ಮಂಗಳೂರು: ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಕರ್ನಾಟಕ ರಾಜ್ಯ ಶಾಖೆ ತನ್ನ ಸ್ಥಾಪನೆಯ ಶತಮಾನೋತ್ಸವದ ಆಚರಣೆಯ ಹಿನ್ನೆಲೆಯಲ್ಲಿ ಕಳೆದ ಫೆಬ್ರವರಿಯಿಂದ ಎಪ್ರಿಲ್‌ವರೆಗೆ ಹಮ್ಮಿಕೊಂಡಿದ್ದ ಕ್ಯಾನ್ಸರ್ ಮುಕ್ತ ಆಂದೋಲನದ ಸಮಾರೋಪ ಸಮಾರಂಭ ಇತ್ತೀಚೆಗೆ ಪಿಲಿಕುಳದ ವಿಜ್ಞಾನ ಕೇಂದ್ರದಲ್ಲಿ ಜರುಗಿತು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿದ ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಪಿ ಸುಬ್ರಹ್ಮಣ್ಯ ಯಡಪಡಿತ್ತಾಯ, ರೆಡ್‌ಕ್ರಾಸ್ ನಂತಹ ಅಂತಾರಾಷ್ಟ್ರೀಯ ಸಂಸ್ಥೆ ಸಮಾಜದ ಕಟ್ಟಕಡೆಯ ಜನರಿಗಾಗಿ ತನ್ನನ್ನು ತಾನು ಮುಡಿಪಾಗಿಟ್ಟುಕೊಂಡಿರುವುದು ಅಭಿನಂದನೀಯ. ಮಂಗಳೂರು ವಿಶ್ವವಿದ್ಯಾನಿಲಯದ ಯುವ ರೆಡ್ ಕ್ರಾಸ್ ಘಟಕ ಇದಕ್ಕೆ ಪೂರಕವಾಗಿ ಕೆಲಸ ಮಾಡುತ್ತಿದೆ, ಎಂದರು.
ನಿಟ್ಟೆ ವೈದ್ಯಕೀಯ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಸತೀಶ್ ಕುಮಾರ್ ಭಂಡಾರಿ ಮಾತನಾಡಿ, ಬಹುಪಾಲು ಕ್ಯಾನ್ಸರ್ ಪೀಡಿತರು ಆಸ್ಪತ್ರೆಗೆ ಬರುವ ವೇಳೆಗೆ ಕ್ಯಾನ್ಸರ್ ಅವರ ಶರೀರದ ಬಹುಭಾಗವನ್ನು ಆಕ್ರಮಿಸಿಕೊಂಡಿರುತ್ತದೆ. ಇದಕ್ಕಾಗಿ ಜಾಗೃತಿ ಅತೀ ಮುಖ್ಯ, ಎಂದರು. ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ದಕ್ಷಿಣ ಕನ್ನಡ ಜಿಲ್ಲಾ ಶಾಖೆಯ ಸಭಾಪತಿ ಸಿ.ಎ. ಶಾಂತರಾಮ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
ಸಹ್ಯಾದ್ರಿ ಇಂಜಿನಿಯರಿಂಗ್ ಮತ್ತು ಮ್ಯಾನೇಜ್ಮೆಂಟ್ ಕಾಲೇಜಿನ ಶೈಕ್ಷಣಿಕ ಡೀನ್ ಶಮಂತ್ ರೈ, ಟ್ರಸ್ಟಿ ದೇವದಾಸ್ ಹೆಗಡೆ, ಪಿಲಿಕುಳ ನಿಸರ್ಗಧಾಮ ವಿಜ್ಞಾನ ಕೇಂದ್ರದ ನಿರ್ದೇಶಕ ಡಾ ಕೆ.ವಿ. ರಾವ್, ಮಂಗಳೂರು ವಿಶ್ವವಿದ್ಯಾನಿಲಯದ ಯುವ ರೆಡ್ ಕ್ರಾಸ್ ನೋಡಲ್ ಅಧಿಕಾರಿ ಡಾ. ಗಣಪತಿ ಗೌಡ, ಯೆನೆಪೋಯ ವಿಶ್ವವಿದ್ಯಾನಿಲಯದ ನಿತ್ಯಾಶ್ರೀ ಬಿ.ವಿ, ನಿಟ್ಟೆ ವಿಶ್ವವಿದ್ಯಾನಿಲಯದ ಲತಾ ಎಸ್, ಸಹ್ಯಾದ್ರಿ ಇಂಜಿನಿಯರಿಂಗ್ ಮತ್ತು ಮ್ಯಾನೇಜ್ಮೆಂಟ್ ಕಾಲೇಜಿನ ಶ್ರೀಲತಾ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಜಿಲ್ಲಾ ಶಾಖೆಯ ಆಡಳಿತ ಮಂಡಳಿಯ ಸದಸ್ಯ ರವೀಂದ್ರನಾಥ್, ರವೀಂದ್ರ ಶೆಟ್ಟಿ ಮತ್ತು ರಕ್ತ ನಿಧಿಯ ಸಂಚಾಲಕ ಪ್ರವೀಣ್ ಭಾಗವಹಿಸಿದ್ದರು.
ರೋಶನಿ ಕಾಲೇಜ್ ಆಫ್ ಸೋಶಿಯಲ್ ವರ್ಕ್ ಮತ್ತು ನಿಟ್ಟೆ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ನಿತ್ಯಾಶ್ರೀ ಬಿ.ವಿ. ಕಾರ್ಯಕ್ರಮ ನಿರೂಪಿಸಿದರು. ದಕ್ಷಿಣ ಕನ್ನಡ ಜಿಲ್ಲೆಯ ಯುವ ರೆಡ್ ಕ್ರಾಸ್ ಸಂಚಾಲಕ ಸಚೇತ್ ಸುವರ್ಣ ಸ್ವಾಗತಿಸಿ, ಜಿಲ್ಲಾ ರೆಡ್ ಕ್ರಾಸ್ ಶಾಖೆಯ ಗೌರವ ಕಾರ್ಯದರ್ಶಿ ಬಿ.ಕೆ. ಕುಸುಮಾಧರ್ ವಂದಿಸಿದರು.
ಜಾಗೃತಿ ಅಭಿಯಾನ ದಲ್ಲಿ ಸಹಕರಿಸಿದ ವಿದ್ಯಾಸಂಸ್ಥೆಗಳು ಮತ್ತು ಸ್ಥಳೀಯ ಸಾಮಾಜಿಕ ಸೇವಾ ಸಂಸ್ಥೆಗಳ ಮುಖ್ಯಸ್ಥರನ್ನು ಸತ್ಕರಿಸಲಾಯಿತು. ಆಂದೋಲನಕ್ಕಾಗಿ ಶ್ರಮಿಸಿದ ವೈದ್ಯರು, ಸ್ವಯಂಸೇವಕರು ಹಾಗೂ ಕಾರ್ಯಕರ್ತರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.