ಉಜಿರೆ: “ಮದ್ಯವರ್ಜನ ಶಿಬಿರಗಳಲ್ಲಿ ವ್ಯಸನಿಗಳ ಮನಪರಿವರ್ತನೆ ಮಾಡುವ ಕೆಲಸ ಆಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಶಿಬಿರಕ್ಕೆ ದಾಖಲಾಗುವವರ ಸಂಖ್ಯೆ ಜಾಸ್ತಿಯಾಗಿದೆ. ಇದಕ್ಕೆ ಕಾರಣ ಕುಡಿತ ಕೆಟ್ಟದ್ದು ಅಂತ ಜನರಿಗೆ ಅರ್ಥವಾಗಿದೆ. ಎಲ್ಲದಕ್ಕೂ ಜಾತಿ ಭೇದವಿದೆ ಆದರೆ ದುಶ್ಚಟಕ್ಕೆ ಜಾತಿ ಭೇಧವಿಲ್ಲ. ಇನ್ನು ಮುಂದಕ್ಕೆ ಮದ್ಯ ಸೇವನೆ ಬೇಡ, ಇದರಿಂದ ನನಗೆ, ನನ್ನ ಸಂಸಾರಕ್ಕೆ ಒಳ್ಳೆದಲ್ಲ ಎಂದು ಮನಸ್ಸಿಗೆ ಬಂದು ಮಾನಸಿಕ ಪರಿವರ್ತನೆಯಾದರೆ ವ್ಯಸನದಿಂದ ಮುಕ್ತರಾಗಬಹುದು” ಎಂದುಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ಅಭಿಪ್ರಾಯಪಟ್ಟರು. ಅವರು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವ್ಯಸನಮುಕ್ತಿ ಮತ್ತು ಸಂಶೋಧನಾ ಕೇಂದ್ರದಲ್ಲಿ ನಡೆಯುತ್ತಿರುವ 227ನೇ ವಿಶೇಷ ಮದ್ಯವರ್ಜನ ಶಿಬಿರದ 86 ಶಿಬಿರಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು. 

“ಹವಾಮಾನ, ಕಾಲಮಾನಕ್ಕೆ ಸರಿಯಾಗಿ ನಾವು ಜೀವನ ಮಾಡಬೇಕು. ಆದರೆ ಕುಡಿತಕ್ಕೆ ಯಾವ ಕಾಲಮಾನವೂ ಇಲ್ಲ. ಎಲ್ಲಾ ಕಾಲ ಮಾನದಲ್ಲು ಅದರ ಸೇವನೆ ಮಾಡ್ತಾರೆ. ಇದೊಂದು ಕೇವಲ ಆಕರ್ಷಣೀಯ ವಸ್ತುವಾಗಿದೆ. ಆದುದರಿಂದ ಚಂಚಲತೆಯನ್ನು ಹತೋಟಿ ಮಾಡುವುದನ್ನು ಕಲಿಯಬೇಕು. ಅಂತರಂಗ ದರ್ಶನ ಮಾಡಿಕೊಂಡು ಉತ್ತಮ ಜೀವನವನ್ನು ನಡೆಸಲು ಶ್ರೀ ಮಂಜುನಾಥ ಸ್ವಾಮಿ ಆಶೀರ್ವದಿಸಲಿ” ಎಂದು ಹಾರೈಸಿದರು.

ಕಾರ್ಯಕ್ರಮದ ಸಮಾರೋಪ ಸಮಾರಂಭದಂದು ಯೋಜನೆಯ ನಿವೃತ್ತ ಕಾರ್ಯನಿರ್ವಾಹಕ ನಿರ್ದೇಶಕರಾದ ಡಾ| ಎಲ್.ಹೆಚ್. ಮಂಜುನಾಥ್ ರವರು ಆಗಮಿಸಿ ನವಜೀವನ ಸಮಿತಿಯ ಉದ್ಘಾಟನೆಯನ್ನು ನೆರವೇರಿಸಿದರು. ಸಮಾರೋಪ ಭಾಷಣವನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರಾದ ಶ್ರೀ ಅನಿಲ್ ಕುಮಾರ್ ಎಸ್.ಎಸ್.ರವರು ಮಾಡಿದರು. ಶಿಬಿರದ ಕುಟುಂಬದಿನ ಕಾರ್ಯಕ್ರಮವನ್ನು ಜನಜಾಗೃತಿ ವೇದಿಕೆಯ ಪ್ರಾದೇಶಿಕ ನಿರ್ದೇಶಕರಾದ ಶ್ರೀ ವಿವೇಕ್ ವಿ. ಪಾೈಸ್‍ರವರು ನಡೆಸಿಕೊಟ್ಟಿದ್ದು, ಕಾರ್ಯಕ್ರಮದಲ್ಲಿ ಯೋಜನಾಧಿಕಾರಿ ಶ್ರೀ ಮಾಧವಗೌಡ, ಶಿಬಿರಾಧಿಕಾರಿಗಳಾದ ಶ್ರೀ ನಾಗೇಂದ್ರ ಹೆಚ್. ಎಸ್. ಆರೋಗ್ಯ ಸಹಾಯಕಿ ಸೌಮ್ಯ, ಪ್ರಬಂಧಕರಾದ ಶ್ರಿ ಕಿಶೋರ್ ಸಹಕರಿಸಿರುತ್ತಾರೆ. ಮುಂದಿನ ವಿಶೇಷ ಶಿಬಿರವು ದಿನಾಂಕ:22.07.2024 ರಂದು ನಡೆಯಲಿದೆ ಎಂದು ವೇದಿಕೆಯ ಪ್ರಕಟಣೆ ತಿಳಿಸಿದೆ.