುಂದಾಗಬೇಕಾಗಿದೆ.