ಪ್ರತಿ ರಾತ್ರಿ ನಿದಿರೆಯ

ಮಂಪರಿನಲಿ ಗುನುಗುನಿಸುವ

ಸ್ವಪ್ನಗಳಿಗೆಲ್ಲ, ಬಣ್ಣ ಬಣ್ಣದ

ಅಂಗಿಯ ತೊಟ್ಟು ಹಗಲ ಬೀದಿಯಲಿ

ಸುತ್ತುವ ಬಯಕೆ,

ಹಗಲಿನ ಕಾಲುಗಳಿಗೆ ಇರುಳಿನ ಕೌದಿಯೊಳಗೆ

ಮಗ್ಗಲು ಬದಲಿಸುವ ತವಕ,

ಇರುಳು ಬೆಳಕಿನಾಟದಲಿ

ತೆರೆಯೊಳಗಿಣುಕುವ ತಿಳಿಸಂಜೆಗೆ ನಿತ್ಯ ಹರೆಯ...!


ಮಾರ್ಗಶಿರ ಮಾಸದ

ಈ ರಾತ್ರಿಗಳಿಗೆಲ್ಲ

ನೀ ಉಳಿಸಿಹೋದ

ಎದೆಸುಡುವ ಛಾಯೆಗಳೆ

ಅಂಟಿರಬೇಕು ಸಖ,

ಬೇಡವೆಂದರು ಹೊದಿಕೆ

ಸರಿಸಲಾಗದಂತೆ

ಕಾಡುತ್ತವೆ..!


ಉಹ್ಞೂಂ..! ಇಂದಿಗೂ

ಅರಿವಾಗುತ್ತಿಲ್ಲ ಸಖ, ಅಂದು

ಜಾರಿದ್ದು ಕಾಲವೊ,

ಮನವೊ ಎಂದು.

ನೀನಂದು ತಿರುಗಿಯು

ನೋಡದೆ ಹೋದೆ,

ಮರಳುವ ಸೂಚನೆಯು ನೀಡದೆ !

ನಾ ಯಮುನೆಯ ತಟದಲ್ಲೆ

ಕರಗಿದೆ,

ನೀ ನನ್ನೊಳಗೆ ಬಂದು

ಸೇರಿದೆ,

ಒಲವಿಗೊಂದು ಹೊಸ ಭಾಷ್ಯ ಬರೆದೆ,

ಕೊನೆವರೆಗೂ ವಿರಹದ

ಕೌತುಕವಾಗೆ ಉಳಿದೆ...!


ಈ ಜಗಮಗಿಸುವ ದೀಪಗಳಿಗು,

ನಿನ್ನ ಕಣ್ಣ ನೋಟಕ್ಕು

ಅದಾವ ತಾರೆಗಳ ಹೊಳಪು

ದಕ್ಕಿರಬಹುದು ಸಾಕಿ,

ಎದುರಾದಾಗ ಎದೆಯ

ಅಮವಾಸ್ಯೆಯೊಳಗು ದೀಪಾವಳಿಯ

ಬೆಳಕ ಚೆಲ್ಲಿ, ಬಸವಳಿದ ಬೀದಿಯ

ರಂಗಾಗಿಸುತ್ತವೆ !!


-By ಪಲ್ಲವಿ ಚೆನ್ನಬಸಪ್ಪ