ಮಂಗಳೂರು:- ಫೆಬ್ರವರಿ 28,2021 ರಂದು ಕೊಣಾಜೆ ಬಳಿಯ ಪುಳಿಂಚಾಡಿ ಎಂಬಲ್ಲಿ ಮಳೆ ನೀರು ಸಂರಕ್ಷಣಾ ವಿಧಾನಗಳ ಉದ್ಗಾಟನೆ ಕಾರ್ಯಕ್ರಮವನ್ನು ಸಿಒಡಿಪಿ ಸಂಸ್ಥೆ (ರಿ) ಮಂಗಳೂರು ಇವರ ಆಶ್ರಯದಲ್ಲಿ ನಡೆಸಲಾಯಿತು.
ನೈಸರ್ಗಿಕ ಸಂಪನ್ಮೂಲಗಳ ಅಭಿವೃದ್ಧಿ ಮತ್ತು ಸಂರಕ್ಷಣೆಯ ಈ ಯೋಜನೆಯು ಓಡುವ ನೀರನ್ನು ಚಲಿಸುವಂತೆ, ಚಲಿಸುವ ನೀರನ್ನು ನಿಲ್ಲಿಸಿ, ನಿಂತ ನೀರನ್ನು ಇಂಗಿಸಿ ಅಂತರ್ಜಲ ಹೆಚ್ಚಿಸಲು ಉದ್ದೇಶಿಸಿದೆ. ಫಜೀರ್ ಮತ್ತು ಸಾಯ ಪ್ರದೇಶಗಳಲ್ಲಿ ಸಿಒಡಿಪಿ ಸಂಸ್ಥೆಯು ವಿವಿಧ ವಿಧಾನಗಳನ್ನು ಆಳವಡಿಸಿದ್ದು, ಅವುಗಳ ಪೈಕಿ ಸ್ವ ಸಹಾಯ ಸಂಘದ ಸದಸ್ಯೆಯಾದ ಸೆವರಿನ್ ಡಿ ಸೋಜರವರ ಜಾಗದಲ್ಲಿರುವ ಸಣ್ಣದೊಂದು ತೋಡಿಗೆ ಕಟ್ಟಿದ ಕಟ್ಟದ ಉದ್ಗಾಟನಾ ಕಾರ್ಯಕ್ರಮವನ್ನು ಮಂಗಳೂರು ಧರ್ಮಪ್ರಾಂತ್ಯದ ಶ್ರೇಷ್ಟ ಗುರುಗಳಾದ ಮೊ|| ಮ್ಯಾಕ್ಸಿಂ ನೊರೊನ್ಹಾ ರವರು ನಡೆಸಿಕೊಟ್ಟರು.
ಈ ಕಾರ್ಯಕ್ರಮಕ್ಕೆ ದಕ್ಷಿಣ ಕನ್ನಡ ನಿರ್ಮಿತಿ ಕೇಂದ್ರ ಸುರತ್ಕಲ್ ಇದರ ನಿರ್ದೇಶಕರಾದ ರಾಜೇಂದ್ರ ಕಲ್ಬಾವಿ, ಜನ ಶಿಕ್ಷಣ ಟ್ರಸ್ಟ್ ಮುಡಿಪು ಇದರ ಸ್ಥಾಪಕ ಹಾಗೂ ನಿರ್ದೇಶಕರಾದ ಶ್ರೀಮಾನ್ ಶೀನ ಶೆಟ್ಟಿ, ಮಂಗಳೂರು ಧರ್ಮಪ್ರಾಂತ್ಯದ ಪರಿಸರ ಆಯೋಗದ ಕಾರ್ಯದರ್ಶಿ ಲೂವಿ ಪಿಂಟೊ, ವಾಳೆಯ ಮುಖ್ಯಸ್ಥರಾದ ಲೊರೆನ್ಸ್ ಡಿ ಸೋಜ, ಫಜೀರು ಪಂಚಾಯತ್ ಅಧ್ಯಕ್ಷೆಯಾದ ಮೇರಿ ಫೆರ್ನಾಂಡಿಸ್, ಸಿಒಡಿಪಿ ಸಂಸ್ಥೆಯ ನಿರ್ದೇಶಕರಾದ ವಂ. ಸ್ವಾಮಿ ಓಸ್ವಲ್ಡ್ ಮೊಂತೇರೊ, ಸಿಒಡಿಪಿ ಸಂಸ್ಥೆಯ ನಿಯೋಜಿತ ನಿರ್ದೇಶಕರಾದ ವಂ. ಸ್ವಾಮಿ ವಿನ್ಸೆಂಟ್ ಡಿ ಸೋಜ, ಫಜೀರು ಚರ್ಚ್‍ನ ಧರ್ಮಗುರುಗಳಾದ ವಂ. ಸ್ವಾಮಿ ಸುನಿಲ್ ವೇಗಸ್, ಫಜೀರು ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷರಾದ ರಿಚ್ಚರ್ಡ್ ಡಿ ಸೋಜ, ಕಾರ್ಯದರ್ಶಿ ವಿಕ್ಟರ್ ಮೊಂತೇರೊ ಇವರೆಲ್ಲರೂ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವಂ.ಸ್ವಾಮಿ ಓಸ್ವಲ್ಡ್ ಮೊಂತೇರೊ ನೆರೆದಂತಹ ಎಲ್ಲರನ್ನೂ ಸ್ವಾಗತಿಸಿ, ಪ್ರಾಸ್ತವಿಕ ಮಾತುಗಳನ್ನು ನುಡಿದರು. “2015 ರಲ್ಲಿ ಪೋಪ್ ಪ್ರಾನ್ಸಿಸ್ ಕೊಟ್ಟ “ಲಾವ್ದಾತೊ ಸಿ” ವಿಶ್ವ ಪತ್ರದಲ್ಲಿ ನಮ್ಮ ಪರಿಸರದ ಆರೈಕೆಯನ್ನು ಮಾಡಿ ಅದರ ಸಂರಕ್ಷಣೆಗೆ ನಾವೇ ಪರಿಹಾರವನ್ನು ಕಂಡುಹಿಡಿಯಬೇಕು” ಎಂಬ ಕರೆ ನೀಡಲಾಗಿದೆ. ಸಿಒಡಿಪಿ ಸಂಸ್ಥೆಯ ಪರವಾಗಿ ಫಜೀರು ಗ್ರಾಮದ ಪಾನೆಲ ಮತ್ತು ಅಡ್ಯನಡ್ಕ ಬಳಿಯ ಸಾಯ ಪ್ರದೇಶದಲ್ಲಿ ಸ್ವಾಭಾವಿಕ ಸಂಪನ್ಮೂಲಗಳ ಬಗ್ಗೆ ಯೋಜನೆಯನ್ನು ಕೈಗೊಂಡಿದ್ದೇವೆ. ಈ ಯೋಜನೆಯ ಪ್ರಕಾರ ಸಾವಯವ ಕೈತೋಟ ರಚನೆಗೆ ಪ್ರೋತ್ಸಾಹ, ಪ್ಲಾಸ್ಟಿಕ್ ತ್ಯಜಿಸಿ ಬಟ್ಟೆ ಚೀಲ ಉಪಯೋಗ, ಆಡು-ಕುರಿ, ಕೋಳಿ, ಹಂದಿ ಸಾಕಣೆಗೆ ಉತ್ತೇಜನ, ಎರೆಹುಳ ಗೊಬ್ಬರ ತಯಾರಿ, ಮಳೆ ನೀರು ಕೊಯ್ಲು ವಿಧಾನಗಳಾದ ಕೊರಕಲು ತಡೆ, ಕೃಷಿ ಹೊಂಡ ರಚನೆ, ಸಮಾಂತರ ಅಗಳುಗಳು,ಕೆರೆಗಳ ಹೂಳೆತ್ತುವಿಕೆ, ಇಂಗುಗುಂಡಿ ರಚನೆ ಮಾತ್ರವಲ್ಲದೆ ಪರಿಸರ ಸ್ನೇಹಿ ಆಸನ ರಚನೆ ಈ ಎಲ್ಲಾ ಕಾರ್ಯಕ್ರಮಗಳನ್ನು ನೈಸರ್ಗಿಕ ಸಂಪನ್ಮೂಲಗಳ ಅಭಿವೃದ್ಧಿ ಯೋಜನೆಯ ಪರವಾಗಿ ಅನುಷ್ಠಾನಗೊಳಿಸಲಾಗಿದೆ.
ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಶೀನ ಶೆಟ್ಟಿಯವರು “ನೀರು ಪ್ರಕೃತಿ ಮಾತೆ ಕೊಟ್ಟಿರುವ ಪ್ರಸಾದ, ಅದನ್ನು ಪೋಲು ಮಾಡುವುದು ಮಹಾ ಪಾಪ. ಇದರ ಉಳಿವಿಗಾಗಿ ಶ್ರಮಿಸೋಣ. ಜನ್ಮ ಕೊಟ್ಟ ತಾಯಿ ಮತ್ತು ಭೂಮಿ ತಾಯಿ ಇವೆರಡು ಮಾತೃ ಸಮಾನ. ಗಾಳಿ, ನೀರು, ಭೂಮಿ, ಮರ ದೇವರ ವರಗಳು. ಆದರೆ ಮನುಷ್ಯರು ಇದನ್ನು ಮಾರಾಟ ಮಾಡುತ್ತಾರೆ. ಪ್ರಕೃತಿ ಮಾತೆಯನ್ನು ಗೌರವಿಸಿ ಉಳಿಸುವುದು ನಮ್ಮ ಕರ್ತವ್ಯವಾಗಿದೆ” ಎಂದು ಹೇಳಿದರು.
“ಜಲ ಸಂರಕ್ಷಣೆಯ ಕಾಳಜಿ ನಮ್ಮಲ್ಲಿ ಇರಬೇಕು. ನೀರನ್ನು ಮಿತವಾಗಿ ಬಳಸಬೇಕು. ಸಿಒಡಿಪಿ ಸಂಸ್ಥೆ ಈ ದಿಕ್ಕಿನಲ್ಲಿ ಮಾಡುವ ಪ್ರಯತ್ನಗಳಿಗೆ ನಮ್ಮ ಬೆಂಬಲ ಸದಾ ಇದೆ” ಎಂದು ದ.ಕ ನಿರ್ಮಿತಿ ಕೇಂದ್ರದ ನಿರ್ದೇಶಕ ರಾಜೇಂದ್ರ ಕಲ್ಬಾವಿ ಹೇಳಿದರು. ಲೂವಿ ಪಿಂಟೊ ರವರು ಲಾವ್ದಾತೊ ಸಿ ಯೋಜನೆಯಡಿಯಲ್ಲಿ ಮಂಗಳೂರು ಧರ್ಮಪ್ರಾಂತ್ಯದ ವ್ಯಾಪ್ತಿಯಲ್ಲಿ ಪರಿಸರ ಸಂರಕ್ಷಣೆ ಯೋಜನೆಯಲ್ಲಿ ಕಾರ್ಯಗತಗೊಳಿಸಿರುವ ಕಾರ್ಯಕ್ರಮಗಳ ವಿವರವನ್ನು ನೀಡಿದರು.
ವಂ. ಸ್ವಾಮಿ ಸುನೀಲ್ ವೇಗಸ್ ರವರು ಈ ಯೋಜನೆಯನ್ನು ಅನುಷ್ಠಾನಗೊಳಿಸಲು ಬೇಕಾದ ಎಲ್ಲಾ ರೀತಿಯ ಸಹಕಾರ ನೀಡುವ ಭರವಸೆಯನ್ನು ನೀಡಿ, ಈ ಕಾರ್ಯಕ್ರಮಕ್ಕೆ ಶುಭಹಾರೈಸಿದರು.
ಮೊ|| ಮ್ಯಾಕ್ಸಿಂ ನೊರೊನ್ಹಾರವರು ಅಧ್ಯಕ್ಷತೆಯನ್ನು ವಹಿಸಿ ತಮ್ಮ ಅನುಭವನ್ನು ಹಂಚಿಕೊಂಡರು. ಫೆರಾರ್ ಚರ್ಚ್‍ನಲ್ಲಿ ಇರುವಾಗ ತಾವೇ ಸ್ವಂತ ತಮ್ಮ ಪರಿಸರದಲ್ಲಿ ಇಂಗುಗುಂಡಿಗಳನ್ನು ರಚಿಸಿ ಅಂತರ್ಜಲ ಮಟ್ಟದ ಹೆಚ್ಚಳವನ್ನು ಗಮನಿಸಿದ್ದನ್ನು ಉಲ್ಲೇಖಿಸಿ ಈ ಊರಿನ ಎಲ್ಲಾ ಕುಟುಂಬದವರು ಮಳೆ ನೀರು ಕೊಯ್ಲು ವಿಧಾನಗಳನ್ನು ತಮ್ಮ ಪರಿಸರದಲ್ಲಿ ಆಳವಡಿಸಿಕೊಳ್ಳಲು ಕರೆ ನೀಡಿದರು.
ಇದೇ ಸಂದರ್ಬದಲ್ಲಿ ಇತ್ತೀಚಿನ ಗ್ರಾಮ ಪಂಚಾಯತ್‍ನ ಚುನವಾಣೆಯಲ್ಲಿ ವಿಜೇತರಾದ ಫಜೀರು ಗ್ರಾಮ ಪಂಚಾಯತಿನ ಅಧ್ಯಕ್ಷೆಯಾದ ಮೇರಿ ಫೆರ್ನಾಂಡಿಸ್ ಹಾಗೂ ಸದಸ್ಯೆಯಾದ ಫ್ಲೋರಿನ್ ಡಿ ಸೋಜರವರನ್ನು ಗೌರವಿಸಲಾಯಿತು. ಮಳೆ ನೀರು ಕೊಯ್ಲು ವಿಧಾನವನ್ನು ಆಳವಡಿಸಿಕೊಳ್ಳಲು ಸ್ಥಳಾವಕಾಶ ನೀಡಿದವರನ್ನು, ತಮ್ಮ ಸ್ಥಳದಲ್ಲಿ ಮಳೆನೀರು ಕೊಯ್ಲು ವಿಧಾನ ಆಳವಡಿಸಿದವರನ್ನು, ಪರಿಸರ ಸ್ನೇಹಿ ಆಸನವನ್ನು ನಿರ್ಮಿಸಲು ಸಹಕಾರ ನೀಡಿದ ಸ್ನೇಹ ಮಹಾಸಂಘವನ್ನು ಮತ್ತು ಇಂಗುಗುಂಡಿಗಳ ಕೆಲಸಕ್ಕೆ ಶ್ರಮದಾನ ನೀಡಿದ ಐ.ಸಿ.ವೈ.ಎಮ್ ಸಂಘಟನೆಯನ್ನು ಲಕ್ಷಣಫಲ ಗಿಡಗಳನ್ನು ನೀಡಿ ಗೌರವಿಸಲಾಯಿತು. ಸಿಒಡಿಪಿ ಸಂಸ್ಥೆಯ ಸಂಯೋಜಕಿಯಾದ ರೀಟಾ ಡಿ ಸೋಜರವರು ಕಾರ್ಯಕ್ರಮವನ್ನು ನಿರೂಪಿಸಿದರು ಹಾಗೂ ವಂ.ಸ್ವಾಮಿ ವಿನ್ಸೆಂಟ್ ಡಿ ಸೋಜರವರು ವಂದಿಸಿದರು.