ಮಂಗಳೂರು ಮೇ 21: ಪಠ್ಯ ಪುಸ್ತಕಗಳಿಂದ ನಾರಾಯಣ ಗುರುಗಳು, ಭಗತ್ ಸಿಂಗ್ ಮೊದಲಾದವರ ಹೆಸರು ಬಿಟ್ಟಿರುವುದಾಗಿ ಕಾಂಗ್ರೆಸ್‌ನವರು ಮೂರ್ನಾಲ್ಕು ದಿನಗಳಿಂದ ಅಪಪ್ರಚಾರ ನಡೆಸಿದೆ. ಇದು ಅದರ ರಾಜಕೀಯ ಅಜೀರ್ಣದ ಲಕ್ಷಣ ಎಂದು ಕಿಯೋನಿಕ್ಸ್ ಅಧ್ಯಕ್ಷರಾದ ಹರಿಕೃಷ್ಣ ಬಂಟ್ವಾಳ ಪತ್ರಿಕಾಗೋಷ್ಠಿ ನಡೆಸಿ ಹೇಳಿದರು.

ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಮೊದಲು ಒಪ್ಪಿ ಅದರಂತೆ ಪಠ್ಯ ಪುಸ್ತಕ ಮರು ನೇರ್ಪು ಮಾಡುತ್ತಿದೆ. ಪಠ್ಯ ಪುಸ್ತಕಗಳಲ್ಲಿ ಮೊಗಲರು, ಟಿಪ್ಪು ಸುಲ್ತಾನ ಚರಿತ್ರೆ ಮುಂದಿನ ಭಾರತದ ಮಕ್ಕಳಿಗೆ ಅಗತ್ಯ ಇಲ್ಲ, ಹಾಗಾಗಿ ದಾರ್ಶನಿಕರ ಇತಿಹಾಸವನ್ನು ಪಠ್ಯ ಪುಸ್ತಕಕ್ಕೆ ಸೇರಿಸುವ ಕೆಲಸ ನಮ್ಮ ಸರಕಾರ ಮಾಡುತ್ತಿದೆ ಎಂದು ಹರಿಕೃಷ್ಣ ಬಂಟ್ವಾಳ ಹೇಳಿದರು.

ಬಂಟ್ವಾಳದಲ್ಲಿ ನಮ್ಮ ಸರಕಾರವು ನಾರಾಯಣ ಗುರುಗಳ ಹೆಸರಿನ ವಸತಿ ಶಾಲೆ ತೆರೆಯುತ್ತಿದೆ. ಅದನ್ನು ಯಾವ ಕಾಂಗ್ರೆಸ್‌ನವರೂ ಸ್ವಾಗತಿಸಿಲ್ಲ. ಪ್ರಧಾನಿ ಮೋದಿಯವರು ನಾಲ್ಕು ಬಾರಿ ಶಿವಗಿರಿಗೆ ಭೇಟಿ ನೀಡಿದ್ದಾರೆ. ಬಿಜೆಪಿ ಹೇಗೆ ನಾರಾಯಣ ಗುರುಗಳ ವಿರೋಧಿ ಎಂದು ನಾನು ಕೇಳುತ್ತೇನೆ. ಇವರು ಯಾವ ನಾರಾಯಣ ಗುರುಗಳ ಅನುಯಾಯಿಗಳು. ಈ ಪ್ರದೇಶದಲ್ಲಿ ಜನಾರ್ದನ ಪೂಜಾರಿ ಒಬ್ಬರು ಮಾತ್ರ ನಾರಾಯಣ ಗುರುಗಳ ಅನುಯಾಯಿ. ಅವರನ್ನು ರಮಾನಾಥ ರೈ ಕಣ್ಣೀರು ತರಿಸಿದಾಗ ಈ ಕಾಂಗ್ರೆಸ್ ನಾಯಕರು ಯಾರೂ ಮಾತನಾಡಿಲ್ಲ. ಇವರಿಗೆ ನಾರಾಯಣ ಗುರುಗಳ ಬಗೆಗೆ ಮಾತನಾಡುವ ನೈತಿಕತೆ ಇಲ್ಲ ಎಂದು ಹರಿಕೃಷ್ಣ ಹೇಳಿದರು.

ಈ ರೈ ನಮ್ಮ ಮಂತ್ರಿಗಳ ರಾಜೀನಾಮೆ ಕೇಳುತ್ತಾರೆ. ಇವರು ಜನಾರ್ದನ ಪೂಜಾರಿ ವಿರುದ್ಧ ಕೆಲಸ ಮಾಡಿದಾಗ ನಾನು ಇವರ ರಾಜೀನಾಮೆ ಕೇಳಿದೆ. ಕೊಟ್ಟರೆ? ಇವರದು ಬರೇ ಚುನಾವಣಾ ಸ್ಟಂಟ್. ರಾಷ್ಟ್ರೀಯ ಶಿಕ್ಷಣ ನೀತಿ ಬಂದರೆ ನೆಹರು ನಿಜವಾದ ವಂಶಾವಳಿ ಬದಲಾಗುತ್ತದೆ. ಹಿಜಬ್ ಬೇಕು ಎನ್ನುವ ಕಾಂಗ್ರೆಸ್‌ಗೆ ಪುಸ್ತಕ ಬೇಡ. ಇವರ ಹಿಜಬ್ ನಿಂದ ಹಲವು ಹುಡುಗಿಯರ ಬದುಕು‌ ಹಾಳಾಯಿತು. ಭಗವದ್ಗೀತೆ ಆರೆಸ್ಸೆಸ್‌ನದಲ್ಲ. ಅದೇಕೆ ಬೇಡ. ಕಾಂಗ್ರೆಸ್ ಬಾವುಟದಲ್ಲಿ ಇರುವ ಕೇಸರಿ ಬಿಸಾಕಿ ಬರೇ ಹಸಿರು ಉಳಿಸಿಕೊಳ್ಳಿ ಎಂದು ಹರಿಕೃಷ್ಣ ಹೇಳಿದರು.

ನಾರಾಯಣ ಗುರು ವೃತ್ತ ಹೆಸರು ಇಡುವಾಗ ವಿರೋಧ ಮಾಡಿದವರಿಗೆ ಈಗ ನಾರಾಯಣ ಗುರು ಯಾಕೆ? ಪಠ್ಯ ಪುಸ್ತಕ ಗಲಾಟೆ ಕಾಂಗ್ರೆಸ್ ಕಿತಾಪತಿ ಎಂದು ಅವರು ಹೇಳಿದರು.

ಬೆಳ್ತಂಗಡಿ ಶಾಸಕರು ಹೇಳಿದ್ದು ದೇಶದ್ರೋಹಿ ಮುಸ್ಲಿಮರ ಮತ ಬೇಡ ಎಂದು. ಉಳಿದಂತೆ ನಾವು ಮುಸ್ಲಿಂ ವಿರೋಧಿಗಳಲ್ಲ. ಕುದ್ರೋಳಿ ದೇವಾಲಯದ ಒಬ್ಬರಿಗೆ ಕಾಂಗ್ರೆಸ್ ಟಿಕೆಟ್ ಬೇಕಾಗಿದೆ. ಅದಕ್ಕಾಗಿಯೂ ಈ ನಾರಾಯಣ ಗುರುಗಳ ವಿವಾದ ಎದ್ದಿದೆ ಎಂದೂ ಹರಿಕೃಷ್ಣರು ಪ್ರಶ್ನೆಗಳಿಗೆ ಉತ್ತರಿಸುತ್ತ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ರಾಮದಾಸ್ ಬಂಟ್ವಾಳ, ಜಯಶ್ರೀ ಕರ್ಕೇರ, ಕೊರಗಪ್ಪ ಮೊದಲಾದವರು ಉಪಸ್ಥಿತರಿದ್ದರು.