ಮಂಗಳೂರು: ಪಠ್ಯಪುಸ್ತಕ ಪರಿಷ್ಕರಣೆ ವಿರೋಧಿಸಿ ಎನ್.ಎಸ್.ಯು.ಐ ಕಾರ್ಯಕರ್ತರು ಶಿಕ್ಷಣ ಸಚಿವರ ಮನೆ ಮುಂದೆ ನಡೆಸಿದ ಪ್ರತಿಭಟನೆಯನ್ನು ದಾಳಿ ಎಂದು ಬಿಂಬಿಸುವ ಮುಖಾಂತರ ರಾಜ್ಯ ಸರ್ಕಾರ ವಿದ್ಯಾರ್ಥಿ ಹೋರಾಟವನ್ನು ಹತ್ತಿಕ್ಕುವ ಪ್ರಯತ್ನವನ್ನು ನಡೆಸುತ್ತಿದ್ದು, ಇದನ್ನು ಎನ್.ಎಸ್.ಯು.ಐ ಕರ್ನಾಟಕ ರಾಜ್ಯ ಸಮಿತಿಯು ತೀವ್ರವಾಗಿ ಖಂಡಿಸುತ್ತಿದೆ.
ಸಂವಿಧಾನ ಬಾಹಿರವಾಗಿ ಪಠ್ಯ ಪರಿಷ್ಕರಣೆ ನಡೆಸಿದ್ದು, ಕುವೆಂಪುರವರಿಗೆ ಅವಮಾನಗೈದ ರೋಹಿತ್ ಚಕ್ರತೀರ್ಥ ಅವರಂತಹ ವ್ಯಕ್ತಿಯ ಮೇಲೆ ಇನ್ನೂ ಕ್ರಮ ಕೈಗೊಳ್ಳಲು ಸಾಧ್ಯವಾಗದ ರಾಜ್ಯ ಸರ್ಕಾರ ಇದೀಗ ಇದರ ವಿರುದ್ಧ ಧ್ವನಿಯೆತ್ತುವವರನ್ನು ಗುರಿಯಾಗಿಸುತ್ತಿರುವುದು ತಮ್ಮ ಸರ್ಕಾರದ ಹೇಡಿತನವಾಗಿದೆ.
ಪಠ್ಯ ಪುಸ್ತಕ ಪರಿಷ್ಕರಣೆಯನ್ನು ಕನ್ನಡಿಗರಿಗೆ ಒಪ್ಪಲು ಸಾಧ್ಯವಿಲ್ಲ, ಇದೇ ಹಠಮಾರಿ ಧೋರಣೆಯನ್ನು ರಾಜ್ಯ ಸರ್ಕಾರ ವ್ಯಕ್ತಪಡಿಸುವುದಾದರೆ ವಿದ್ಯಾರ್ಥಿ ಹೋರಾಟವು ಇನ್ನೂ ತೀವ್ರತೆಯನ್ನು ಪಡೆದುಕೊಳ್ಳಲಿದೆ ಎಂಬ ಎಚ್ಚರಿಕೆಯನ್ನು ನೀಡುತ್ತಿದ್ದೇವೆ. ಇದೀಗ ಸಂವಿಧಾನಾತ್ಮಕವಾಗಿ ಪ್ರತಿಭಟಿಸಿದ ಬಂಧಿತ ವಿದ್ಯಾರ್ಥಿ ನಾಯಕರನ್ನು ಶೀಘ್ರ ಬಿಡುಗಡೆಗೊಳಿಸಬೇಕೆಂದು ಎನ್.ಎಸ್.ಯು.ಐ ರಾಜ್ಯ ಉಪಾಧ್ಯಕ್ಷ ಫಾರೂಕ್ ಬಾಯಬೆ ಆಗ್ರಹಿಸಿದ್ದಾರೆ.