ಮಂಗಳೂರು, ಜೂನ್ 19: ಶರವು ರಸ್ತೆಯಲ್ಲಿ ನವಕರ್ನಾಟಕ ಪ್ರಕಾಶನದವರ ಹೊಸ ಪುಸ್ತಕ ಮಳಿಗೆ ಉದ್ಘಾಟನೆಗೊಂಡಿತು. ಈ ಸಂದರ್ಭದಲ್ಲಿ 16 ಹೊಸ ಪುಸ್ತಕಗಳು ಬಿಡುಗಡೆ ಆದವು.

ವಿಜಯಪುರ ಮಹಿಳಾ ವಿಶ್ವವಿದ್ಯಾನಿಲಯದ ಮಾಜೀ ಉಪಕುಲಪತಿಗಳಾದ ಡಾ. ಸಬಿಹಾ ಭೂಮಿಗೌಡ ಅವರು 16 ಹೊಸ ಪುಸ್ತಕಗಳನ್ನು ಬಿಡುಗಡೆ ಮಾಡಿದರು.

ಅವರು ಮಾತನಾಡಿ ಪುಸ್ತಕದ ಒಡನಾಟವನ್ನು ಮುಂದುವರಿಯುವಂತೆ ಮಾಡಿದ ನವಕರ್ನಾಟಕದವರಿಗೆ ಅಭಿನಂದನೆಗಳು ಎಂದರು.

ಮಂಗಳೂರಿನ ದೇವಸ್ಥಾನಗಳೆಂದರೆ ನವಕರ್ನಾಟಕ ಪುಸ್ತಕ ಮಳಿಗೆ ಮತ್ತು ಅಂದಿನ ಅತ್ರಿ ಮತ್ತು ಇಂದಿನ ನವಕರ್ನಾಟಕ ಮಳಿಗೆ ಎಂದು ಉಪಾಧ್ಯಾಯರೊಬ್ಬರು ಕಲಿಸಿದ್ದನ್ನು ಸಬಿಹಾ ನೆನಪಿಸಿಕೊಂಡರು.

ಡಾ. ಗಣನಾಥ ಎಕ್ಕಾರು ಅವರು ಬಿಡುಗಡೆಯಾದ ನಾಲ್ಕು ಪುಸ್ತಕಗಳ ಪರಿಚಯ ಮಾಡಿದರು. ಪುಸ್ತಕ ಪರಿಚಯ ಎಂಬುದು ಪುಸ್ತಕದ ವಿಮರ್ಶೆಯಲ್ಲ. ಆದ್ದರಿಂದ ಇಲ್ಲಿ ಸಂವಿಧಾನ, ತಿರುವು ನೀಡಿದ ಕೋರ್ಟು ತೀರ್ಪುಗಳು ಇವೆಲ್ಲ ಪರಿಗಣಿಸಬೇಕಾದವು ಎಂದು ತಿಳಿಸಿದರು.

ಏಕ ಸಂಸ್ಕೃತಿ ಹೇರುವ ಪ್ರಯತ್ನವು ಅಪಾಯಕಾರಿ ಆದುದು. ಈ ನಿಟ್ಟಿನಲ್ಲಿ ಇಲ್ಲಿನ ಪುಸ್ತಕಗಳು ಮನನೀಯ ಎಂದೂ ಅವರು ಹೇಳಿದರು.

ಡಾ. ಜ್ಯೋತಿ ಚೇಳ್ಯಾರ್ ಅವರು  ಇನ್ನೂ ನಾಲ್ಕು ಪುಸ್ತಕಗಳ ಪರಿಚಯ ಮಾಡಿದರು. ಸಹಜತೆಯ ಕಾವ್ಯಕ್ರಿಯೆ ಬಹಳ ಮಖ್ಯ. ಬೇರು ಸಂಸ್ಕೃತಿಯ ಮುಖ್ಯ ಭಾಗ ಅವೆಲ್ಲ ಇಲ್ಲಿ ಪಡಿಮೂಡಿವೆ ಎಂದು ಜ್ಯೋತಿ ಚೇಳ್ಯಾರ್ ಹೇಳಿದರು.

ಹೊಸತು ಪತ್ರಿಕೆಯ ಸಂಪಾದಕರಾದ ಡಾ. ಸಿದ್ದನಗೌಡ ಪಾಟೀಲ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಮೊದಲು ನವಕರ್ನಾಟಕದ ರಮೇಶ್ ಉಡುಪ ಪ್ರಾಸ್ತಾವಿಕವಾಗಿ ಮಾತನಾಡಿದರು.

ರಮೇಶ್ ಉಡುಪ ಅವರು ಸಂಕ್ಷಿಪ್ತವಾಗಿ ಉಳಿದ ಎಂಟು ಪುಸ್ತಕಗಳ ಬಗೆಗೆ ಹೇಳಿದರು. ಕಲ್ಲೂರು ನಾಗೇಶ್ ಅವರು ಕಾರ್ಯಕ್ರಮ ನಿರ್ವಹಿಸಿದರು.

ನವಕರ್ನಾಟಕವು 6,010 ಕೃತಿಗಳನ್ನು ನೀಡಿದೆ. ಇನ್ನಷ್ಟು ವಿಸ್ತಾರವಾಗುತ್ತಿದೆ ಎಂದು ಅಧ್ಯಕ್ಷತೆ ವಹಿಸಿದ್ದ ಸಿದ್ದನಗೌಡ ಪಾಟೀಲ ಹೇಳಿದರು.

ಕ್ರೌರ್ಯವು ಶೌರ್ಯವಾಗುವ ಮತ್ತು ಮೌಢ್ಯಗಳು ಮೌಲ್ಯವಾಗುವ ಇಂದಿನ ಸಂದಿಗ್ಧ ದಿನಮಾನದಲ್ಲಿ ವಿಚಾರ ಪುಸ್ತಕಗಳು ಸಹ ಕಠಿಣ ಪರಿಸ್ಥಿತಿ ಎದುರಿಸುತ್ತಿವೆ ಎಂದೂ ಸಿದ್ದನಗೌಡ ಪಾಟೀಲ ತಿಳಿಸಿದರು.