ಚಿಕ್ಕಮಗಳೂರು, ಮಾರ್ಚ್ 01:- ಹಲವಾರು ದಶಕಗಳಿಂದ ಸಾಮಾಜಿಕ ನ್ಯಾಯ ಮತ್ತು ಸುಸ್ಥಿರ ಅಭಿವೃಧ್ದಿಗಾಗಿ ಸ್ವಯಂ ಸೇವಾ ವಲಯವು ಸಂಘಟಿತ ಧ್ವನಿಯಾಗಿ ಅಂಚಿಗೆ ತಳ್ಳಲ್ಪಟ್ಟಿರುವ ಸಮುದಾಯಗಳ ಭಾಗವಹಿಸುವಿಕೆಯೊಂದಿಗೆ ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸುವ ಸಂವಿಧಾನಿಕ ಜವಾಬ್ದಾರಿಯನ್ನು ನಿರ್ವಹಿಸುತ್ತಿವೆ ಎಂದು ರಾಜ್ಯ ಸಮೂಹ ಮಾಧ್ಯಮಗಳ ಸಂಚಾಲಕ ಪಿ.ಚಂದ್ರಮೌಳಿ ಹೇಳಿದರು.

ನಗರ ಮತ್ತು ಗ್ರಾಮಾಭ್ಯುದಯ ಸ್ವಯಂ ಸೇವಾ ಸಂಸ್ಥೆಗಳ ಒಕ್ಕೂಟದ ವತಿಯಿಂದ ನಗರದ ಪೂರ್ವಿ ಚಾರಿಟಬಲ್ ಟ್ರಸ್ಟ್ ಸಭಾಂಗಣದಲ್ಲಿ ಸೋಮವಾರ ವಿಶ್ವ ಸ್ವಯಂ ಸೇವಾ ಸಂಸ್ಥೆಗಳ ದಿನಾಚರಣೆ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡುತ್ತಿದ್ದರು.

ಭಾರತದಲ್ಲಿ ಸ್ವಯಂ ಸೇವಾ ಸಂಸ್ಥೆಗಳು ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸುವ ಜವಾಬ್ದಾರಿ ಯನ್ನು ನಿರ್ವಹಿಸುತ್ತಿದೆ. ಇದರ ಭಾಗವಾಗಿ ಕೃಷಿ, ಗ್ರಾಮೀಣಾಭಿವೃದ್ದಿ, ನೈರ್ಮಲ್ಯ ಸುಧಾರಣೆ, ಆರೋಗ್ಯ, ಶಿಕ್ಷಣ, ಮಹಿಳಾ ಸಬಲೀಕರಣ ಆದಿವಾಸಿಗಳು, ಬುಡಕಟ್ಟ ಜನರು, ವಿಕಲಚೇತನರ ಸೌಲಭ್ಯ ಮತ್ತು ಹಕ್ಕುಗಳಿಂದ ವಂಚಿತರಾಗಿರುವ ಜನರ ಜೀವನವನ್ನು ಸುಧಾರಿಸಿ ಅಗತ್ಯ ಸೇವೆಗಳನ್ನು ನಿರ್ವಹಿಸುವಲ್ಲಿ ಸ್ವಯಂ ಸೇವಾ ಸಂಸ್ಥೆಗಳು ಮುಖ್ಯವಾದ ಪಾತ್ರ ನಿರ್ವಹಿಸುತ್ತಿದೆ  ಎಂದು ಹೇಳಿದರು.

ಒಕ್ಕೂಟದ ಜಿಲ್ಲಾ ಅಧ್ಯಕ್ಷ ವೀರಭದ್ರಪ್ಪ ಮಾತನಾಡಿ ಸ್ವಯಂ ಸೇವಾ ಸಂಸ್ಥೆಗಳು ಹಗಲಿರುಳೂ ಪ್ರಜಾಪ್ರಭುತ್ವ ಗಟ್ಟಿಗೊಳಿಸುವ ಮತ್ತು ಸಮಾಜವನ್ನು ಸುಸ್ಥಿರಕ್ಕೆ ತರಲು ಶ್ರಮಿಸುತ್ತ್ತಿವೆ ಎಂದರು.

ಇದೇ ವೇಳೆ ವಿಶ್ವ ಸ್ವಯಂ ಸೇವಾ ಸಂಸ್ಥೆಗಳ ದಿನಾಚರಣೆಯ ಸಂದರ್ಭದಲ್ಲಿ ಕೊರೊನಾ ವಾರಿಯರ್ಸ್ ಆಗಿ ಸೇವೆ ಸಲ್ಲಿಸಿದ ಪಿಡಿಓ ಅಧಿಕಾರಿ ಶಾಂತಿ ಅವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಪೂರ್ವಿ ಚಾರಿಟಬಲ್ ಟ್ರಸ್ಟ್‍ನ ಸತ್ಯಕೀರ್ತಿ, ಪ್ರಗತಿ ಸೇವಾ ಸಂಸ್ಥೆಯ ಕಾರ್ಯದರ್ಶಿ ಉಮಾ, ಹೃಶಿಕೇಶ್, ವಿನಾಯಕ ವಾಯ್ಸ್ ಸಂಸ್ಥೆಯ ಪ್ರಮುಖರು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.