ಚಿಕ್ಕಮಗಳೂರು, ಫೆ.23:- ರಾಜ್ಯದಲ್ಲಿರುವ ಕಿವುಡ ಮತ್ತು ಮೂಕರಿಗೆ ಸರ್ಕಾರಿ ಸೌಲಭ್ಯ ಗಳನ್ನು ಒದಗಿಸಿ ಅವರ ಜೀವನಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸಿ ಚಿಕ್ಕಮಗಳೂರು ಜಿಲ್ಲಾ ಕಿವುಡರ ಸಂಘ ನಗರದ ಆಜಾದ್‍ಪಾರ್ಕ್‍ನಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.
ಈ ಸಂಬಂಧ ಮನವಿಯಲ್ಲಿ ತಿಳಿಸಿದ ಪ್ರತಿಭಟನಾಕಾರರು ಜಿಲ್ಲೆಯ ವಿವಿಧ ಕಛೇರಿಗಳಲ್ಲಿ ಕೆಲಸಗಳನ್ನು ಮಾಡಿಸಿಕೊಳ್ಳಲು ನಮ್ಮ ಸನ್ನೆಗಳನ್ನು ಅರ್ಥ ಮಾಡಿಕೊಳ್ಳುವ ನೌಕರರು ಇಲ್ಲದಿರುವುದು ಅಥವಾ ಸಂವಹನ ಕೊರತೆ ಉಂಟಾಗಿದೆ ಎಂದು ಹೇಳಿದರು.
ವಿಕಲಚೇತನ ಇಲಾಖೆಯವರು ಯಾವುದೇ ಸಭೆ, ಸಮಾರಂಭ ನಡೆಸುವಾಗ ಶ್ರವಣಮಾಂಧ್ಯ ಅಥವಾ ಕಿವುಡ ಮತ್ತು ಮೂಕರ ಸಂಘದ ಪದಾಧಿಕಾರಿಗಳನ್ನು ಆಹ್ವಾನಿಸದೇ ನಿರ್ಲಕ್ಷ್ಯ ತೋರುತ್ತಿದ್ದಾರೆ ಈ ಬಗ್ಗೆ ಕೂಡಲೇ ಗಮನಹರಿಸಿ ಕಿವುಡ, ಮೂಕರಿಗೆ ಆದ್ಯತೆ ನೀಡಬೇಕು ಎಂದರು.
ವಿಕಲಚೇತನರ ವಿವಾಹ ಪ್ರೋತ್ಸಾಹಧನ ಯೋಜನೆಯಡಿ 50 ಸಾವಿರಗಳನ್ನು ನೀಡಲಾಗುತ್ತಿದ್ದು ಪ್ರಸ್ತುತ ಈ ಸಹಾಯಧನವನ್ನು ಕಿವುಡ ಮತ್ತು ಮೂಕರಿಗೆ ಸಹ ನೀಡಬೇಕು. ಸರ್ಕಾರಿ ಕಛೇರಿಗಳಲ್ಲಿ ಕಿವುಡ ಮತ್ತು ಮೂಕರನ್ನು ಮೀಸಲಾತಿ ಆಧಾರದಲ್ಲಿ ನೇಮಕಾತಿ ಮಾಡಿಕೊಳ್ಳಬೇಕು ಎಂದು ಒತ್ತಾಯಿಸಿದರು.
ಗ್ರಾಮದಲ್ಲಿ ನಿವೇಶನ ಹಂಚುವಾಗ ಆದ್ಯತೆ ನೀಡಬೇಕು. ಅಂಗವಿಕಲರಿಗೆ, ಬುದ್ದಿಮಾಂಧ್ಯ ರಿಗೆ ಪೆನ್‍ಷನ್ ನೀಡುವ ರೀತಿಯಲ್ಲಿ ಕಿವುಡ ಮತ್ತು ಮೂಕರಿಗೆ ನೀಡಬೇಕು. ಜೀವನೋಪಯಕ್ಕಾಗಿ ಅಂಗಡಿ ಅಥವಾ ಇತರೆ ಕೆಲಸ ತೆರೆಯಲು ಸಾಲದ ಅವಕಾಶ ಕಲ್ಪಿಸಬೇಕು ಎಂದು ಆಗ್ರಹಿಸಿದರು.
ಈ ಎಲ್ಲಾ ಬೇಡಿಕೆಗಳನ್ನು ಸಂಘದ ವತಿಯಿಂದ ಸಂಬಂಧಪಟ್ಟ ಸಚಿವರುಗಳಿಗೆ ಮನವಿ ಸಲ್ಲಿಸಿದ್ದರೂ ಇದುವರೆಗೂ ಯಾವುದೇ ಪ್ರಯೋಜನವಾಗಿಲ್ಲ. ಆದ್ದರಿಂದ ಕಿವುಡ, ಮೂಕರಿಗೆ ದೊರೆಯಬೇಕಾದ ಸೌಲಭ್ಯಗಳನ್ನು ನೀಡುವುದರ ಜೊತೆಗೆ ಸುಗಮ ಜೀವನಕ್ಕೆ ಅನುಕೂಲ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸಂಘದ ಉಪಗೌರವ ಅಧ್ಯಕ್ಷ ಹೆಚ್.ಎಸ್.ದೇವರಾಜ್, ಜಿಲ್ಲಾಧ್ಯಕ್ಷ ಡಿ.ಎಂ.ಪ್ರದೀಪ್, ಪ್ರಧಾನ ಕಾರ್ಯದರ್ಶಿ ಜಿ.ಎಸ್.ಸ್ವಾಮಿ ಮತ್ತಿತರರು ಇದ್ದರು.