ಮಂಗಳೂರು: ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಮಂಗಳೂರು ಪ್ರೆಸ್‍ಕ್ಲಬ್ ಹಾಗೂ ಪತ್ರಿಕಾಭವನ ಟ್ರಸ್ಟ್ ಆಶ್ರಯದಲ್ಲಿ ಪತ್ರಕರ್ತರ ವಾರ್ಷಿಕ ಕ್ರೀಡಾಕೂಟ 2021ರ ಮಾರ್ಚ್ 7ರಂದು ರವಿವಾರ ಬೆಳಗ್ಗೆ 9.00ರಿಂದ ನಗರದ ನೆಹರೂ ಮೈದಾನ ಬಳಿಯ ಫುಟ್ಬಾಲ್ ಕ್ರೀಡಾಂಗಣದಲ್ಲಿ ನಡೆಯಲಿದೆ.
ಕ್ರೀಡಾಕೂಟದಲ್ಲಿ 100 ಮೀ. 200 ಮೀ.ಓಟ, ಬಾಲ್ ಪಾಸಿಂಗ್, ಸಂಗೀತ ಕುರ್ಚಿ, ಮೂರುಕಾಲಿನ ಓಟ, ಸ್ಲೋ ಬೈಕ್‍ರೇಸ್, ಬಾಳೆ ಹಣ್ಣು ತಿನ್ನುವ ಸ್ಪರ್ಧೆ, ಕ್ರಿಕೆಟ್, ಇನ್ನಿತರ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.
ಸ್ಪರ್ಧೆಯಲ್ಲಿ ಭಾಗವಹಿಸಲು ಇಚ್ಛಿಸುವ ಕ್ರಿಕೆಟ್ ತಂಡಗಳು ಹೆಸರುಗಳನ್ನು ಮಾರ್ಚ್ 5ರೊಳಗಾಗಿ ಮಂಗಳೂರು ಪ್ರೆಸ್‌ಕ್ಲಬ್ ನಲ್ಲಿ ನೋಂದಾಯಿಸಿ ಕೊಳ್ಳಬಹುದಾಗಿದೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಿಯಮಗಳು:
1) ಕ್ರೀಡಾಕೂಟದಲ್ಲಿ ಪತ್ರಿಕೆ ಹಾಗೂ ದೃಶ್ಯ ಮಾಧ್ಯಮದ ಪತ್ರಕರ್ತರಿಗೆ, ಛಾಯಾಗ್ರಾಹಕರಿಗೆ ಮತ್ತು ಸಿಬ್ಬಂದಿಗೆ ಮಾತ್ರ ಅವಕಾಶ.
2) ಸ್ಪರ್ಧೆಗಳಲ್ಲಿ ಭಾಗವಹಿಸುವ ಎಲ್ಲ ಸ್ಪರ್ಧಾಳುಗಳು ಸಂಘದ ಅಥವಾ ಸಂಸ್ಥೆಯ ಗುರುತು ಚೀಟಿ ಹೊಂದಿರಬೇಕು.
3) ಗುಂಪು ಆಟಗಳಿಗೆ ಪ್ರತ್ಯೇಕವಾಗಿ ಸಂಸ್ಥೆಗಳ ಹೆಸರಿನಲ್ಲಿ ತಂಡಗಳಿಗೆ ಭಾಗವಹಿಸಲು ಅವಕಾಶವಿದೆ.
4) ಸ್ಪರ್ಧೆಯಲ್ಲಿ ಭಾಗವಹಿಸಲು ಇಚ್ಛಿಸುವವರು ಬೆಳಗ್ಗೆ 09:00ಕ್ಕೆ ಕ್ರೀಡಾಂಗಣದಲ್ಲಿ ಕಡ್ಡಾಯವಾಗಿ ಹಾಜರಿದ್ದು ತಮ್ಮ ಹೆಸರನ್ನು ನೋಂದಾಯಿಸಬೇಕು. ಆಸಕ್ತರು ಕ್ಲಪ್ತ ಸಮಯದಲ್ಲಿ ಹಾಜರಿದ್ದು ಸಹಕರಿಸಬೇಕಾಗಿ ವಿನಂತಿ.
5) ಯಾವುದೇ ಸ್ಪರ್ಧೆಯನ್ನು ರದ್ದುಪಡಿಸುವ ಅಧಿಕಾರ ಸಂಘಟಕರಿಗಿರುತ್ತದೆ.
6) ನಾಯಕರು ಆಯಾ ತಂಡಗಳ ಸದಸ್ಯರ ಪೂರ್ಣ ಮಾಹಿತಿ ಹೊಂದಿರಬೇಕು. ಸ್ಪರ್ಧೆಯ ವಿಚಾರದಲ್ಲಿ ಯಾವುದೇ ತಕರಾರು ಕಂಡುಬಂದಲ್ಲಿ ಅವುಗಳನ್ನು ಸಂಬಂಧಪಟ್ಟವರೊಂದಿಗೆ ಮಾತುಕತೆಯ ಮೂಲಕ ಬಗೆಹರಿಸಲು ತಂಡದ ನಾಯಕರಿಗೆ ಮಾತ್ರ ಅವಕಾಶ ಇರುತ್ತದೆ.
7) ಸ್ಪರ್ಧೆಯಲ್ಲಿ ತೀರ್ಪುಗಾರರ ನಿರ್ಧಾರವೇ ಅಂತಿಮವಾಗಿರುತ್ತದೆ.