ಉಡುಪಿ,(ಮಾರ್ಚ್ 17): ಸ್ವಚ್ಛತೆಯಲ್ಲಿ ಉಡುಪಿ ಜಿಲ್ಲೆಯು ಹಲವಾರು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದು, ಮುಂದೆಯೂ ಕೂಡಾ ಉಡುಪಿ ಜಿಲ್ಲೆ ಸ್ವಚ್ಛತೆಯಲ್ಲಿ ಅಗ್ರಸ್ಥಾನ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಈ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾಹಿತಿ ಪಡೆದುಕೊಂಡ ವಿದ್ಯಾರ್ಥಿಗಳು ಶ್ರಮಿಸಬೇಕು ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು ತಿಳಿಸಿದರು.
ಅವರು ಇಂದು ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜು ಸಭಾಂಗಣದಲ್ಲಿ, ಭಾರತ ಸರಕಾರ ಮತ್ತು ನೆಹರು ಯುವ ಕೇಂದ್ರ ಉಡುಪಿ ಇವರ ವತಿಯಿಂದ ಗುರು ಯುವಕ ಮಂಡಲ ನೇಜಾರು, ಸಮೃದ್ಧಿ ಮಹಿಳಾ ಮಂಡಲಿ ಚೇರ್ಕಾಡಿ ಪೇತ್ರಿ, ಎನ್.ಎಸ್.ಎಸ್ ಮಿಲಾಗ್ರಿಸ್ಕಾ ಲೇಜು ಕಲ್ಯಾಣಪುರ ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ, ಆಯೋಜಿಸಲಾದ ಸ್ವಚ್ಛ ಊರು - ಹಸಿರು ಊರು ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ದೇಶದ ಸನ್ಮಾನ್ಯ ಪ್ರಧಾನ ಮಂತ್ರಿಯವರ ಆಶಯದಂತೆ ನಮ್ಮ ದೇಶ ಸ್ವಚ್ಛ ಭಾರತ್ ಆಗಬೇಕೆಂಬ ನಿಟ್ಟಿನಲ್ಲಿ ಯುವ ಸಮುದಾಯಕ್ಕೆ ಇಂತಹ ಉತ್ತಮ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದಕ್ಕೆ ಅಭಿನಂದನೆ ತಿಳಿಸಿದರು. ನೀರಿನ ಮಹತ್ವದ ಬಗ್ಗೆಯೂ ಅರಿತು ನೀರನ್ನು ಮಿತವಾಗಿ ಬಳಸಿ ಮುಂದಿನ ಜನಾಂಗಕ್ಕೆ ನೀರನ್ನು ಉಳಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದ್ದು, ಈ ನಿಟ್ಟಿನಲ್ಲಿಯೂ ವಿದ್ಯಾರ್ಥಿಗಳು ಮುತುವರ್ಜಿ ವಹಿಸಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಿಲಾಗ್ರಿಸ್ ಕಾಲೇಜಿನ ಸಂಚಾಲಕರಾದ ರೆ. ಫಾದರ್ ವಲೇರಿಯನ್ ಮೆಂಡೋನ್ಸ ವಹಿಸಿದ್ದರು. ಕಾಲೇಜಿನ ಪ್ರಾಂಶುಪಾಲರಾದ ಡಾ. ವಿನ್ಸೆಂಟ್ ಆಳ್ವ, ನೆಹರು ಯುವ ಕೇಂದ್ರದ ಅಧಿಕಾರಿ ವಿಲ್‌ಫ್ರೆಡ್ ಡಿ'ಸೋಜಾ, ಉಡುಪಿ ನಿರ್ಮಿತಿ ಕೇಂದ್ರದ ಅರುಣ್ ಕುಮಾರ್, ಉಪಸ್ಥಿತರಿದ್ದರು. ಸಂಪನ್ಮೂಲ ವ್ಯಕ್ತಿಗಳಾಗಿ ಎಂ.ಜಿ.ಎA. ಕಾಲೇಜು ಪ್ರಾಂಶುಪಾಲ ಡಾ. ದೇವದಾಸ್ ಎಸ್. ನಾಯಕ್, ಸಮೃದ್ಧಿ ಮಹಿಳಾ ಮಂಡಲಿ ಚೇರ್ಕಾಡಿ ಪೇತ್ರಿಯ ಅಧ್ಯಕ್ಷೆ ಶ್ರೀಮತಿ ಪ್ರಸನ್ನ ಪಿ. ಭಟ್, ಉಡುಪಿ ಅರಣ್ಯ ಇಲಾಖೆಯ ಕೇಶವ ಪೂಜಾರಿ ಎಂ. ಭಾಗವಹಿಸಿದ್ದರು.