ನಾ ಕಳ್ಳರ ಹಿಡಿಯುವೆನೆಂದ

ನಾನು ಕಣ್ಮುಚ್ಚಿ ನಂಬಿದೆ

ತಾನೇ ಊರು ಕೊಳ್ಳೆ ಹೊಡೆದ

ನಾನು ಮೂಕ ಪ್ರೇಕ್ಷಕನಾದೆ


ರುಪಾಯಿ ಮೌಲ್ಯವ ಏರಿಸುವೆನೆಂದ

ನಾನು ಸಂತಸದಿ ಕೇಕೆ ಹಾಕಿದೆ

ರುಪಾಯಿ ಕುಸಿದು ಧೂಳೀಪಟವಾಯಿತು

ಬಡವನ ಬಾಳು ನರಕಯಾತನೆಯಾಯಿತು


ತಾಯಿ, ಅಕ್ಕ, ತಂಗಿಯರ ರಕ್ಷಿಸುವೆನೆಂದ

ನಾನು ಧನ್ಯನೆಂದು ಎದೆ ತಟ್ಟಿ ಹೇಳಿದೆ

ಕಣ್ಣೆದುರೇ ಊರು ಅತ್ಯಾಚಾರದ ಸಂತೆಯಾಯಿತು

ಅವನು  ವಿದೇಶಕ್ಕೆ ಪ್ರವಾಸ ಹಾರಿದ ಚಿಂತೆಯಿಲ್ಲದೆ


ಸೈನಿಕನು ತನ್ನ ನಾಡಿ ಮಿಡಿತವೆಂದ

ನಾನು ಅಭಿಮಾನದಿ ತಲೆಬಾಗಿ ನಮಿಸಿದೆ

ತನ್ನ ಸ್ವಾರ್ಥಕೆ ಸೈನಿಕನನ್ನೇ ಬಲಿಪಡೆದ

ನಾನು ತಲೆಯೆತ್ತಲಾಗದೆ ನಾಚುತ ರೋಧಿಸಿದೆ


ಅಪರಾಧದ  ಕೊಡ ತುಂಬಿ ತುಳುಕುತ್ತಿದೆ

ಸುಳ್ಳಿನ ಕಂತೆ ಸುಟ್ಟು ಕರಕಲಾಗಿದೆ

ಪೊಳ್ಳು ಭಾಷಣ ಕೇಳಲಾಗದೆ ಕಿವಿ ಕಿವುಡಾಗಿದೆ

ಮಾಧ್ಯಮಗಳೂ ಗೊಟರುತ್ತಿವೆ ಬಾವಿಯೊಳಗಿನ ಕಪ್ಪೆಯಂತೆ


ಈಗ ಚೆಂಡು ನಿಂತಿದೆ ನನ್ನಂಗಳದಲ್ಲಿ

ಬದಲಾವಣೆಯ ಅವಕಾಶ ಇಣುಕಿದೆ ನನ್ನ ಮನದಲ್ಲಿ

ಸಂವಿಧಾನದ ಹಕ್ಕಿದೆ ನನ್ನ ಮತದಲ್ಲಿ

ಶಾಂತಿ, ಪ್ರೀತಿಯ ಆಳ್ವಿಕೆ ಬರಲಿ ನನ್ನಯ ದೇಶದಲ್ಲಿ. ✍️ವಿಲ್ಲಿ ಅಲ್ಲಿಪಾದೆ