ಮಂಗಳೂರು, ಜೂನ್ 27: ಬಿಜೆಪಿಯ ಅಲ್ಪಸಂಖ್ಯಾತರ ಘಟಕದ ಮುಖ್ಯಸ್ಥರಾದ ಅನ್ವರ್ ಮಾನಿಪ್ಪಾಡಿಯವರು ಇಂದು ಪತ್ರಿಕಾಗೋಷ್ಠಿ ನಡೆಸಿ ಭಾರತದಲ್ಲಿ ಮುಸ್ಲಿಮರ ಇಂದಿನ ದುಸ್ಥಿತಿಗೆ ಹಿಂದಿನವರ ಆಡಳಿತದತ್ತ ಬೊಟ್ಟು ಮಾಡಿದರು.
ಬಿಜೆಪಿ ಅಲ್ಪಸಂಖ್ಯಾತರ ಘಟಕದ ಮಾಜೀ ಅಧ್ಯಕ್ಷರು ಹಾಗೂ ಹಾಲಿ ಕರ್ನಾಟಕ ಬಿಜೆಪಿಯ ಜಂಟಿ ವಕ್ತಾರರು ಅನ್ವರ್ ಮಾನಿಪ್ಪಾಡಿ
ನಾನು ನನ್ನ ಸಿದ್ಧಾಂತದ ಕಾರಣಕ್ಕೆ ವಕ್ಫ್ ಮಂಡಳಿ ಅಮಾನತ್ ಬ್ಯಾಂಕ್ ಎಂದು ಹತ್ತು ವರುಷಗಳ ಹಿಂದೆ ವಕ್ಫ್ ಭ್ರಷ್ಟಾಚಾರದ ಬಗೆಗೆ ವರದಿ ನೀಡಿದ್ದೆ. ಈ ವರದಿ ವಿರೋಧ ಪಕ್ಷಗಳ ಕಾರಣಕ್ಕೆ ಮೂಲೆಗೆ ಬಿದ್ದಿದೆ. ಈ ಸಂಬಂಧ ನನಗೆ ಬೆದರಿಕೆ ಇದ್ದರೂ ಪೋಲೀಸು ರಕ್ಷಣೆ ನೀಡಿಲ್ಲ ಎಂದು ಮಾನಿಪ್ಪಾಡಿ ಹೇಳಿದರು.
ಈ ಸಂಬಂಧ ನಾನು ಕೋರ್ಟಿಗೆ ಹೋದಾಗ ಈ 2.3 ಲಕ್ಷ ಕೋಟಿ ರೂಪಾಯಿಗಳ ಅವ್ಯವಹಾರದ ವಿಷಯದಲ್ಲಿ ಉಚ್ಚ ಮತ್ತು ಸರ್ವೋಚ್ಚ ನ್ಯಾಯಾಲಯಕ್ಕೆ ಹೋಗಿ ಗೆದ್ದೆ. ಆದರೆ ಕಾಂಗ್ರೆಸ್ ಬಿಡಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೂ ವರದಿ ಜನರ ಸಮ್ಮುಖಕ್ಕೆ ಬರದಂತೆ ಮೂಲೆಗೆ ಬಿದ್ದಿದೆ ಎಂದು ಮಾನಿಪ್ಪಾಡಿ ಹೇಳಿದರು.
ಮುಂದೆ ಯಡಿಯೂರಪ್ಪ ಮತ್ತು ಅವರ ಮಗ ವಿಜಯೇಂದ್ರ ಅವರು ನನ್ನನ್ನು ಕರೆಸಿ ಎಷ್ಟು ದಿನ ಹೋರಾಟ ಮಾಡುತ್ತೀರಿ ಬಿಟ್ಟುಬಿಡಿ. ನಿಮಗೆಷ್ಟು ಬೇಕು ಹೇಳಿ ಎಂದರು. ನಿಮ್ಮದು ಕಮಿಶನ್ ಕೆಲಸವೇ ಎಂದು ಬೈದು ಬಂದು ಪತ್ರಿಕಾಗೋಷ್ಠಿ ನಡೆಸಿದೆ. ಕೆಲವು ಪತ್ರಿಕೆ, ಟೀವಿಗಳಲ್ಲಿ ಚೆನ್ನಾಗಿ ಬಂತು. ಮುಂದೆ ಬಂದ ಬೊಮ್ಮಾಯಿಯವರು ಕೂಡ ಇದನ್ನು ಮೂಲೆಗೆ ಹಾಕಿದ್ದಾರೆ ಎಂದು ಅನ್ವರ್ ಆಪಾದಿಸಿದರು.
ಮೋದಿಯವರು ಎಲ್ಲರೊಂದಿಗೆ ಎಲ್ಲರ ವಿಕಾಸ ಎಂದರು. ಆದರೆ ಬಿಜೆಪಿ ಸರಕಾರವು ಅದನ್ನು ರಾಜ್ಯದಲ್ಲಿ ಜಾರಿಗೆ ತಾರದೆ ಮುಸ್ಲಿಮರ ವಿರುದ್ಧ ನಿಂತಿರುವಂತಿದೆ. ಈಗ ನನ್ನ ಕಾಲದಲ್ಲಿ ಸುಳ್ಯ ಬಳಿ ಕೊಟ್ಟ ಸ್ಮಶಾನ ಜಾಗ ಮೊದಲಾದವನ್ನು ಹಿಂದೆ ಪಡೆಯಲು ಪ್ರಯತ್ನಿಸುತ್ತಿದ್ದಾರೆ. ಸಂಜೀವಿನಿ ನಗರದಲ್ಲಿ ಕಟ್ಟಿದ ಮಸೀದಿಯನ್ನು ಕ್ರಮ ಪ್ರಕಾರ ಇದ್ದರೂ ಪೋಲೀಸರ ಮೂಲಕ ಅದು ಓಪನ್ ಆಗದಂತೆ ಮಾಡಿದರು. ಇಂತಾ ಮಸೀದಿಗಳ ಕತೆ ಹಲವು ಎಂದು ಮಾನಿಪ್ಪಾಡಿ ವಿಷಾದಿಸಿದರು.
ನನ್ನ ವರದಿ ಮೂಲೆಗೆ ಹಾಕಿದವರು ಮತ್ತು ಕೆಲವು ರಾಜಕಾರಣಿಗಳು ವಕ್ಫ್ ಜಮೀನು ಕಬಳಿಸುತ್ತಿದ್ದಾರೆ. ಜಾಮರಾಜಪೇಟೆಯಲ್ಲಿ ಎರಡು ಎಕರೆ ಮೀರಿದ ಈದ್ಗಾ ಜಮೀನು ಇದೆ. ಅದರ ಎಲ್ಲ ದಾಖಲೆ ಇದ್ದರೂ ಅದನ್ನು ಹಿಂದಕ್ಕೆ ಪಡೆಯಲು ಈ ಸರಕಾರ ಪ್ರಯತ್ನಿಸುತ್ತಿದೆ. ಕುರೇಶಿಯವರ ಕೇಸಿನಲ್ಲಿ ವಕ್ಫ್ ಎಂದರೆ ಸದಾ ವಕ್ಫ್. ಆಸ್ತಿ ನೀಡಿದ್ದು ಪಡೆಯಲಾಗದು ಎಂಬ ತೀರ್ಪು ಇದೆ. ಆದ್ದರಿಂದ ಬೆಂಗಳೂರು ಚಾಮರಾಜಪೇಟೆಯ ಈದ್ಗಾ ಜಮೀನು ಹಿಂದಕ್ಕೆ ಪಡೆಯಲಾಗದು ಎಂದು ಮಾನಿಪ್ಪಾಡಿ ಹೇಳಿದರು.
ಸಂವಿಧಾನ ನಮಗೆ ನೀಡಿರುವ ರಕ್ಷಣೆಯನ್ನು ಈ ಸರಕಾರ ನಮ್ಮ ಸಮಾಜಕ್ಕೆ ನೀಡಿಲ್ಲ. ಈಗಿನ ವಕ್ಫ್ ಅಧ್ಯಕ್ಷರು ಭ್ರಷ್ಟರ ಕೈವಾರಿಯಾಗಿ ಯಾರಿಗೂ ಸಹಾಯವಾಗಿಲ್ಲ. ವಿಂಡ್ಸರ್ ಮ್ಯಾನರ್ ಹೋಟೆಲ್ ಜಾಗ ಸಹ ವಾಪಾಸು ಬರುತ್ತಿಲ್ಲ. ಬೊಮ್ಮಾಯಿಯವರ ಸರಕಾರವು ಅರ್ಥ ಮಾಡಿಕೊಂಡು ಕೆಲಸ ಮಾಡಲಿ. ನಾನು ಹೇಳಿದ್ದರಲ್ಲಿ ಒಂದು ತಪ್ಪಿದ್ದರೆ ನಾನು ಗಿಲೊಟಿನ್ ಗೆ (ಮಹಾ ಖಡ್ಗ) ತಲೆ ಕೊಡಲು ತಯಾರಿದ್ದೇನೆ. ನಾವು ಸರಕಾರದಲ್ಲಿ ಬೇಡುವುದು ನ್ಯಾಯ. ಬಹುಸಂಖ್ಯಾತರು ನಮ್ಮ ವಿರೋಧಿಗಳಲ್ಲ. ಬಪ್ಪ ಬ್ಯಾರಿಗೆ ಬಪ್ಪನಾಡಿನಲ್ಲಿ ಈಗಲೂ ಬಪ್ಪ ಬ್ಯಾರಿಗೆ ಗೌರವ ನೀಡುತ್ತಾರೆ. ಆದರೆ ಕೆಲವೇ ಕೆಲವರು ಭೇದ ಭಾವ ಮಾಡಿ, ಜಾತ್ರೆ ಸಂತೆಯಲ್ಲಿ ಜಾಗ ಕೊಡದಿರುವುದು, ಹಲಾಲ್ ಮೊದಲಾದ ಗಲಾಟೆ ಎಬ್ಬಿಸಿದ್ದಾರೆ. ಕಾರ್ಗಿಲ್ ಯುದ್ಧದಲ್ಲೂ ಗೆಲುವು ತಂದುದು ಅಬ್ದುಲ್ ಹಮೀದ್ ಮತ್ತು ಮುಸ್ಲಿಂ ರೆಜಿಮೆಂಟ್. ಸ್ವಾತಂತ್ರ್ಯ ಹೋರಾಟದಲ್ಲೂ ನಾವು ಹೋರಾಡಿದವರು. ಕೋಮು ಗಲಭೆಗೆ ನೀವು ಯಾರೂ ಕಾರಣರಾಗಬೇಡಿ. ಮೂರು ಬಾರಿ ನನ್ನನ್ನು ಕೊಲ್ಲುವ ಪ್ರಯತ್ನ ನಡೆಯಿತು. ಹಾಗಾದರೆ ಸತ್ಯಕ್ಕೆ ಹೋರಾಡಬಾರದೆ ಎಂದು ಮಾನಿಪ್ಪಾಡಿ ಪ್ರಶ್ನಿಸಿದರು.
ನಾನು ಹೊಸದಾಗಿ ಆರೋಪ ಮಾಡುತ್ತಿಲ್ಲ. ಈ ಬಗೆಗೆ ಮೋದಿಯವರಿಂದ ಹಿಡಿದ ಸಂಬಂಧಿಸಿದ ಹಲವಾರು ಮಂದಿಗೆ ನೂರಾರು ಕಾಗದ ಬರೆದಿದ್ದೇನೆ. ಆ ಪತ್ರಗಳನ್ನು ಮಾಧ್ಯಮಗಳಿಗೂ ಕಳುಹಿಸಿದ್ದೇನೆ ಎಂದು ಮಾನಿಪ್ಪಾಡಿ ಅವರು ಪ್ರಶ್ನೆಗೆ ಉತ್ತರಿಸಿದರು.
ನನಗೆ ಸರಕಾರದಿಂದ ನೀಡಿದ ಎಲ್ಲ ಅನುಕೂಲಗಳನ್ನು ಹಿಂತಿರುಗಿಸಿದ್ದೇನೆ ಎಂದೂ ಅವರು ಪ್ರಶ್ನೆಗೆ ಉತ್ತರಿಸಿದರು.
ಮಳಲಿ ಮಸೀದಿ ವಿಷಯ ಕೋರ್ಟಿನಲ್ಲಿದೆ. ಅದರ ವಿವರ ತಿಳಿದಿಲ್ಲ. ಅದು ವಕ್ಫ್ ಆಸ್ತಿ ಆಗಿರಲಾರದು.