ಚಿಕ್ಕಮಗಳೂರು:- ಟ್ಯಾಕ್ಸಿ ಚಾಲಕರು ಪ್ರಯಾಣಿಕರ ಜೊತೆಗೆ ಉತ್ತಮ ರೀತಿಯಲ್ಲಿ ಸ್ಪಂದಿಸಿ, ಸಹಕರಿಸಿದಾಗ ಮಾತ್ರ ಚಾಲನೆ ವೃತ್ತಿಯಲ್ಲಿ ಮುಂದುವರೆಯಲು ಸಾಧ್ಯ ಎಂದು ಹಿರೇಮಗಳೂರು ಕಣ್ಣನ್ ಹೇಳಿದರು.
ನಗರದ ಹಿರೇಮಗಳೂರು ಕಲ್ಯಾಣ ಮಂಟಪದಲ್ಲಿ ಕರ್ನಾಟಕ ಟ್ಯಾಕ್ಸಿ ಡೈವರ್ಸ್ ಆರ್ಗನೈಜೇಷನ್ ಜಿಲ್ಲಾ ಘಟಕದ ವತಿಯಿಂದ ಮಂಗಳವಾರ ಏರ್ಪಡಿಸಿದ್ದ ಚಾಲಕರ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಪ್ರಯಾಣಿಕರ ಬದುಕಿಗೆ ಟ್ಯಾಕ್ಸಿ ಚಾಲಕರು ನಿಜವಾದ ಸಂರಕ್ಷಕ. ಭಗವಂತನು ಯಾವ ಕ್ಷಣದಲ್ಲಿ ಚಾಲಕನಿಗೆ ಸಂರಕ್ಷಣೆ ನೀಡಿತ್ತಾನೋ ಆ ಕ್ಷಣದಿಂದಲೇ ಪ್ರಯಾಣಿಕರ ರಕ್ಷಣೆ ಚಾಲಕನ ಮೇಲಿರುತ್ತದೆ ಎಂದ ಅವರು ಭಗವಾನ್ ಶ್ರೀಕೃಷ್ಣನೂ ಕೂಡಾ ಯುದ್ಧಭೂಮಿಯಲ್ಲಿ ಅರ್ಜುನನ ಸಾರಥಿಯಾಗಿದ್ದರು ಎಂದು ಹೇಳಿದರು.
ಚಾಲನೆ ವೃತ್ತಿಯಲ್ಲಿರುವವರು ಪ್ರಯಾಣಿಕರಲ್ಲಿ ಯಾವುದೇ ಜಾತಿ, ಧರ್ಮ ಬೇಧ ಬಾವ ಮಾಡದೇ ಕಾರ್ಯನಿರ್ವಹಿಸಬೇಕು. ಆಗ ಮಾತ್ರ ಉನ್ನತ ಮಟ್ಟಕ್ಕೆ ಬೆಳೆಯಲು ಸಾಧ್ಯ. ಆ ನಿಟ್ಟಿನಲ್ಲಿ ಚಾಲಕರು ತಮ್ಮ ವೃತ್ತಿಯನ್ನು ಗೌರವಿಸಿದಂತೆ ಪ್ರತಿಯೊಬ್ಬ ಪ್ರಯಾಣಿಕರನ್ನು ಗೌರವಿಸಿದಾಗ ಮಾತ್ರ ಯಶಸ್ಸು ಕಾಣಬಹುದು ಎಂದು ತಿಳಿಸಿದರು.
ಟ್ಯಾಕ್ಸಿ ಡೈವರ್ಸ್ ಆರ್ಗನೈಜೇಷನ್ ಜಿಲ್ಲಾಧ್ಯಕ್ಷ ಹೆಚ್.ಕೆ.ಪ್ರಕಾಶ್ ಮಾತನಾಡಿ ಜಿಲ್ಲೆಯಾದ್ಯಂತ ಇರುವ ಟ್ಯಾಕ್ಸಿ ಚಾಲಕರನ್ನು ಮುಖಾಮುಖಿ ಭೇಟಿ ಮಾಡಿ ಸಮಸ್ಯೆಗಳನ್ನು ಆಲಿಸುವುದರ ಜೊತೆಗೆ ಸಲಹೆ ಸಹಕಾರ ಪಡೆಯುವ ಉದ್ದೇಶದಿಂದ ತಾಲ್ಲೂಕು ಮಟ್ಟದಲ್ಲಿ ಸಭೆಗಳನ್ನು ಆಯೋಜಿಸಿಕೊಂಡು ಬರಲಾಗುತ್ತಿದೆ ಎಂದು ತಿಳಿಸಿದರು.
ಅನಧಿಕೃತವಾಗಿ ಟ್ಯಾಕ್ಸಿ ನಿಲ್ದಾಣಗಳಲ್ಲಿ ಬಿಳಿ ಬೋರ್ಡ್‍ನ ಹಲವಾರು ಟ್ಯಾಕ್ಸಿಗಳು ಸಂಚರಿಸುತ್ತಿದ್ದು ಇದರಿಂದ ಹಳದಿ ಬೋರ್ಡಿನ ಟ್ಯಾಕ್ಸಿ ಚಾಲಕರಿಗೆ ತೀವ್ರ ಸಮಸ್ಯೆಗಳಾಗುತ್ತಿವೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೂ ದೂರು ಸಲ್ಲಿಸಿದ್ದರೂ ಯಾವುದೇ ಪ್ರಯೋಜನ ವಾಗಿಲ್ಲ. ಈ ವಿರುದ್ಧ ಚಾಲಕರ ಸಭೆ ನಡೆಸಲಾಗಿದ್ದು ಮುಂದಿನ ದಿನಗಳಲ್ಲಿ ಯಾವ ರೀತಿಯಲ್ಲಿ ನಿರ್ಣಯ ಕೈಗೊಳ್ಳುವ ಬಗ್ಗೆ ಚರ್ಚೆ ನಡೆಸಲಾಗುವುದು ಎಂದರು.
ಇದೇ ವೇಳೆ ಕರ್ನಾಟಕ ಟ್ಯಾಕ್ಸಿ ಡೈವರ್ಸ್ ಆರ್ಗನೈಜೇಷನ್ ಸಂಸ್ಥೆ ಏಳು ಮಂದಿ ಟ್ಯಾಕ್ಸಿ ಚಾಲಕರು ಸೇರ್ಪಡೆಗೊಂಡರು.
ಈ ಸಂದರ್ಭದಲ್ಲಿ ಟ್ಯಾಕ್ಸಿ ಡೈವರ್ಸ್ ಆರ್ಗನೈಜೇಷನ್ ಸಭಾಧ್ಯಕ್ಷ ಸುನೀಲ್, ಗೌರವಾಧ್ಯಕ್ಷ ರಾಜೇಶ್ ಮರಸಣಿಗೆ, ಪ್ರಧಾನ ಕಾರ್ಯದರ್ಶಿ ಇ.ಗಿರೀಶ್, ಸಹ ಕಾರ್ಯದರ್ಶಿ ಕಡೂರು ಸಂತೋಷ್, ಖಜಾಂಚಿ ಪ್ರದೀಪ್, ಸಹ ಖಜಾಂಚಿ ಹರೀಶ್ ಸದಸ್ಯರುಗಳಾದ ರವಿ ಬಸರಿಕಟ್ಟೆ, ಸುಂದ್ರೇಶ್, ಫಿಲಿಕ್ಸ್ ಪಿಂಟೋ, ವಿನೋದ್, ಯಶು, ಕಾಂತರಾಜು, ದಿನೇಶ್ ಮತ್ತಿತರರು ಉಪಸ್ಥಿತರಿದ್ದರು.