ಚಿಕ್ಕಮಗಳೂರು:- ನೀರು ವಿಶ್ವದ ಸಕಲ ಜೀವಿಗಳ ಅವಿಭಾಜ್ಯ ಅಂಗವಾಗಿದ್ದು ಪ್ರತಿಯೊಬ್ಬರು ನೀರನ್ನು ಮಿತವಾಗಿ ಬಳಸುವ ಮೂಲಕ ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸುವ ಕೆಲಸ ಮಾಡಬೇಕು ಎಂದು ನಿವೃತ್ತ ವೈದ್ಯಾಧಿಕಾರಿ ಡಾ|| ದೊಡ್ಡಮಲ್ಲಪ್ಪ ಹೇಳಿದರು.

ತಾಲ್ಲೂಕಿನ ಕಳಸಾಪುರ ವಿನಾಯಕ ಪ್ರೌಢಶಾಲೆಗೆ ಶುದ್ಧೀಕರಿಸುವ ಕುಡಿಯುವ ನೀರಿನ ಘಟಕವನ್ನು ಕೊಡುಗೆಯಾಗಿ ನೀಡಿ ನೀರಿನ ಮಹತ್ವದ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿ ಮಾತನಾಡುತ್ತಿದ್ದರು.

ಆರೋಗ್ಯ ದೃಷ್ಟಿಯಿಂದ ಮಕ್ಕಳಿಗೆ ಶಾಲೆಗಳಲ್ಲಿ ಕುಡಿಯುವ ನೀರು ಶುದ್ದವಾಗಿರಬೇಕು. ವಿದ್ಯಾರ್ಥಿಗಳು ತಮ್ಮ ದೈನಂದಿನ ಜೀವನದಲ್ಲಿ ಶುದ್ದ ಕುಡಿಯುವ ನೀರು ಸೇವಿಸುವುದರ ಮೂಲಕ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಸಲಹೆ ಮಾಡಿದರು.

ಪ್ರುಸ್ತುತ ದಿನಗಳಲ್ಲಿ ವಿಶ್ವದಾದ್ಯಂತ ಅಂತರ್ಜಲ ಮಟ್ಟ ಕುಸಿಯುತ್ತಿರುವುದರಿಂದ ನೀರಿಗಾಗಿ ಹಾಹಾಕಾರ ಪಡುವಂತಾಗಿದೆ. ನೀರಿನ ಮೂಲಗಳಾದ ಬಾವಿ ಹಾಗೂ ನೀರು ಸರಬರಾಜು ಟ್ಯಾಂಕ್‍ಗಳ ಶುದ್ಧತೆ ಬಗ್ಗೆ ಹೆಚ್ಚಿನ ನಿಗಾ ವಹಿಸಬೇಕಾಗಿದೆ ಎಂದು ತಿಳಿಸಿದರು.

ವಿನಾಯಕ ಪ್ರೌಢಶಾಲೆ ಸಂಸ್ಥೆ ಅಧ್ಯಕ್ಷ ಕೆ.ಎಂ.ಚಂದ್ರಮೌಳಿ ಮಾತನಾಡಿ ಶಾಲೆಯ ಮಕ್ಕಳಿಗಾಗಿ ಕುಡಿಯುವ ನೀರಿನ ಶುದ್ದೀಕರಿಸುವ ಘಟಕ ವಿತರಿಸುತ್ತಿರುವುದು ಸಂತಸ ತಂದಿದ್ದು ಅವರಿಗೆ ಇದೇ ವೇಳೆ ಶಾಲೆಯ ಪರವಾಗಿ ಕೃತಜ್ಞತೆ ಸಲ್ಲಿಸಿದರು.

ಕಾರ್ಯದರ್ಶಿ ಡಿ.ಕೆ.ಚಂದ್ರೇಗೌಡ ಮಾತನಾಡಿ ವಿದ್ಯಾರ್ಥಿಗಳು ಶುದ್ದೀಕರಿಸುವ ನೀರಿನ ಘಟಕ ವನ್ನು ಯಾವುದೇ ರೀತಿಯಲ್ಲಿ ಹಾನಿಯಾಗದಂತೆ ಮುಂಜಾಗ್ರತೆಯಾಗಿ ನೋಡಿಕೊಳ್ಳುವ ಮೂಲಕ  ಸುರಕ್ಷತೆಯೊಂದಿಗೆ ಕಾಪಾಡಿಕೊಳ್ಳಬೇಕು ಎಂದು ಸಲಹೆ ಮಾಡಿದರು.

ಇದೇ ವೇಳೆ ಶಾಲೆಯ ಆಡಳಿತ ಮಂಡಳಿಯ ಪರವಾಗಿ ಡಾ|| ದೊಡ್ಡಮಲ್ಲಪ್ಪ ಅವರಿಗೆ ನೆನಪಿನ ಕಾಣಿಕೆ ನೀಡುವ ಮೂಲಕ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಗ್ರಾ.ಪಂ. ಸದಸ್ಯ ಹರ್ಷದ್, ವಿನಾಯಕ ಪ್ರೌಢಶಾಲೆ ಸಂಸ್ಥೆಯ ಸದಸ್ಯರಾದ ತಿಮ್ಮೇಗೌಡ, ಗಣೇಶ್‍ಕುಮಾರ್, ಸುಬ್ಬರಾವ್, ರತ್ನಕುಮಾರ್, ಮರಳುಸಿದ್ದೇಗೌಡ, ರಂಗೇಗೌಡ, ಶೇಷಾಚಾರ್ಯ, ನಿಂಗಶೆಟ್ರು, ಈಶ್ವರಹಳ್ಳಿ ರಂಗಸ್ವಾಮಿ, ರಾಜೀವ್ ಶಾಲೆಯ ಶಿಕ್ಷಕರಾದ ಗಂಗಾಧರ್, ಪುಷ್ಪರಾಜ್, ಗಿರಿಜಮ್ಮ, ನಟರಾಜ್, ಶುಭಭವ್ಯ ಮತ್ತಿತರರು ಉಪಸ್ಥಿತರಿದ್ದರು.