ಉಜಿರೆ: ಕೃಷಿಋಷಿಗಳಾದ ರೈತರ ಕಲ್ಯಾಣಕ್ಕಾಗಿ ಕೃಷಿಭಾಗ್ಯದ ಮೂಲಕ ಸರ್ಕಾರದ ವತಿಯಿಂದ ನೂರು ಕೋಟಿ ರೂ. ವೆಚ್ಚದಲ್ಲಿ ಹೈಟೆಕ್ ಹಬ್ ಯೋಜನೆ ಸದ್ಯದಲ್ಲೇ ಪ್ರಾರಂಭಿಸಲಿದ್ದು ರೈತರ ಮನೆ ಬಾಗಿಲಿಗೆ ಕೃಷಿ ಯಂತ್ರೋಪಕರಣಗಳ ಸೇವಾ ಸೌಲಭ್ಯ ಒದಗಿಸಲಾಗುವುದು ಎಂದು ಕೃಷಿ ಸಚಿವ ಎನ್. ಚೆಲುವರಾಯ ಸ್ವಾಮಿ ಹೇಳಿದರು.
ಅವರು ಶನಿವಾರ ಧರ್ಮಸ್ಥಳದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಆಶ್ರಯದಲ್ಲಿ ಕೃಷಿ ವಿಸ್ತರಣಾ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ರೈತರಿಗೆ ಕೃಷಿ ಯಂತ್ರೋಪಕರಣಗಳನ್ನು ವಿತರಿಸಿ ಮಾತನಾಡಿದರು.
ನೂರು ಕೋಟಿ ರೂ. ವೆಚ್ಚದ ಯೋಜನೆಯಲ್ಲಿ ಶೇ. ೭೦ ರಷ್ಟು ಹಣ ಸರ್ಕಾರ ಭರಿಸುತ್ತದೆ. ಉಳಿದ ಶೇ. ೩೦ ಹಣವನ್ನು ಖಾಸಗಿ ಸಂಸ್ಥೆಗಳು ಭರಿಸಬೇಕಾಗುತ್ತದೆ. ಖಾಸಗಿ ಸೇವಾ ಸಂಸ್ಥೆಗಳ ಸಹಭಾಗಿತ್ವದಲ್ಲಿ ಈ ಯೋಜನೆ ಶೀಘ್ರ ಅನುಷ್ಠಾನಗೊಂಡು ರೈತರ ಭಾಗ್ಯದ ಬಾಗಿಲು ತೆರೆಯಲಿದೆ ಈ ಬಗ್ಗೆ ಸರ್ಕಾರಕ್ಕೆ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರ ಸಕ್ರಿಯ ಸಹಕಾರವನ್ನು ಸಚಿವರು ಕೋರಿದರು.
ಮಹಿಳೆಯರಿಗೆ ಹಾಗೂ ಸ್ವ-ಸಹಾಯ ಸಂಘಗಳ ಸದಸ್ಯರಿಗೆ ಶೂನ್ಯ ಬಡ್ಡಿ ದರದಲ್ಲಿ ರೂ. ಐದು ಲಕ್ಷ ಸಾಲ ನೀಡಲಾಗುತ್ತದೆ. ಸಾಲ ಮಂಜೂರಾತಿಯಲ್ಲಿ ಕೆಲವು ಸಮಸ್ಯೆಗಳಿದ್ದು ಈ ಬಗ್ಗೆ ಈಗಾಗಲೇ ಜಿಲ್ಲಾ ಸಹಕಾರಿ ಬ್ಯಾಂಕ್‌ಗಳ ಅಧ್ಯಕ್ಷರೊಂದಿಗೆ ಮಾತುಕತೆ ನಡೆಸಲಾಗಿದೆ ಎಂದು ಸಚಿವರು ತಿಳಿಸಿದರು.
ಕೃಷಿ ಇಲಾಖೆಯಲ್ಲಿ ಖಾಲಿ ಇರುವ ೩೫೦ ಹುದ್ದೆಗಳನ್ನು ಈಗಾಗಲೇ ಭರ್ತಿ ಮಾಡಲಾಗಿದೆ. ಸದ್ಯದಲ್ಲೆ ಇನ್ನೂ ೨೦೦೦ ಸಿಬ್ಬಂದಿ ನೇಮಕಾತಿ ಮಾಡಲಾಗುವುದು ಎಂದು ಸಚಿವರು ತಿಳಿಸಿದರು.
ಸಾವಯವ ಕೃಷಿಯಿಂದ ಅಧಿಕ ಲಾಭ ಗಳಿಸಬಹುದು ಎಂದು ಹೇಳಿದ ಸಚಿವರು ಕೃಷಿ ಅಭಿವೃದ್ಧಿ ಮೂಲಕ ಜೀವನಮಟ್ಟ ಸುಧಾರಿಸಿ ಸ್ವಾವಲಂಬಿ ಜೀವನ ನಡೆಸಬಹುದು ಎಂದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ರಾಜ್ಯದೆಲ್ಲೆಡೆ ಕೃಷಿಋಷಿಗಳ ಸೇವೆ-ಸಾಧನೆಯನ್ನು ಗುರುತಿಸಿ ಸಚಿವರು ಹೆಗ್ಗಡೆಯವರನ್ನು ಮತ್ತು ಹೇಮಾವತಿ ಹೆಗ್ಗಡೆಯವರನ್ನು ಅಭಿನಂದಿಸಿದರು.
ಶುಭಾಶಂಸನೆ ಮಾಡಿದ ವಿಧಾನಪರಿಷತ್ ಸದಸ್ಯ ಕೆ. ಪ್ರತಾಪಸಿಂಹ ನಾಯಕ್ ಮಾತನಾಡಿ ದಕ್ಷಿಣ ಕನ್ನಡ ಜಿಲ್ಲೆಯ ಹವಾಮಾನ ವೈಪರೀತ್ಯ ಮತ್ತು ಅವಶ್ಯಕತೆಗಳನನು ಗಮನಿಸಿ ಸರ್ಕಾರದ ನಿಯಮಾವಳಿಗಳಲ್ಲಿ ಸಡಿಲಿಕೆ ಮಾಡಬೇಕು. ಕೇರಳದಲ್ಲಿ ಭತ್ತದ ಬೆಳೆಗೆ ಬೆಂಬಲ ಬೆಲೆ ನೀಡುವಂತೆ ಕರ್ನಾಟಕದಲ್ಲಿಯೂ ಕೃಷಿಗೆ ಬೆಂಬಲ ಬೆಲೆ ನೀಡಬೇಕೆಂದು ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮಾತನಾಡಿ ಕೃಷಿಯಲ್ಲಿ ಆದಾಯಕ್ಕಿಂತ ವೆಚ್ಚ ಜಾಸ್ತಿ ಆಗುವುದರಿಂದ ರೈತರು ಭತ್ತದ ಕೃಷಿಯಿಂದ ವಿಮುಖರಾಗಿ ತೆಂಗು, ಅಡಿಕೆ, ರಬ್ಬರ್ ಮೊದಲಾದ ವಾಣಿಜ್ಯ ಬೆಳೆಗಳನ್ನು ಬೆಳೆಸುತ್ತಾರೆ. ಆದರೆ ಈಗ ಕೃಷಿ ಯಂತ್ರೋಪಕರಣಗಳ ಬಳಕೆಯಿಂದ ಕೃಷಿಯೂ ಲಾಭದಾಯಕವಾಗಿದೆ ಎಂದು ಹೆಗ್ಗಡೆಯವರು ಅಭಿಪ್ರಾಯಪಟ್ಟರು.
ಸರ್ಕಾರ ಮತ್ತು ಖಾಸಗಿ ಸಂಸ್ಥೆಗಳ ಸಹಭಾಗಿತ್ವದಲ್ಲಿ ಎಲ್ಲಾ ಯೋಜನೆಗಳು ಯಶಸ್ವಿಯಾಗುತ್ತವೆ. ಸರ್ಕಾರದ ಎಲ್ಲಾ ಭಾಗ್ಯಗಳ ಜೊತೆಗೆ ರೈತರಿಗೆ "ಕೃಷಿ ಭಾಗ್ಯ"ವೂ ದೊರಕಿ ರೈತರ ಭಾಗ್ಯದ ಬಾಗಿಲು ತೆರೆಯುವಂತಾಗಲಿ ಎಂದು ಹೆಗ್ಗಡೆಯವರು ಹಾರೈಸಿದರು.
ಹೇಮಾವತಿ ಹೆಗ್ಗಡೆಯವರು ಕೃಷಿ ಕಾರ್ಯಕ್ರಮಗಳ ವಾರ್ಷಿಕ ವರದಿ ಬಿಡುಗಡೆಗೊಳಿಸಿದರು. ಡಿ. ಹರ್ಷೇಂದ್ರ ಕುಮಾರ್ ಕೃಷಿ ವಿಸ್ತರಣಾ ಕಾರ್ಯಕ್ರಮಗಳ ಮಾಹಿತಿ ಪತ್ರ ಬಿಡುಗಡೆಗೊಳಿಸಿದರು.
ಧನಲಕ್ಷ್ಮಿ ಚೆಲುವರಾಯಸ್ವಾಮಿ, ಸಂಪತ್‌ಸಾಮ್ರಾಜ್ಯ ಶಿರ್ತಾಡಿ, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಡಾ. ಕೆಂಪೇಗೌಡ ಮತ್ತು ಧರ್ಮಸ್ಥಳ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ವಿಮಲ ಉಪಸ್ಥಿತರಿದ್ದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಎಲ್.ಎಚ್. ಮಂಜುನಾಥ್ ಸ್ವಾಗತಿಸಿದರು. ಯೋಜನಾಧಿಕಾರಿ ಸುರೇಂದ್ರ ಧನ್ಯವಾದವಿತ್ತರು. ಕೃಷಿ ಅಧಿಕಾರಿ ರಾಮ್‌ಕುಮಾರ್ ಕಾರ್ಯಕ್ರಮ ನಿರ್ವಹಿಸಿದರು.