ಮಂಗಳೂರು, ಜೂನ್ 25: ವಿದ್ಯಾರ್ಥಿಗಳ ಮನಸ್ಸಿನಲ್ಲಿ ತಪ್ಪು ಮಾಹಿತಿ ತುಂಬಿ ಅವರ ದಾರಿ ತಪ್ಪಿಸುವುದರ ಜೊತೆಗೆ ಶಿಕ್ಷಣ ಇಲಾಖೆಯನ್ನೇ ಕುಲಗೆಡಿಸುವ ಕೆಲಸವನ್ನು ಬಿಜೆಪಿ ಸರಕಾರ ಮಾಡಿದೆ ಎಂದು ಮಾಜೀ ಮಂತ್ರಿ ರಮಾನಾಥ ರೈ ನೀಡಿದರು.

ರಾಜೀವ್ ಗಾಂಧಿಯವರು ಶಿಕ್ಷಣ ಕ್ರಾಂತಿಗೆ ಕಾರಣರಾದರೆ ಬಿಜೆಪಿಯವರು ಶಿಕ್ಷಣ ವಂಚನೆಗೆ ದಾರಿ ಮಾಡಿದ್ದಾರೆ. ರಶಿಯಾದ ಜಾರ್ ದೊರೆಗಳು ಸಾಮಾನ್ಯರಿಗೆ ಶಿಕ್ಷಣ ಸಿಕ್ಕರೆ ಅವರು ಪ್ರಶ್ನಿಸುತ್ತಾರೆ ಎಂದು ಜನಸಾಮಾನ್ಯರಿಗೆ ಶಿಕ್ಷಣ ಸಿಗದಂತೆ ಮಾಡಿದ್ದಾರಂತೆ. ಈ ಸರಕಾರ ಆ ರೀತಿ ಶಿಕ್ಷಣ ವ್ಯವಸ್ಥೆ ಹಾಳು ಮಾಡುತ್ತಿದೆ ಎಂದು ರಮಾನಾಥ ರೈ ಹೇಳಿದರು.

ನಮ್ಮ ಕಾಲದಲ್ಲಿ ಪುಸ್ತಕ, ಸಮವಸ್ತ್ರ ತಡವಾಗಿರಲಿಲ್ಲ. ಮನಮೋಹನ್ ಸಿಂಗ್ ಪ್ರಧಾನಿ ಇದ್ದಾಗ ನಲಿಕಲಿ ಇಡೀ ದೇಶಕ್ಕೆ ಹರಡಿತು. ಸಿದ್ದರಾಮಯ್ಯ ತಂದ ವಿದ್ಯಾಶ್ರೀ ಕಾರ್ಯಕ್ರಮಕ್ಕೆ ಈ ಸರಕಾರ ಹಣ ಬಿಡುಗಡೆ ಮಾಡುತ್ತಿಲ್ಲ. ಎಲ್ಲ ಕಡೆ ಶಿಕ್ಷಕರ ಸಂಖ್ಯೆ ಕಡಿಮೆ ಮಾಡಲಾಗಿದೆ. ಶಿಕ್ಷಕರಿಗೆ ಕಲಿಕೋಪಕರಣ ನೀಡುವುದು ನಿಂತಿದೆ. ಬಿಜೆಪಿಯವರ ಈ ಶಿಕ್ಷಣ ಹಳ್ಳ ಹಿಡಿಸುವ ನೀತಿಯನ್ನು ಖಂಡಿಸುವುದಾಗಿ ರೈ ಹೇಳಿದರು.

ನಾರಾಯಣ ಗುರುಗಳ ಹೆಸರು ತೆಗೆದದ್ದು, ಕುವೆಂಪು, ಕಯ್ಯಾರ ಕಿಞ್ಞಣ್ಣರು, ಬಸವಣ್ಣ, ಅಬ್ಬಕ್ಕ ಮೊದಲಾದ ವಿಚಾರ ಬಿಟ್ಟ ಚಕ್ರತೀರ್ಥನಿಗೆ ಮಂಗಳೂರಿನಲ್ಲಿ ಸನ್ಮಾನ ಮಾಡಲು ಈ ಜನರು ಹೊರಟದ್ದು ನಾಚಿಕೆಗೇಡು. ರಾಜಸತ್ತೆಯ ಮೂಲಭೂತ ವ್ಯವಸ್ಥೆ ಪ್ರಜಾಪ್ರಭುತ್ವಕ್ಕಲ್ಲ ಎಂದು ರೈ ಹೇಳಿದರು.

ಬಹುಸಂಖ್ಯಾತರು ಮತೀಯವಾದಿಯಾದರೆ ದೇಶಕ್ಕೇ ಅಪಾಯ. ನಮ್ಮ ಧಾರ್ಮಿಕ ಚೌಕಟ್ಟು ಮತ್ತು ಬೇರೆಯವರ ನಂಬಿಕೆಗೆ ಗೌರವ ನಮ್ಮ ನೀತಿ. ಶಿಕ್ಷಣ ಸಮಾಜಕ್ಕೆ ಅತಿ ಮುಖ್ಯವಾದುದು. ಅದಕ್ಕೆ ಮಹತ್ವ ಕೊಡಬೇಕು ಎಂದು ಅವರು ಹೇಳಿದರು. ಯಾರದೇ ಭಾವನೆಗಳು ನೋವಾಗದಂತೆ ಸರಕಾರ ಇರಬೇಕು ಎಂದು ರೈ ಹೇಳಿದರು.

ಶಿಕ್ಷಣ ನಮ್ಮ ಹಕ್ಕು ಎಂದು ಮಾಡಿದವರು ಕಾಂಗ್ರೆಸ್‌ನವರು ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಟೆಕ್ನಾಲಜಿ ಮಿಶನ್, ಎಜುಕೇಷನ್ ಮಿಶನ್ ರಾಜೀವ್ ಗಾಂಧಿಯವರ ಕನಸಿನ ಕೊಡುಗೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಮತಾ ಗಟ್ಟಿ, ಶಶಿಧರ ಹೆಗ್ಡೆ, ಇಬ್ರಾಹಿಂ ಕೋಡಿಜಾಲ್, ಹರಿನಾಥ್, ಮುಹಮ್ಮದ್ ಕುಂಜತ್ತಬೈಲ್, ರಕ್ಷಿತ್ ಶಿವರಾಂ, ಶೇಖರ್ ಪೂಜಾರಿ, ಶುಭೋದಯ, ಬೇಬಿ ಕುಂದರ್ ಮೊದಲಾದವರು ಉಪಸ್ಥಿತರಿದ್ದರು.