ಪುತ್ತೂರು : ಸಂತ ಫಿಲೋಮಿನಾ ಕಾಲೇಜಿನಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ನಡೆಯಿತು. ಕಾಲೇಜಿನ ರೆಡ್‍ಕ್ರಾಸ್ ಘಟಕ ಮತ್ತು ಎನ್‍ಎಸ್‍ಎಸ್‍ಘಟಕ, ರೋವರ್ಸ್ ಎಂಡ್ ರೇಂಜರ್ಸ್ ಮತ್ತು ಎನ್‍ಸಿಸಿ ಘಟಕಗಳು ಮಂಗಳೂರಿನ ಕೆಎಂಸಿ ಬ್ಲಡ್ ಬ್ಯಾಂಕ್ ಹಾಗೂ ಇಂಡಿಯನ್ ರೆಡ್‍ಕ್ರಾಸ್ ಸಹಯೋಗದೊಂದಿಗೆ ರಕ್ತದಾನ ಶಿಬಿರವನ್ನು ಏರ್ಪಡಿಸಲಾಯಿತು.
ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಕೆಎಂಸಿ ಬ್ಲಡ್ ಬ್ಯಾಂಕಿನ ವೈದ್ಯರಾದ ಡಾ| ರಂಜಿತಾ ರಾವ್ ಅವರು ರಕ್ತದಾನದ ಮಹತ್ವವನ್ನು ತಿಳಿಸಿಕೊಡುತ್ತಾ ರಕ್ತದಾನದಿಂದ ಅದೆಷ್ಟೋ ಜೀವವನ್ನು ಉಳಿಸಬಹುದು, ಸದೃಢ ವ್ಯಕ್ತಿ ರಕ್ತವನ್ನು ದಾನ ಮಾಡಿದರೆ, ಅಷ್ಟೇ ಅಂಶದಷ್ಟು ಹೊಸ ರಕ್ತವು ಎರಡು ತಿಂಗಳೊಳಗೆ ತುಂಬುವ ಮೂಲಕ ಇನ್ನಷ್ಟು ಚೈತನ್ಯ, ಉತ್ಸಾಹ ಬರುತ್ತದೆಂದು ಹೇಳಿದರು.
ಅಧ್ಯಕ್ಷತೆಯನ್ನು ವಹಿಸಿದ ಪ್ರಾಂಶುಪಾಲರಾದ ವಂ| ಡಾ| ಆ್ಯಂಟನಿ ಪ್ರಕಾಶ್ ಮೊಂತೆರೋ ಅವರು ಮಾತನಾಡುತ್ತಾ ರಕ್ತದಾನದಂಥ ಶ್ರೇಷ್ಟದಾನ ಇನ್ನೊಂದಿಲ್ಲ, ನೀಡುವ ರಕ್ತದಲ್ಲಿ ಎ, ಬಿ ಇನ್ನಿತರ ಜೈವಿಕ ವಿಭಾಗೀಕರಣಗಳು ಇರಬಹುದೇ ಹೊರತು, ಜಾತಿ ಧರ್ಮಗಳ ಸೋಂಕು ಇಲ್ಲ. ಎಲ್ಲರರಕ್ತದ ಬಣ್ಣ ಒಂದೇ ಅನ್ನುವುದನ್ನು ನೆನಪಿನಲ್ಲಿಡಬೇಕು. ಅಗತ್ಯದ ಸಂದರ್ಭದಲ್ಲಿ ರಕ್ತ ಮುಖ್ಯವೇ ಹೊರತು ಯಾರ ರಕ್ತ ಅನ್ನುವುದು ಅಮುಖ್ಯ ಎಂದು ನುಡಿದರು.
ಕಾಲೇಜಿನ ರಾಷ್ತ್ರೀಯ ಸೇವಾಯೋಜನಾ ಘಟಕದ ಸಂಚಾಲಕರಾದ ಪ್ರೊ. ವಾಸುದೇವ ಎನ್ ಸ್ವಾಗತಿಸಿದರು. ಯುವ ರೆಡ್‍ಕ್ರಾಸ್ ಘಟಕದ ಸಂಚಾಲಕಿ ಡಾ| ಮಾಲಿನಿ ವಂದಿಸಿದರು, ವಿದ್ಯಾರ್ಥಿನಿ ಭಾಗ್ಯಶ್ರೀ ಮತ್ತು ತಂಡ ಪ್ರಾರ್ಥಿಸಿದರು. ಹಾಶ್ನಿ ಸಿಂಗ್ ನಿರೂಪಿಸಿದರು.
ಯುತ್ ರೆಡ್‍ಕ್ರಾಸ್ ಘಟಕದ ಸಂಯೋಜಕರಾದ ನ್ಯಾನ್ಸಿ ಲವಿನಾ ಪಿಂಟೋ, ನಿಲೇಶ್‍ಡಯಾಸ್, ಎನ್‍ಸಿಸಿ ಘಟಕದ ಮುಖ್ಯಅಧಿಕಾರಿ ಲೆಫ್ಟಿನೆಂಟ್ ಜಾನ್ಸನ್ ಡೆವಿಡ್ ಸಿಕ್ವೆರಾ, ಎನ್‍ಎಸ್‍ಎಸ್ ಘಟಕದ ಸಹ ಸಂಚಾಲಕಿ ಶ್ರೀಮತಿ ಪುಷ್ಪಾ, ರೋವರ್ಸ್ ಎಂಡ್ ರೇಂಜರ್ಸ್ ಘಟಕದ ಸಂಯೋಜಕರಾದ ಧನ್ಯಾ ಪಿಟಿ ಮತ್ತು ಶ್ರೀರಕ್ಷಾ, ಇಂಡಿಯನ್ ರೆಡ್‍ಕ್ರಾಸ್ ಇದರ ಪುತ್ತೂರು ಘಟಕದ ಕಾರ್ಯದರ್ಶಿ ರೊ| ಆಸ್ಕರ್ ಆನಂದ್ ಉಪಸ್ಥಿತರಿದ್ದು ಶಿಬಿರವನ್ನು ಸಂಘಟಿಸಲು ಸಹಕರಿಸಿದರು.
ಶಿಬಿರದಲ್ಲಿ ಇನ್ನೂರಕ್ಕೂ ಮಿಕ್ಕಿ ವಿದ್ಯಾರ್ಥಿಗಳು ಅತ್ಯುತ್ಸಾಹದಿಂದ ಭಾಗವಹಿಸಿ ರಕ್ತದಾನ ಮಾಡಿದರು. ಕಾಲೇಜಿನ ವಿದ್ಯಾರ್ಥಿಗಳ ನಿಸ್ವಾರ್ಥ ಮನೋಭಾವ ಮತ್ತು ಸಮಾಜ ಮುಖೀ ಕಾರ್ಯವನ್ನು ಅಭಿನಂದಿಸಿ ಕೆಂಎಸಿ ರಕ್ತದಾನ ಘಟಕವು ಕಾಲೇಜಿಗೆ ಪ್ರಮಾಣ ಪತ್ರ ನೀಡಿದೆ.