ವರದಿ ರಾಯಿ ರಾಜಕುಮಾರ ಮೂಡುಬಿದಿರೆ 

 ಮೂಡುಬಿದಿರೆ: ಭಾರತೀಯ ಜನತಾ ಪಾರ್ಟಿ ಮುಲ್ಕಿ ಮೂಡುಬಿದಿರೆ ಮಂಡಲ, ಬಿ ಜೆ ಪಿ ಮಹಿಳಾ ಮುಖ್ಯ ಮತ್ತು ನಗರ ಮಹಾಶಕ್ತಿ ಕೇಂದ್ರಗಳ ಸಂಯುಕ್ತ ಆಶ್ರಯದಲ್ಲಿ ಆಟಿಡೊಂಜಿ ಕಮಲ ಕೂಟ ಜುಲೈ 27ರಂದು ಸ್ವರಾಜ್ಯ ಮೈದಾನ ಸಮೀಪದ ಕಾಮಧೇನು ಸಭಾಭವನದಲ್ಲಿ ನಡೆಯಿತು. ಆಟಿದ ತೆಲಿಕೆ, ಮದಿಪು, ಗೊಬ್ಬು, ಅಟಿಲ್ ಗಳ ಸಂಯುಕ್ತ ಚಟುವಟಿಕೆಯಲ್ಲಿ ಕಾರ್ಯಕ್ರಮ ಮೂಡಿಬಂದಿತು. 

ಕಾರ್ಯಕ್ರಮವನ್ನು ಸಂಸ್ಕೃತಿ ರೀತ್ಯಾ ಕಳಸದಲ್ಲಿ  ತೆನೆ ಅರಳಿಸಿ ಹಾಲು ಎರೆದು ಉದ್ಘಾಟಿಸಿದ ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ ಮಾತನಾಡಿ ಭಾರತೀಯ ಸಂಸ್ಕೃತಿ, ಸಾಂಸ್ಕೃತಿಕ ವಿಚಾರಗಳನ್ನು ಇಂದಿನ ಸ್ವತಂತ್ರ ಬದುಕನ್ನು ಆಸೆ ಪಡುವ ಜನರಿಗೆ ಪರಿಚಯ ಮಾಡಿಸಿಕೊಡಲು ಪ್ರಯತ್ನಿಸಿದ ಶ್ರಮ ಸಾರ್ಥಕವಾಗಿದೆ. ಕಟ್ಟಡಗಳ ಮಧ್ಯೆ ಸ್ವತಂತ್ರ ಬದುಕನ್ನು ಆಸೆ ಪಡುವ ಜನರು ಭಾರತೀಯ ವಿಚಾರಗಳನ್ನು, ಆದರ್ಶಗಳನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡರೆ ಸಾರ್ಥಕ ಬದುಕು ನಡೆಸಲು ಸಾಧ್ಯ ಇದೆ ಅದಕ್ಕಾಗಿ ಈ ರೀತಿಯ ಕಾರ್ಯಕ್ರಮಗಳನ್ನು ಬಿಜೆಪಿ ಹಮ್ಮಿಕೊಂಡಿರುವುದು ಬಹಳ ಸಂತಸವನ್ನು ಉಂಟು ಮಾಡಿದೆ ಎಂದರು. 

ಹಿರಿಯ ಹೋರಾಟಗಾರ, ಅಂಚೆಪಾಲಕ, ಸಾಹಿತಿ ಸದಾನಂದ ನಾರಾವಿ, ಮಾಸ್ತಿ ಕಟ್ಟೆಯ ಸೈನಿಕ ಹರೀಶ್, ಬಿಜೆಪಿಯ ಹಿರಿಯ ಮುಖಂಡರುಗಳಾದ ಬಾಹುಬಲಿ ಪ್ರಸಾದ್, ಮೇಘನಾಥ ಶೆಟ್ಟಿ, ಕೆ ಆರ್ ಪಂಡಿತ್ ಅವರುಗಳನ್ನು ಸನ್ಮಾನಿಸಲಾಯಿತು. ಸನ್ಮಾನಕ್ಕೆ ಉತ್ತರಿಸಿದ ಬಾಹುಬಲಿ ಪ್ರಸಾದ್, ಕೆಆರ್ ಪಂಡಿತ್, ಹಿರಿಯರನ್ನು ಗುರುತಿಸಿ ಕಿರಿಯರಿಗೆ ಮಾರ್ಗದರ್ಶನ ಮಾಡಲು ನಡೆಸಿದ ಈ ಕಾರ್ಯಕ್ರಮ ಬಹಳ ಉತ್ತಮವಾಗಿ ಮೂಡಿ ಬಂದಿದೆ ಎಂದು ಹರ್ಷ ವ್ಯಕ್ತಪಡಿಸಿದರು. 

ಬಿಜೆಪಿ ಮಂಡಲ ಅಧ್ಯಕ್ಷ ಸತೀಶ್ ಕುಂಪಲ ಅಧ್ಯಕ್ಷತೆ ವಹಿಸಿದ್ದು ಮೋದಿ ಅವರ ಕಾರ್ಯಕ್ರಮಗಳು ಎಲ್ಲರಿಗೂ ಮಾದರಿಯಾಗಿದೆ .ಅದನ್ನು ಎಲ್ಲರೂ ತಪ್ಪದೇ ನೋಡಿ ಅನುಕರಿಸಲು ಪ್ರಯತ್ನಿಸಬೇಕು. ಎಲ್ಲರ ಮಾರ್ಗದರ್ಶನದಿಂದ ಉತ್ತಮ ಕೆಲಸಗಳನ್ನು ಬಿಜೆಪಿ ಮಾಡಲು ಸಾಧ್ಯವಾಗಿದೆ ಎಂದು ಅಭಿನಂದಿಸಿದರು. 

ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಮಂಜುಳಾ ರಾವ್ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ವೇದಿಕೆಯಲ್ಲಿ ಬಿಜೆಪಿ ಮುಂದಾಳುಗಳಾದ ಲಕ್ಷ್ಮಣ ಪೂಜಾರಿ, ಜಯಶ್ರೀ ಕೇಶವ, ಜಯಂತ್ ಕೋಟ್ಯಾನ್, ಶಾಂತಿಪ್ರಸಾದ್ ಹೆಗ್ಡೆ, ಈಶ್ವರ್ ಕಟೀಲ್ ಹಾಗೂ ಪುರಸಭಾ ಬಿಜೆಪಿ ಸದಸ್ಯರುಗಳು ಹಾಜರಿದ್ದರು. 

ಇದೇ ಸಂದರ್ಭದಲ್ಲಿ ನಡೆದ ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳಾದ ರಸಪ್ರಶ್ನೆ, ಆರಿಸಿ ಅಭಿನಯಿಸು, ಲಕ್ಕಿ ಬಾಲ್, ಲಾಂಗ್ ಬೆಲ್ಟ್, ಹಿಮ್ಮುಖ ಓಟ, ನಿಂಬೆ ಚಮಚ, ಬಿಸ್ಕೆಟ್ ಗೇಮ್ ಇತ್ಯಾದಿ ಆಟಗಳಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಯಿತು. 

ಮೂಡುಬಿದಿರೆ ಪುರಸಭಾ ಉಪಾಧ್ಯಕ್ಷ ನಾಗರಾಜ ಪೂಜಾರಿ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ವಿಖ್ಯಾತ್ ಕಾರ್ಯಕ್ರಮ ನಿರ್ವಹಿಸಿದರು. ಮಹಿಳಾ ಮೋರ್ಚಾ ಅಧ್ಯಕ್ಷೆ ಗೀತಾ ಲಕ್ಷ್ಮಿ ವಂದಿಸಿದರು.