ಫೋಟೋ ವರದಿ ರಾಯಿ ರಾಜಕುಮಾರ ಮೂಡುಬಿದಿರೆ
ಮೂಡುಬಿದಿರೆ ಮೆಸ್ಕಾಂ ಉಪ ವಿಭಾಗದ ಜನಸಂಪರ್ಕ ಸಭೆ ಸೆಪ್ಟೆಂಬರ್ 6 ರಂದು ನಡೆಯಿತು. ಮಂಗಳೂರು ವೃತ್ತ ಮೆಸ್ಕಾಂ ಅಧ್ಯಕ್ಷತೆ ಇಂಜಿನಿಯರ್ ಕೃಷ್ಣರಾಜ್ ಹಾಗೂ ಕಾವೂರು ಕಾರ್ಯನಿರ್ವಾಹಕ ಇಂಜಿನಿಯರ್ ಸಂತೋಷ್ ನಾಯ್ಕ್ ನಡೆಸಿದ ಸಭೆಯಲ್ಲಿ ಮೂಡುಬಿದಿರೆ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಮೋಹನ್ ಟಿ, ಸಹಾಯಕ ಇಂಜಿನಿಯರ್ ಪ್ರವೀಣ್ ಎಂ, ತಾಂತ್ರಿಕ ನಿತೀಶ್, ಕಲ್ಲ ಮುಂಡ್ಕೂರು ಶಾಖೆಯ ಸುಭಾಷ್, ಬೆಳುವಾಯಿ ಶಾಖೆಯ ಅಪ್ಸರ ಪಾಟೀಲ್ ಹಾಜರಿದ್ದು ಜನರ ಅಹವಾಲುಗಳನ್ನು ದಾಖಲಿಸಿಕೊಂಡರು.
ಕಡಲಗೆರೆಯ ರಾಜೇಶ್, ವಿಕ್ಟರ್ ಹಾಗೂ ಇತರರು ಸಭೆಯ ಮುಂದೆ ಹಲವಾರು ದೂರುಗಳನ್ನು ಇಟ್ಟರು. ವಿಶಾಲ್ ನಗರದ ಟ್ರಾನ್ಸ್ಫಾರ್ಮರ್ ಬದಲಾಯಿಸಲು ತಿಳಿಸಿದರೂ ಹತ್ತು ವರ್ಷದಿಂದ ಬಾಕಿ ಇದೆ. ಮನೆಯ ಮೀಟರ್ ಹಾಳಾಗಿ ಮೂರು ತಿಂಗಳು ಕಳೆದರೂ ಬದಲಾಯಿಸಿಲ್ಲ. ಕಟ್ಟಡ ಕಟ್ಟಲು ವಿದ್ಯುತ್ ಸಂಪರ್ಕ ತಾತ್ಕಾಲಿಕ ನೆಲೆಯಲ್ಲಿ ನೀಡಲಾಗಿದ್ದರು ಶಾಶ್ವತ ಸಂಪರ್ಕವನ್ನು ಮುಂದುವರಿಸಿಲ್ಲ. ಅರೆ ಬರೆ ಕಾಮಗಾರಿಗಳಿಂದಾಗಿ ತೊಂದರೆಗಳಾಗುತ್ತಿದೆ ಎಂದು ಗ್ರಾಹಕರು ದೂರಿದರು.
ದೂರುಗಳಿಗೆ ಪ್ರತಿಕ್ರಿಯಿಸಿದ ಅಧಿಕಾರಿಗಳು ಈಗಾಗಲೇ ಮಳೆಗಾಲದಲ್ಲಿ ತೊಂದರೆ ಗೀಡಾದ 51 ಟ್ರಾನ್ಸ್ಫಾರ್ಮರ್ ಗಳನ್ನು ಬದಲಾಯಿಸಲಾಗಿದೆ. ಶಾಖೆಯನ್ನು ವಿಭಾಗಿಸುವ ಕಾನೂನು ವಿಚಾರ ಶೀಘ್ರದಲ್ಲಿ ಪರಿಹಾರ ಗೊಳ್ಳಲಿದೆ. ಯಾವುದೇ ರೀತಿಯ ದೂರುಗಳನ್ನು ಕೂಡ ಸಾಧ್ಯವಾದಷ್ಟು ಶೀಘ್ರ ಸರಿಪಡಿಸಿ ಪರಿಹರಿಸುವ ಪ್ರಯತ್ನವನ್ನು ಮಾಡಲಾಗುವುದು ಎಂದು ಉತ್ತರಿಸಿದರು.