ಫೋಟೋ ವರದಿ ರಾಯಿ ರಾಜಕುಮಾರ ಮೂಡುಬಿದಿರೆ
ಮೂಡುಬಿದಿರೆ ಪುರಸಭಾ ವ್ಯಾಪ್ತಿಯ ಮುಖ್ಯರಸ್ತೆಗಳಲ್ಲಿ ಹಳೆ ಮಾರುಕಟ್ಟೆ,ಆಂಜನೇಯ ದೇವಾಲಯ, ನ್ಯೂ ಪಡಿವಾಳ್ಸ್ , ಸತ್ಯನಾರಾಯಣ ದೇವಾಲಯ, ಪೋಲಿಸು ಠಾಣೆ, ಇತ್ಯಾದಿ ಮುಖ್ಯ ಆಯಕಟ್ಟಿನ ಪ್ರದೇಶಗಳಲ್ಲಿ ತರಕಾರಿ, ಹಣ್ಣು ಹಂಪಲು ಅಂಗಡಿಗಳವರು ಪಾದಚಾರಿ ಮಾರ್ಗವನ್ನು ಸಂಪೂರ್ಣ ಆಕ್ರಮಿಸಿ, ಪಾದಾಚಾರಿಗಳು ರಸ್ತೆಯಲ್ಲೇ ಜೀವ ಕೈಯಲ್ಲಿ ಹಿಡಿದು ನಡೆದಾಡುವಂತೆ ಮಾಡಿರುವ ಫೋಟೋ ಸಹಿತ ದಾಖಲೆಯನ್ನು ಹದಿನೈದು ದಿನಗಳ ಹಿಂದೆ ಪ್ರಕಟಗೊಳಿಸಲಾಗಿತ್ತು.
ಪಾದಾಚಾರಿ ಮಾರ್ಗ ಆಕ್ರಮಣಗೊಂಡ ಕಾರಣ ಹಲವಾರು ವಾಹನದವರು ರಸ್ತೆಯಲ್ಲಿಯೇ ವಾಹನವನ್ನು ನಿಲ್ಲಿಸಿ ವಾಹನಗಳಿಗೂ ತೊಂದರೆಯನ್ನು ನೀಡಿರುವುದು ಪುಟದಲ್ಲಿ ಕಂಡು ಬರುತ್ತಿದೆ. ಈ ಸಂಗತಿ ಪುರಸಭಾ ಸಭೆಯಲ್ಲಿಯೂ ಚರ್ಚೆಯಾಗಿತ್ತು. ಆದರೂ ಈತನಕ ಮುಖ್ಯಾಧಿಕಾರಿಗಳಾಗಲಿ, ಇತರ ಅಧಿಕಾರಿಗಳಾಗಲಿ ಕ್ರಮ ಕೈಗೊಂಡಿರುವುದಿಲ್ಲ. ಇದು ಸಾಕಷ್ಟು ಸಂಶಯಗಳಿಗೆ ಎಡೆ ಮಾಡಿಕೊಡುತ್ತದೆ ಎಂದು ಸಾರ್ವಜನಿಕರು ಬಹಿರಂಗವಾಗಿ ಆಡಿಕೊಳ್ಳುತ್ತಿದ್ದಾರೆ.