ಮಂಗಳೂರು, ಜ 18: ನಾವು ಮಂಗಳೂರಿಗೆ ತಂದ ಯೋಜನೆಗಳಲ್ಲಿ ಸ್ಮಾರ್ಟ್ ಸಿಟಿ ಸಹ ಒಂದು. ಈಗ ಬೋಳೂರಿನಲ್ಲಿ 35 ಕೋಟಿಯ ತೂಗು ಸೇತುವೆಯ ನಿರ್ಮಾಣದ ಪ್ರಸ್ತಾಪ ಬಂದಿದೆ. ಅದು ಫಲವಿಲ್ಲ. ಎಲ್ಲರೂ ಬಳಸುವ ಕಾಯಂ ಸೇತುವೆ ನಿರ್ಮಾಣ ಮಾಡಲು ಒತ್ತಾಯಿಸುತ್ತೇನೆ ಎಂದು ಮಾಜೀ ಶಾಸಕ ಜೆ. ಆರ್. ಲೋಬೋ ಹೇಳಿದರು.
ಸ್ಮಾರ್ಟ್ ಸಿಟಿಯಲ್ಲಿ ಮುಖ್ಯವಾಗಿ ಹಳೆಯ ಬಂದರು ಅಭಿವೃದ್ಧಿ ಮತ್ತು ಮೀನುಗಾರಿಕಾ ರಸ್ತೆ ಅಭಿವೃದ್ಧಿ ಮುಖ್ಯ ಇತ್ತು. ಆದರೆ ಇವರು ಆ ನಿಟ್ಟಿನಲ್ಲಿ ಏನೂ ಮಾಡುತ್ತಿಲ್ಲ. ನಾನು ಶಾಸಕನಾಗಿದ್ದಾಗ ಲಕ್ಷದ್ವೀಪದ ಕಚೇರಿಗಳನ್ನು ಮಂಗಳೂರಿಗೆ ತರಲು ಯೋಜಿಸಿದ್ದೆ. ಅವರು ಕೂಡ 400 ಕೋಟಿ ರೂಪಾಯಿ ಬಂಡವಾಳ ಹೂಡಲು ಮುಂದೆ ಬಂದಿದ್ದರು. 35 ಕೋಟಿಗೆ ಇನ್ನು ಸ್ವಲ್ಪ ಸೇರಿಸಿದರೆ ಕಾಯಂ ಸೇತುವೆ ಸಾಧ್ಯ. ಅಲ್ಪ ಬಳಕೆಗೆ ಬರುವ ತೂಗು ಸೇತುವೆ ಬೇಡ ಎಂದು ಲೊಬೋ ಹೇಳಿದರು.
ನಾನು ಶಾಸಕನಾಗಿದ್ದಾಗ ಮನೆ ನೀಡಿಕೆ, ಅಮೃತ ಯೋಜನೆ, ಲಕ್ಷದ್ವೀಪಕ್ಕೆ ಜೆಟ್ಟಿ ನಿರ್ಮಾಣ ಇವಕ್ಕೆಲ್ಲ ಮಂಜೂರು ಪಡೆದವನು ನಾನು. ನಮ್ಮ ಸರಕಾರ. ಆದರೆ ಹಾಲಿ ಬಿಜೆಪಿ ಶಾಸಕರು ಎಲ್ಲ ನಾನೇ ತಂದೆ ಎನ್ನುತ್ತಿದ್ದಾರೆ. ಜನಶ್ರೀ ಯೋಜನೆ ತಂದವನು ನಾನು. ನಾಲ್ಕೂವರೆ ಸಾವಿರ ಕೋಟಿ ಅನುದಾನ ಎಂದು ಹೇಳುತ್ತಿದ್ದೀರಲ್ಲ ವೇದವ್ಯಾಸರೆ ಲೆಕ್ಕ ಕೊಡಿ. ನಾನು ಮಂಜೂರಾತಿಯ ದಿನಾಂಕ, ಮೊತ್ತ ಹೇಳಬಲ್ಲೆ ಎಂದು ಲೋಬೋ ಹೇಳಿದರು.
ಬಸ್ ನಿಲ್ದಾಣ ಸ್ಥಳ ಹಾಳುಬಿದ್ದದೆ. ಕೇಂದ್ರ ಮಾರುಕಟ್ಟೆ ಹಂತ ಹಂತವಾಗಿ ನಿರ್ಮಿಸಬೇಕಿತ್ತು. ಆಗ ಮಾನವೀಯತೆ ಪಾಲನೆಯಾಗಿ ಲಕ್ಷಾಂತರ ಜನರ ಬದುಕು ಬೀದಿಗೆ ಬೀಳುತ್ತಿರಲಿಲ್ಲ. ಶಕ್ತಿ ನಗರದಲ್ಲಿ ನಾವು ಉದ್ಘಾಟಿಸಿದ್ದ ಮನೆ ನೀಡಿಕೆಗೆ ಈಗ ನಿಮ್ಮ ಹೊಸ ಉದ್ಘಾಟನೆ ಯಾಕೆ? ಹ್ಯಾಮಿಲ್ಟನ್ ವೃತ್ತ ಕೆನಡಾದ ನಗರದ ಯೋಜನೆಯ ಪೂರಕ. ಅದನ್ನು, ಎ. ಬಿ. ಸರ್ಕಲ್ ಇವನ್ನೆಲ್ಲ ಮುಂದಾಲೋಚನೆ ಇಲ್ಲದೆ ಮಾಡಿದ್ದಾರೆ. ಬಿಜೆಪಿಯು ಮಂಗಳೂರನ್ನು ನಿರುಪಯೋಗಿ ಮಾಡುತ್ತಿದೆ. ದೂರಾಲೋಚನೆ ಇಲ್ಲವೇ ಇಲ್ಲ. ಇವರ ಅನುಪಯುಕ್ತ ಕಾಮಗಾರಿಗಳನ್ನು, ಅಲ್ಪಾವಧಿ ಬಾಳಿಕೆಯ ಅಭಿವೃದ್ಧಿ ಬೇಕಾಗಿಲ್ಲ ಎಂದು ಲೋಬೋ ಹೇಳಿದರು.
ಸೈಕಲ್ ಟ್ರಾಕ್ ಯೋಜನೆಯನ್ನು ನಾನು ನೇತ್ರಾವತಿ ದಡದಲ್ಲಿ ಯೋಜಿಸಿದ್ದೆ. ಈಗ ನಗರದೊಳಗಡೆ ಮಾಡಿದರೆ ಅದು ಅಪಘಾತಕ್ಕೆ ದಾರಿ. ವಾಹನ ಸಂಚಾರಕ್ಕೂ ಅದಕ್ಕೂ ಸಂಬಂಧ ಬೇರೆ ದೇಶಗಳಲ್ಲಿ ಇಲ್ಲ. ಶಕ್ತಿ ನಗರದ 10 ಎಕರೆ ಜಾಗ ಹುಡುಕಿದ್ದು ನಾನು. ಅರಣ್ಯ ಇಲಾಖೆಯ ಮೂಲಕ ಬಿಜೆಪಿಯವರು ಕಲ್ಲು ಹಾಕಿದರು. 5 ಎಕರೆಗೆ ಬಂತು. ಎಕ್ಕಾರಿನಲ್ಲಿ 10 ಎಕರೆ ಡೀಮ್ಡ್ ಫಾರೆಸ್ಟ್ ಅಲ್ಲದ ಸ್ಥಳ ಹುಡುಕಿದೆ. ಆದರೆ ಹೊಸ ಶಾಸಕರು ಅದನ್ನು ಮುಂದುವರಿಸದ್ದರಿಂದ ಮೂಲೆಗೆ ಬಿತ್ತು. ಈಗ ಚುನಾವಣೆ ಕಾಲದಲ್ಲಿ ಬಂತು ಎನ್ನುತ್ತಿದ್ದಾರೆ ಎಂದು ಲೋಬೋ ಅವರು ಖಂಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಟಿ. ಕೆ. ಸುಧೀರ್, ನವೀನ್ ಡಿಸೋಜಾ, ರಮಾನಂದ ಪೂಜಾರಿ, ಶಶಿಧರ ಹೆಗ್ಡೆ, ಚಂದ್ರಕಲಾ, ತಾರಾನಾಥ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.