ಮಂಗಳೂರು, ಜೂನ್ 27: ಸೈನಿಕರ ನೇಮಕಾತಿಯಲ್ಲಿ ಹೊರಗುತ್ತಿಗೆ, ನಾಲ್ಕು ವರುಷಗಳ ನಿರುದ್ಯೋಗ ಯೋಜನೆ ಆಗಿದೆ. ಎರಡು ಕೋಟಿ ಉದ್ಯೋಗದ ಭರವಸೆ ನೀಡಿ ಅಧಿಕಾರಕ್ಕೆ ಬಂದ ಮೋದಿಯವರು ಕಾಲಿ ಇರುವ ಹುದ್ದೆಗಳನ್ನು ಕೂಡ ಭರ್ತಿ ಮಾಡುತ್ತಿಲ್ಲ ಎಂದು ಮಾಜೀ ಮಂತ್ರಿ ರಮಾನಾಥ ರೈ ಪತ್ರಿಕಾಗೋಷ್ಠಿ ನಡೆಸಿ ಹೇಳಿದರು.
ಕೊರೋನಾ ಕಾರಣಕ್ಕೆ ಎರಡು ವರುಷ ನೇಮಕಾತಿ ನಡೆದಿಲ್ಲ. ಕೆಲವರ ಆಯ್ಕೆ ಪ್ರಕ್ರಿಯೆ ಆಗಿತ್ತು. ಅವರಿಗೆ ಈ ಅಗ್ನಿಪಥ ಮಾರಕವಾಗಿದೆ. ಐದು ವರುಷ ಸೇವೆ ಸಲ್ಲಿಸಿದರೆ ಪಿಂಚಣಿ ಕೊಡಬೇಕು. ಅದನ್ನು ತಪ್ಪಿಸಲು ನಾಲ್ಕು ವರುಷ ಸೇವೆಯ ಬುದ್ಧಿವಂತಿಕೆ ತೋರಲಾಗಿದೆ. ಸಂಬಳ ಒಂಬತ್ತು ಸಾವಿರ. ಬೇರೆಲ್ಲ ಸೇರಿಸಿ ಮೂವತ್ತು ಸಾವಿರ ಕೊಡುವುದಾಗಿ ಹೇಳುತ್ತಿದ್ದಾರೆ ಎಂದು ರಮಾನಾಥ ರೈ ಹೇಳಿದರು.
ನಾಲ್ಕು ವರುಷದ ಬಳಿಕ ಇವರಿಗೆ ವಾಚ್ ಮನ್ ಕೆಲಸ ಕೊಡುವುದಾಗಿ ಬಿಜೆಪಿ ಕಚೇರಿಯವರು, ಕೆಲವು ಉದ್ಯಮಿಗಳು ಹೇಳಿರುವುದು ಸೇನೆಯನ್ನು ಕೆಳ ದರ್ಜೆಗೆ ಇಳಿಸುವುದಾಗಿದೆ. ನಾಲ್ಕು ವರುಷದ ಬಳಿಕ ಕ್ಯಾಂಟೀನ್ ಸವಲತ್ತು, ಆರೋಗ್ಯ ಭಾಗ್ಯ ಯಾವುದೇ ಅನುಕೂಲ ಸಿಗುತ್ತಿಲ್ಲ. ತರಬೇತಿಗೆ ನಾಲ್ಕು ವರುಷ ಬೇಕು. ಇದು ಸೇನೆಗೆ ಶಕ್ತಿ ತುಂಬುವ ಯೋಜನೆ ಅಲ್ಲ ಎಂದು ಅವರು ಅಗ್ನಿಪಥ ಯೋಜನೆಯನ್ನು ಖಂಡಿಸಿದರು.
ಇಂದು ದಿಲ್ಲಿಯ ಜಂತರ್ ಮಂತರ್ ಸಹಿತ ಎಲ್ಲ ವಿಧಾನ ಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷವು ಅಗ್ನಿಪಥ ವಿರುದ್ಧ ಪ್ರತಿಭಟನೆ ಹಮ್ಮಿಕೊಂಡಿದೆ. ಈಗ ಕೆಲವರು ಇಂದಿರಾ ಗಾಂಧಿಯವರ ತುರ್ತು ಪರಿಸ್ಥಿತಿ ಬಗೆಗೆ ದೂರಿದ್ದಾರೆ. ಆದರೆ ಇಂದಿರಾರು ಭೂಸುಧಾರಣೆ, ಋಣ ಪರಿಹಾರ, ಬ್ಯಾಂಕ್ ರಾಷ್ಟ್ರೀಕರಣ ಇತ್ಯಾದಿ ಜನಪರ ಕೆಲಸ ಮಾಡಿದವರು. ಇಂದಿರಾರು ತುರ್ತು ಪರಿಸ್ಥಿತಿ ಬಳಕ ಮತ್ತೊಮ್ಮೆ ಗೆದ್ದರು ಏಕೆಂದರೆ ಜನರು ಅದನ್ನು ವಿರೋಧಿಸಿದವರಿಗೆ ಜನ ಬೆಂಬಲ ಇರಲಿಲ್ಲ ಎಂದು ರೈ ತಿಳಿಸಿದರು.
ಮೋದಿ ಸರಕಾರವು ದೇಶವನ್ನು ಅಘೋಷಿತ ತುರ್ತು ಪರಿಸ್ಥಿತಿಗೆ ದೂಡಿದ್ದಾರೆ. ಸೇನೆಗೆ ಹೊರ ಗುತ್ತಿಗೆ ಎಂಬುದು ಯಾವ ದೇಶಪ್ರೇಮಿಯೂ ಒಪ್ಪತಕ್ಕದ್ದಲ್ಲ. ಬಿಜೆಪಿಯು ಯಾವ ಆಶ್ವಾಸನೆ ಈಡೇರಿಸಿದೆ? ಅದು ಧರ್ಮ, ಮತ, ಪಾಕ್ ಇತ್ಯಾದಿ ಹೇಳಿ ರಾಜಕೀಯ ಮಾಡುವವರು. ತುರ್ತು ಪರಿಸ್ಥಿತಿ ಬಗೆಗೆ ಮಾತನಾಡುವ ನಳಿನ್ ಕುಮಾರ್ ಒಬ್ಬ ವಿದೂಷಕ ಇದ್ದಂತೆ. ಸೆಂಟ್ರಲ್ ಮೈದಾನ ಬ್ರಿಟಿಷರು ಇಟ್ಟ ಹೆಸರು. ಅದನ್ನು ಸ್ವಾತಂತ್ರ್ಯ ಹೋರಾಟಗಾರರು ನೆಹರು ಮೈದಾನ ಮಾಡಿದರು. ಈಗ ಬಿಜೆಪಿಯವರು ಬ್ರಿಟಿಷರ ಹೆಸರಿಗೆ ವಾಪಾಸು ಹೋಗಿರುವುದು ನಾಚಿಕೆಗೇಡು ಎಂದು ರೈ ಹೇಳಿದರು.
ಜಾರಿ ನಿರ್ದೇಶನಾಲಯದ ದಾಳಿ ಬಿಜೆಪಿ ಭ್ರಷ್ಟರ ಮೇಲೆ ಏಕಿಲ್ಲ ಎಂದೂ ಅವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಅಪ್ಪಿ, ಶಾಲೆಟ್ ಪಿಂಟೋ, ನವೀನ್ ಡಿಸೋಜಾ, ಹರಿನಾಥ್, ಇಬ್ರಾಹಿಂ ಕೋಡಿಜಾಲ್, ಸಾಹುಲ್ ಹಮೀದ್, ಪಾಲ್ ಮೊದಲಾದವರು ಉಪಸ್ಥಿತರಿದ್ದರು.