ಫೋಟೋ ವರದಿ ರಾಯಿ ರಾಜಕುಮಾರ ಮೂಡುಬಿದಿರೆ
ಮೂಡುಬಿದಿರೆ: ಸ್ಥಳೀಯ ಆಳ್ವಾಸ್ ಕಾನೂನು ಮಹಾವಿದ್ಯಾಲಯದ ಉದ್ಘಾಟಣಾ ಕಾರ್ಯಕ್ರಮ ಡಾ. ವಿ ಎಸ್ ಆಚಾರ್ಯ ಸಭಾಂಗಣದಲ್ಲಿ ಅಕ್ಟೋಬರ್ 29ರಂದು ನಡೆಯಿತು. ದೀಪ ಬೆಳಗಿ ಕಾರ್ಯಕ್ರಮವನ್ನು ಉದ್ಘಾಟಿಸಿದ ಮಾಜಿ ಕೇಂದ್ರ ಕಾನೂನು ಸಚಿವ, ರಾಜ್ಯದ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಅವರು ಮಾತನಾಡಿ ಕಾನೂನನ್ನು ತದೇಕಚಿತ್ತದಿಂದ ಹಾಗೂ ಬದ್ಧತೆಯಿಂದ ಕಲಿತಲ್ಲಿ ಮಾತ್ರ ಯಶಸ್ಸು ಸಾಧ್ಯ. ಬದ್ಧತೆಯ ತಪಸ್ಸಿನೊಂದಿಗೆ ಗುರಿಯನ್ನು ಮುಟ್ಟುವಲ್ಲಿ ಆಸಕ್ತಿ ಶ್ರದ್ಧೆ ಸಾಧನೆಗಳು ಅಗತ್ಯ. ಭಾರತದ ಪರಂಪರೆಯಂತೆ ನಿರ್ವಿವಾದ ನ್ಯಾಯ ಎಲ್ಲರಿಗೂ ದೊರಕಬೇಕು. ಕಾನೂನು ನ್ಯಾಯ, ಪ್ರಾಮಾಣಿಕತೆ ಎಂದಿಗೆ ಕಡುಬಡವನನ್ನು ಸ್ಪಂದಿಸುವ ಮನೋಭಾವವನ್ನು ನ್ಯಾಯವಾದಿಗಳು ಹೊಂದಿರಬೇಕು ಎಂದು ಕರೆಕೊಟ್ಟರು.



ಎಲ್ಲ ವಿಧದ ಕೋರ್ಸುಗಳೊಂದಿಗೆ ಮೂಡುಬಿದಿರೆಯ ಆಳ್ವಾಸ್ ಬೆಳಗುತ್ತಿರುವುದಕ್ಕೆ ಶಾಸಕ ಉಮಾನಾಥ ಕೋಟ್ಯಾನ್ , ಮಾಜಿ ಸಚಿವ ಅಭಯ ಚಂದ್ರ ಜೈನ್ ಶುಭ ಹಾರೈಸಿದರು.
ಪ್ರತಿಯೊಂದುಕ್ಕೂ ಕಾನೂನಿನ ಜ್ಞಾನ ಅಗತ್ಯವಾಗಿರುವುದರಿಂದಾಗಿ ಈ ಕಾಲೇಜನ್ನು ತೆರೆಯಲಾಗಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಮೋಹನ್ ಆಳ್ವ ನುಡಿದರು. ವೇದಿಕೆಯಲ್ಲಿ ಬೆಂಗಳೂರಿನ ವಕೀಲ ದರ್ಶನ್, ಮೂಡುಬಿದಿರೆ ವಕೀಲರ ಸಂಘದ ಅಧ್ಯಕ್ಷ ಹರೀಶ್, ಹಿರಿಯ ವಕೀಲ ಬಾಹುಬಲಿ ಪ್ರಸಾದ್, ಉದ್ಯಮಿ ಶ್ರೀಪತಿ ಭಟ್, ಜಯಶ್ರೀ ಅಮರನಾಥ ಶೆಟ್ಟಿ ಹಾಜರಿದ್ದರು.
ಕಾಲೇಜಿನ ಪ್ರಾಚಾರ್ಯ ಮಹಾಂತೇಶ್ ಜಿ ಆರ್ ಸ್ವಾಗತಿಸಿದರು. ಹಿರಿಯ ಉಪನ್ಯಾಸಕ ರಾಜೇಶ್ ಡಿಸೋಜಾ ಕಾರ್ಯಕ್ರಮ ನಿರ್ವಹಿಸಿದರು. ಉಪನ್ಯಾಸಕಿ ಮಮತಾ ವಂದಿಸಿದರು.