ಪಠ್ಯಪುಸ್ತಕ ಪರಿಷ್ಕರಣೆ ವಿರೋಧಿಸಿ ಶಿಕ್ಷಣ ಸಚಿವರ ಮನೆ ಎದುರು ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದ ಎನ್.ಎಸ್.ಯು.ಐ ರಾಜ್ಯಾಧ್ಯಕ್ಷ ಕೀರ್ತಿ ಗಣೇಶ್ ಅವರ ಬಂಧನ ಖಂಡಿಸಿ ಮತ್ತು ಬಿಡುಗಡೆಗೆ ಆಗ್ರಹಿಸಿ ದ.ಕ. ಜಿಲ್ಲಾ ಎನ್.ಎಸ್.ಯು.ಐ ಮುಖಂಡರು ಗುರುವಾರ ಮಲ್ಲಿಕಟ್ಟೆಯಲ್ಲಿ ರಸ್ತೆ ತಡೆ ನಡೆಸಿ ಧರಣಿ ನಡೆಸಿದರು.
ಎನ್.ಎಸ್.ಯು.ಐ ಜಿಲ್ಲಾಧ್ಯಕ್ಷ ಸವಾದ್ ಸುಳ್ಯ ಮಾತನಾಡಿ, ಪಠ್ಯಪುಸ್ತಕ ಪರಿಷ್ಕರಣೆ ವಿರೋಧಿಸಿ ಶಿಕ್ಷಣ ಸಚಿವರ ಮನೆ ಎದುರು ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದ ಎನ್.ಎಸ್.ಯು.ಐ ರಾಜ್ಯಾಧ್ಯಕ್ಷ ಹಾಗೂ ಕಾರ್ಯಕರ್ತರನ್ನು ಬಂಧಿಸಿರುವುದು ಖಂಡನೀಯ. ರಾಜ್ಯ ಸರ್ಕಾರ ವಿದ್ಯಾರ್ಥಿ ಹೋರಾಟವನ್ನು ಹತ್ತಿಕ್ಕುವ ಪ್ರಯತ್ನವನ್ನು ನಡೆಸಿದೆ. 24 ಗಂಟೆ ಅವಧಿಯಲ್ಲಿ ನಾಯಕರನ್ನು ಬಿಡುಗಡೆಗೊಳಿಸದಿದ್ದರೆ ದ.ಕ. ಜಿಲ್ಲಾದ್ಯಂತ ಕಾಲೇಜುಗಳನ್ನು ಬಂದ್ ಮಾಡುವ ಮೂಲಕ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಎನ್.ಎಸ್.ಯು.ಐ ರಾಜ್ಯ ಪ್ರಧಾನ ಕಾರ್ಯದರ್ಶಿ ಸುಹಾನ್ ಆಳ್ವ, ಸೌಹಾನ್ ಎಸ್.ಕೆ, ಶ್ವಾನ್ ಸಿರಿ, ಸಿರಾಜ್ ಗುದ್ರು, ಸಾಹಿಲ್, ನಿಖಿಲ್, ಸಫ್ವಾನ್, ಅಝೀಮ್ ಮತ್ತಿತರರಿದ್ದರು.