ಮಂಗಳೂರು: ಇತ್ತೀಚಿಗೆ ಸಂಭವಿಸಿದ ಪ್ರಾಕೃತಿಕ ವಿಕೋಪ, ಭಾರೀ ಸುರಿದ ಮಳೆಯಿಂದ ದ.ಕ.ಜಿಲ್ಲೆಯ ವಿವಿಧೆಡೆ ಏಳು ಮಂದಿ ದುರ್ಮರಣಕ್ಕೀಡಾದ ಸುದ್ದಿಯಿಂದ ನಾನು ತೀವ್ರ ದುಃಖಿತನಾಗಿದ್ದೇನೆ. ದುರಂತದಲ್ಲಿ ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡವರಿಗೆ ಮಂಜುನಾಥ ಭಂಡಾರಿ, MLC ಕೆಪಿಸಿಸಿ ಕಾರ್ಯಾಧ್ಯಕ್ಷಕರು ಸಂತಾಪ ವ್ಯಕ್ತಪಡಿಸಿದ್ದಾರೆ.


"ಉಳ್ಳಾಲ ತಾಲೂಕಿನ ಮುನ್ನೂರು ಗ್ರಾಮದ ಮದನಿ ನಗರದಲ್ಲಿ ಮನೆ ಮೇಲೆ ತಡೆಗೋಡೆ ಕುಸಿದ ಪರಿಣಾಮ ಮೃತಪಟ್ಟ ಒಂದೇ ಕುಟುಂಬದ ಮುಹಮ್ಮದ್ ಯಾಸೀರ್, ಮರಿಯಮ್ಮ, ರಿಫಾನಾ, ಆಶಿಯಾ ರಿಯಾನಾ, ಮಂಗಳೂರಿನ ಪಾಂಡೇಶ್ವರ ರೊಸಾರಿಯೊ ಚರ್ಚ್ ಬಳಿ ವಿದ್ಯುತ್ ತಂತಿ ಸ್ಪರ್ಶಿಸಿ ಮೃತರಾದ ಪುತ್ತೂರು ರಾಮಕುಂಜದ ದೇವರಾಜ್, ಹಾಸನದ ರಾಜು ಹಾಗೂ ಬೆಳ್ತಂಗಡಿ ತಾಲೂಕಿನ ಶಿಬಾಜಿ ಗ್ರಾಮದ ಬರ್ಗುಲಾದಲ್ಲಿ ವಿದ್ಯುತ್ ಆಘಾತದಿಂದ ದುರ್ಮಣಕ್ಕೀಡಾದ ಪ್ರತೀಕ್ಷಾ ಶೆಟ್ಟಿ ಅವರ ಆತ್ಮಕ್ಕೆ ಭಗವಂತ ಚಿರಶಾಂತಿ ನೀಡಲಿ ಮತ್ತು ಅವರ ಕುಟುಂಬದ ಬಂಧುಗಳಿಗೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ."

"ನಾಲ್ಕು ಘಟನೆಯ ಬಗ್ಗೆ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ,  ಜಿಲ್ಲಾ ಉಸ್ತುವಾರಿ ಸಚಿವರಿಗೆ ಮಾಹಿತಿ ನೀಡಿ ಮಾತುಕತೆ ನಡೆಸಿದ್ದು, ಮೃತರ ಕುಟುಂಬಸ್ಥರಿಗೆ ಹೆಚ್ಚಿನ ಪರಿಹಾರ ನೀಡುವಂತೆ ಮನವಿ ಮಾಡಿದ್ದೇನೆ. ಜಿಲ್ಲೆಯಲ್ಲಿ ವಿದ್ಯುತ್ ದುರ್ಘಟನೆ ಮರುಕಳಿಸದಂತೆ ಸೂಕ್ತ ಕ್ರಮ ಕೈಗೊಳ್ಳುವಂತೆ ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಿಗೆ ಸೂಚನೆ ನೀಡಿದ್ದೇನೆ" ಎಂದು ತಿಳಿಸಿದ್ದಾರೆ.