ಉಜಿರೆ: ಪರಿಶುದ್ಧ ಮನಸ್ಸಿನಿಂದ, ಪಂಚೇಂದ್ರಿಯಗಳ ನಿಯಂತ್ರಣದೊಂದಿಗೆ ವಿಕಲ್ಪವಿಲ್ಲದೆ ದೃಢಸಂಕಲ್ಪದಿಂದ ಮಾಡುವ ಭಕ್ತಿಗೆ ವಿಶೇಷ ಶಕ್ತಿಯಿದ್ದು ದೇವರ ಸಾಕ್ಷಾತ್ಕಾರವಾಗಿ ಭಕ್ತರು ವಿಶೇಷ ಅನುಗ್ರಹಕ್ಕೆ ಪಾತ್ರರಾಗುತ್ತಾರೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು.
ಅವರು ಸೋಮವಾರ ಧರ್ಮಸ್ಥಳದಲ್ಲಿ ಪ್ರವಚನ ಮಂಟಪದಲ್ಲಿ ಶಿವರಾತ್ರಿ ಸಂದರ್ಭ ಪಾದಯಾತ್ರೆಯಲ್ಲಿ ಬಂದ ಭಕ್ತರನ್ನು ಗೌರವಿಸಿ ಮಾತನಾಡಿದರು.
ನಿತ್ಯವೂ ನಿಗದಿತ ಸಮಯದಲ್ಲಿ ದೇವರ ಭಕ್ತಿ, ಧ್ಯಾನ, ಪ್ರಾರ್ಥನೆ ಮಾಡಿದಲ್ಲಿ ನಮ್ಮ ಎಲ್ಲಾ ಸಮಸ್ಯೆಗಳು ಸುಲಲಿತವಾಗಿ ಪರಿಹಾರವಾಗುತ್ತವೆ. ದೇವರ ಸದಾ ಭಕ್ತರ ಜೊತೆಯಲ್ಲೇ ಇರುತ್ತಾರೆ. ದಾನ-ಧರ್ಮ, ಪರೋಪಕಾರ ಸೇವೆ ಮೊದಲಾದ ಸತ್ಕಾರ್ಯಗಳನ್ನು ಮಾಡುವಾಗ ಕಾಲಹರಣ ಮಾಡದೆ ತಕ್ಷಣ ಮಾಡಬೇಕು ಎಂದು ಸಲಹೆ ನೀಡಿದರು.
ಪ್ರತಿ ವರ್ಷವೂ ದೃಢಸಂಕಲ್ಪದೊಂದಿಗೆ ಜಾತಿ, ಮತ, ಅಂತಸ್ತಿನ ಬೇಧ ಭಾವ ಮರೆತು ದೈಹಿಕ ಶ್ರಮದೊಂದಿಗೆ ಶಿವರಾತ್ರಿ ಸಂದರ್ಭ ಧರ್ಮಸ್ಥಳಕ್ಕೆ ಬರುವ ಪಾದಯಾತ್ರಿಗಳು ಶ್ರೀ ಮಂಜುನಾಥ ಸ್ವಾಮಿಯ ಪರಮ ಭಕ್ತರಾಗಿದ್ದು ವಿಶೇಷ ಅನುಗ್ರಹಕ್ಕೆ ಪಾತ್ರರಾಗುತ್ತಾರೆ. ದೇವರ ದರ್ಶನ ಮತ್ತು ಸೇವೆಯಿಂದ ತಮ್ಮ ಎಲ್ಲಾ ಶ್ರಮ ಮತ್ತು ಆಯಾಸವನ್ನು ಮರೆತು ವಿಶೇಷ ಸಂತೋಷ ಮತ್ತು ತೃಪ್ತಿಯನ್ನು ಹೊಂದುತ್ತಾರೆ ಎಂದು ಹೇಳಿದರು.
ಪಾದಯಾತ್ರೆಯ ಮಾರ್ಗದರ್ಶಕ ಹಾಗೂ ರೂವಾರಿಯಾದ ಬೆಂಗಳೂರಿನ ಹನುಮಂತಪ್ಪ ಸ್ವಾಮೀಜಿ, ಹಾಸನದ ಸಂದೇಶ ಗೌಡ, ರಂಗೇ ಗೌಡ, ಸಿದ್ಧಪ್ಪ ಗೌಡ, ಮೋಹನ ಗೌಡ, ಸುರೇಶ ಗೌಡ ಮೊದಲಾದವರನ್ನು ಹೆಗ್ಗಡೆಯವರು ಗೌರವಿಸಿದರು.
ಪಾದಯಾತ್ರಿಗಳ ವತಿಯಿಂದ ಹೆಗ್ಗಡೆಯವರನ್ನು ಗೌರವಿಸಿ ಅಭಿನಂದಿಸಲಾಯಿತು.
ಹೆಗ್ಗಡೆಯವರ ಆಪ್ತ ಕಾರ್ಯದರ್ಶಿ ಎ.ವಿ. ಶೆಟ್ಟಿ ಕಾರ್ಯಕ್ರಮ ಸಂಯೋಜನೆಯಲ್ಲಿ ಸಹಕರಿಸಿದರು.