ಭಗವಂತನ ಸ್ರಷ್ಟಿ ಈ ಪರಿಸರ, ಎಷ್ಟೊಂದು ಸುಂದರ
ದುಂಬಿಗಳ ಝೇಂಕಾರ, ಹಕ್ಕಿಗಳ ಕಲರವ ಕೇಳಲು ಮಧುರ
ಹರಿಯುವ ಹೊಳೆಗೆ ಸಾಗರ ಸೇರಲು ಆತುರ
ಕಲ್ಮಶವಿಲ್ಲದ ಈ ಒಡನಾಟ ಸಾಗುತ್ತಿದೆ ನಿರಂತರ
ಮನುಜರು ನಾವು ಭಗವಂತ ಸ್ರಷ್ಟಿಯ ಪಾಲುದಾರರು
ಸಕಲ ಜೀವ ಜಂತುಗಳಲ್ಲಿ ನಾವೇ ಬುದ್ದಿವಂತರು
ಆದರೂ ನಮ್ಮಲ್ಲಿ ಪರಸ್ಪರ ದ್ವೇಷ, ಮತ್ಸರದ ಜ್ವಾಲೆಯು
ಜಾತಿ, ಧರ್ಮದ ಹೆಸರಲಿ ಕಾಣದ ದೇವರ ಮೆಚ್ಚಿಸಲು
ದೇವರು ಒಬ್ಬನೇ ನಾಮಗಳು ಹಲವು
ಅಂತಸ್ತಿಗೆ ಅಣುಗುಣವಾಗಿ ತೋರುವೆವು ಒಲವು
ಬಡತನದಿ ಬಳಲಲು ಮೌನ ಶಿಲೆಯೂ ದೇವರು
ಸಿರಿತನದಿ ದುಡುಕಲು ಸಾಕ್ಷಾತ್ ದರ್ಶನವೂ ಸಾಲದು
ಕಾಣದ ದೇವರಿಗೆ ಬೊಬ್ಬಿಟ್ಟು, ಪೂಜೆ ಪುರಸ್ಕಾರ
ನೆರೆಹೊರೆ ಕುಟುಂಬದಿ ದ್ವೇಷ, ಮತ್ಸರ
ಮಾನವೀಯತೆಯಿಂದ ತೆರೆಯಲು ಅಂತರಾಳದ ಕಣ್ಣು
ಜಗದೊಳು ಜಾತಿಯೆರಡೇ, ಗಂಡು ಹೆಣ್ಣು
ಜೀವನ ರಥದಿ ಪಯಣಿಸಲು
ಅಂಜಿಕೆ ಏಕೆ ಸಹಾಯ ಹಸ್ತ ನೀಡಲು?
ಹಸಿದವನಿಗಿತ್ತ ಅನ್ನವು, ಬಳಲಿದವನಿಗಿತ್ತ ಹೆಗಲು
ಪ್ರತಿಯೊಂದು ನಿನ್ನ ಮನುಷ್ಯತ್ವದ ನೆರಳು
ಕಷ್ಟದ ಆಧಾರ ಸುಖದಲಿ ಮರೆಯದಿರು
ಹಸಿದಾಗ ಸಿಕ್ಕ ಅನ್ನದಗುಳು, ಮ್ರಷ್ಟಾನ್ನದಿ ತೊರೆಯದಿರು
ಸಿರಿತನದ ಭ್ರಮೆಯಲಿ ನಿಂದಿಸಿ ಕೊಲ್ಲದಿರು
ಕ್ರತಜ್ನತೆ, ಮಾನವೀಯತೆ ಎರಡನ್ನೂ ಬಾಳ ದೀಪವಾಗಿ ಉರಿಸಿಡು.
ಉಸಿರಿನ ಗಾಳಿ, ಸೂರ್ಯ, ಚಂದ್ರರ ಧರ್ಮ ಯಾವುದಯ್ಯಾ?
ಎಂತಹ ಜ್ಞಾನಿಯು ರಕ್ತದ ಜಾತಿ ಹೇಳುವನೇನಯ್ಯಾ?
ಮನುಜರ ಚಿಂತನೆ ಅವುಗಳದಾದರೆ
ಹೆಣವೂ ಬೆತ್ತಲೆ ವಸ್ತ್ರ, ಪುಪ್ಪವಿಲ್ಲದೆ.
ಸಂಗಡವಿರುವ ಸೋದರನಲ್ಲಿ ದೇವರ ಕಾಣೋಣ
ಪ್ರೀತಿ, ಪ್ರೇಮ, ಭಾವೈಕ್ಯತೆಯ ಸಂದೇಶ ಸಾರೋಣ
ಸಾಮರಸ್ಯದ ಕೈ ಕೈ ಜೋಡಿಸಿ ಆಪತ್ಭಾಂದವರಾಗೋಣ
ಸುಂದರ ನಾಡಲಿ, ಶಾಂತಿಯ ಸ್ಥಾಪಿಸಿ ಹರುಷದಿ ನಲಿಯೋಣ.
✍️ವಿಲ್ಲಿ ಅಲ್ಲಿಪಾದೆ