ಅನೈತಿಕ ಸಂಬಂಧ: ಕಾರಣಗಳು ಮತ್ತು ಬದುಕನ್ನು ಉಳಿಸಿಕೊಳ್ಳುವ ಪರಿಹಾರಗಳು – Article by Naveen Habib

ಒಬ್ಬ ಲೇಖಕನಿಗೆ ಸಮಾಜದ ಸ್ವಾಸ್ಥ್ಯವನ್ನು ಸುಧಾರಿಸುವ ನಿಟ್ಟಿನಲ್ಲಿ ಯಾವುದೇ ವಿಷಯದ ಕುರಿತು ಬರೆಯುವಾಗ ಹಿಂಜರಿಕೆ, ಮುಜುಗರ ಅಥವಾ ಸಂಕೋಚ ಇರಬಾರದು ಎಂಬುದು ನನ್ನ ದೃಢ ನಂಬಿಕೆ. ಇಂದಿನ ನನ್ನ ಲೇಖನದ ವಿಷಯ ಪ್ರಸ್ತುತ ಸಮಾಜವನ್ನು ಕಾಡುತ್ತಿರುವ ಅತ್ಯಂತ ಸೂಕ್ಷ್ಮ ಸಮಸ್ಯೆ: ‘ಅನೈತಿಕ ಸಂಬಂಧ’ (Extra-Marital Affair).

ಜನರ ಆಲೋಚನಾ ಕ್ರಮದಲ್ಲಿ ಬದಲಾವಣೆ ತರಲು, ಕಣ್ಣೆದುರೇ ಒಡೆಯುತ್ತಿರುವ ಸಂಸಾರಗಳನ್ನು ರಕ್ಷಿಸಲು ಹಾಗೂ ಗಂಡ-ಹೆಂಡತಿಯರ ನಡುವಿನ ಅಪಸ್ವರವನ್ನು ನಿವಾರಿಸಲು ನನಗೆ ತಿಳಿದ ಮಟ್ಟಿಗೆ ಈ ಸಮಸ್ಯೆಯ ಮೂಲ ಕಾರಣಗಳು ಮತ್ತು ಅದನ್ನು ತಡೆಗಟ್ಟುವ ಕೆಲವು ದಿವ್ಯ ಸಲಹೆಗಳನ್ನು ಈ ಲೇಖನದ ಮೂಲಕ ನಿಮ್ಮ ಮುಂದೆ ಪ್ರಸ್ತುತಪಡಿಸುತ್ತಿದ್ದೇನೆ.

ಪವಿತ್ರ ಬಂಧನದ ಬುನಾದಿ
ಮದುವೆ ಎಂಬುದು ಕೇವಲ ಎರಡು ದೇಹಗಳ ಮಿಲನವಲ್ಲ; ಅದು ಏಳೇಳು ಜನ್ಮದ ಪವಿತ್ರ ಬಂಧನ ಎನ್ನಲಾಗುತ್ತದೆ. ಎರಡು ವಿಭಿನ್ನ ಜೀವಗಳು ಪರಸ್ಪರ ಒಪ್ಪಿ, ಒಟ್ಟಾಗಿ ಬದುಕಲು ಜೀವನ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುತ್ತವೆ. ಸುಖ-ದುಃಖ, ಕಷ್ಟ-ನಷ್ಟ ಹೀಗೆ ಜೀವನದ ಪ್ರತಿಯೊಂದು ಹೆಜ್ಜೆಯಲ್ಲೂ ಒಬ್ಬರಿಗೊಬ್ಬರು ಹೆಗಲಾಗಿ, ಕೊನೆಯವರೆಗೂ ಜೊತೆಯಾಗಿರುತ್ತೇವೆ ಎಂದು ಅಗ್ನಿಸಾಕ್ಷಿಯಾಗಿ ಭಾಷೆ ನೀಡುತ್ತವೆ.

ಬದುಕಿನ ಹಾದಿಯಲ್ಲಿ ಎಷ್ಟೋ ಸಂಬಂಧಗಳು ಹಿಂದೆ ಉಳಿದುಹೋಗಬಹುದು, ಆದರೆ ಕೊನೆಯುಸಿರಿನವರೆಗೂ ನೆರಳಿನಂತೆ ಜೊತೆಗಿರುವ ಏಕೈಕ ಶ್ರೇಷ್ಠ ಸಂಬಂಧವೆಂದರೆ ಅದು ‘ದಾಂಪತ್ಯ’. ಈ ಅದ್ಭುತ ಬಂಧನದ ಭದ್ರ ಬುನಾದಿಯೇ ವಿಶ್ವಾಸ ಮತ್ತು ನಂಬಿಕೆ. ಆದರೆ, ಇಂತಹ ಪವಿತ್ರ ಸಂಬಂಧದಲ್ಲೂ ಎಲ್ಲೋ ಒಂದು ಕಡೆ, ಯಾರೋ ಒಬ್ಬರಿಂದ ತಪ್ಪಾಗಿ, ಸಂಗಾತಿಯು ಮತ್ತೊಬ್ಬರ ಕಡೆಗೆ ಆಕರ್ಷಿತರಾಗುವುದು ಇಂದಿನ ದಿನಗಳಲ್ಲಿ ದುರಂತ ಸತ್ಯ.
ಮದುವೆಯ ನಂತರವೂ ಪುರುಷನಾಗಲಿ ಅಥವಾ ಮಹಿಳೆಯಾಗಲಿ, ಸಂಗಾತಿಯನ್ನು ಬಿಟ್ಟು ಬೇರೊಬ್ಬರ ಜೊತೆ ದೈಹಿಕ ಅಥವಾ ಮಾನಸಿಕ ಸಂಬಂಧವನ್ನು ಹೊಂದುವುದನ್ನು ನಾವು ‘ಅನೈತಿಕ ಸಂಬಂಧ’ ಅಥವಾ ‘ಎಕ್ಸ್ಟ್ರಾ ಮ್ಯಾರಿಟಲ್ ಅಫೇರ್’ ಎನ್ನುತ್ತೇವೆ. ಹಾಗಾದರೆ, ಈ ಆಕರ್ಷಣೆಗೆ ಮೂಲ ಕಾರಣಗಳೇನು? ಅದನ್ನು ತಡೆಯುವುದು ಹೇಗೆ? ಬನ್ನಿ, ವಿಶ್ಲೇಷಿಸೋಣ.

ಅನೈತಿಕ ಸಂಬಂಧಕ್ಕೆ ಪ್ರಮುಖ ಕಾರಣಗಳು ಮತ್ತು ಪರಿಹಾರಗಳು

ಇಂದು ಈ ಸಮಸ್ಯೆ ಕೇವಲ ಹಿರಿಯರು ನಿಶ್ಚಯಿಸಿದ (Arranged) ಮದುವೆಗಳಲ್ಲಿ ಮಾತ್ರವಲ್ಲ, ಪರಸ್ಪರ ಪ್ರೀತಿಸಿ, ಅರ್ಥಮಾಡಿಕೊಂಡು ಮದುವೆಯಾದವರಲ್ಲೂ ಹೆಚ್ಚಾಗಿ ಕಂಡುಬರುತ್ತಿರುವುದು ಕಳವಳಕಾರಿ ಸಂಗತಿ.

. ಸಂಗಾತಿಗೆ ಅಮೂಲ್ಯವಾದ ಸಮಯವನ್ನು ನೀಡದಿರುವುದು
ಮದುವೆಗೂ ಮುನ್ನ ಅಥವಾ ಪ್ರೀತಿಯ ಆರಂಭದ ದಿನಗಳಲ್ಲಿ ಎಷ್ಟೇ ಕೆಲಸವಿದ್ದರೂ ಸಮಯ ಮಾಡಿಕೊಂಡು ಮಾತನಾಡುತ್ತಿದ್ದವರು, ಮದುವೆಯಾಗಿ ಕೆಲವು ತಿಂಗಳುಗಳು ಕಳೆಯುತ್ತಿದ್ದಂತೆ ಕಾರ್ಯನಿರತರಾಗುತ್ತಾರೆ. ವೃತ್ತಿಜೀವನದ ಬಿಡುವಿಲ್ಲದ ವೇಳಾಪಟ್ಟಿಯ ನೆಪದಲ್ಲಿ ಸಂಗಾತಿಯನ್ನು ಕಡೆಗಣಿಸುವುದು ಅತಿ ದೊಡ್ಡ ತಪ್ಪು.

ಪರಿಹಾರ: ನಿಮ್ಮ ವೃತ್ತಿಬದುಕು ಎಷ್ಟೇ ಬ್ಯುಸಿಯಾಗಿದ್ದರೂ, ದಿನದ ಕೆಲವು ಕ್ಷಣಗಳನ್ನು ನಿಮ್ಮ ಸಂಗಾತಿಗಾಗಿ ಮಾತ್ರ ಮೀಸಲಿಡಿ. ಏಕೆಂದರೆ, ಒಂಟಿತನವೇ ಮನಸ್ಸು ಬೇರೆಡೆ ವಾಲಲು ಮೊದಲ ಕಾರಣವಾಗುತ್ತದೆ.

೨. ಪ್ರೀತಿ ಮತ್ತು ಕಾಳಜಿಯ ಕೊರತೆ
ಯಾವುದೇ ಸಂಗಾತಿ ತನ್ನ ಇಡೀ ಜೀವನವನ್ನು ನಿಮಗಾಗಿ ಮುಡಿಪಾಗಿಟ್ಟಾಗ, ಅವರು ನಿಮ್ಮಿಂದ ಬಯಸುವುದು ಕೇವಲ ಸಮಯ, ಪ್ರೀತಿ ಮತ್ತು ಜವಾಬ್ದಾರಿಯುತ ಕಾಳಜಿಯನ್ನು ಮಾತ್ರ. ಮದುವೆಯ ನಂತರ ಈ ಭಾವನೆಗಳು ಕಡಿಮೆಯಾದಾಗ ಸಂಗಾತಿಗೆ ತನ್ನ ಅಸ್ತಿತ್ವದ ಬಗ್ಗೆ ಬೇಸರ ಮೂಡುತ್ತದೆ.

ಪರಿಹಾರ: ಪ್ರೀತಿ ಮತ್ತು ಕಾಳಜಿ ಕೇವಲ ಮದುವೆಯ ಆರಂಭದ ದಿನಗಳಿಗೆ ಸೀಮಿತವಾಗಿರಬಾರದು. ಅದು ನಿರಂತರವಾಗಿರಬೇಕು. ಸಂಗಾತಿಗೆ ಮನೆಯಲ್ಲೇ ಭರಪೂರ ಪ್ರೀತಿ ಸಿಕ್ಕರೆ, ಅವರ ಮನಸ್ಸು ಎಂದಿಗೂ ಮತ್ತೊಂದನ್ನು ಆಶಿಸುವುದಿಲ್ಲ.

೩. ಮಾತೃತ್ವದ ಅವಧಿಯಲ್ಲಿ ಹೆಣ್ಣಿನ ಕಡೆಗಣನೆ
ಒಂದು ಹೆಣ್ಣು ಗರ್ಭವತಿಯಾಗಿ, ಮಗುವಿಗೆ ಜನ್ಮ ನೀಡಿ, ಮತ್ತೆ ಹಳೆಯ ಸ್ಥಿತಿಗೆ ಬರುವವರೆಗಿನ ಕಾಲಘಟ್ಟ ಅತ್ಯಂತ ಸೂಕ್ಷ್ಮವಾದದ್ದು. ಈ ಸಮಯದಲ್ಲಿ ಅವಳಿಗೆ ದೈಹಿಕ ಆರೈಕೆಗಿಂತ ಹೆಚ್ಚಾಗಿ ಗಂಡನ ಮಾನಸಿಕ ಬೆಂಬಲ, ಪ್ರೀತಿ ಮತ್ತು ಸಾಮೀಪ್ಯದ ಅವಶ್ಯಕತೆ ಇರುತ್ತದೆ. ದುರದೃಷ್ಟವಶಾತ್, ಇದೇ ಸಮಯದಲ್ಲಿ ಕೆಲವು ಪುರುಷರು ಹೆಂಡತಿಯಿಂದ ದೂರ ಸರಿಯುತ್ತಾರೆ. ಇದು ಅವಳ ಭಾವನೆಗಳಿಗೆ ತೀವ್ರ ಪೆಟ್ಟು ನೀಡುತ್ತದೆ.

ಪರಿಹಾರ: ಹೆಣ್ಣು ತಾಯಿಯಾಗುವ ಈ ಪವಿತ್ರ ಸಮಯದಲ್ಲಿ ಅವಳಿಗೆ ಎಂದಿಗಿಂತಲೂ ಹೆಚ್ಚು ಪ್ರೀತಿ ಮತ್ತು ಗೌರವ ನೀಡಿ. ಗಂಡನ ಪ್ರೀತಿಯ ನಿಜವಾದ ಆಳ ತಿಳಿಯುವುದೇ ಈ ಸಮಯದಲ್ಲಿ. ಈ ಪರೀಕ್ಷೆಯಲ್ಲಿ ಗಂಡ ಗೆದ್ದರೆ, ಆ ಸಂಸಾರದಲ್ಲಿ ಮೂರನೇ ವ್ಯಕ್ತಿಯ ಪ್ರವೇಶಕ್ಕೆ ಜಾಗವೇ ಇರುವುದಿಲ್ಲ.

. ಒತ್ತಾಯದ ವಿವಾಹ
ಪ್ರತಿಯೊಬ್ಬ ಯುವಕ-ಯುವತಿಗೂ ತಮ್ಮ ಭಾವಿ ಸಂಗಾತಿಯ ಬಗ್ಗೆ ನೂರಾರು ಕನಸುಗಳು, ಕಲ್ಪನೆಗಳು ಇರುತ್ತವೆ. ಆದರೆ ಪಾಲಕರು ಮಕ್ಕಳ ಇಷ್ಟಕ್ಕೆ ವಿರುದ್ಧವಾಗಿ, ಹೊಂದಾಣಿಕೆಯಾಗದ ಅಥವಾ ಅತಿಯಾದ ವಯಸ್ಸಿನ ಅಂತರವಿರುವ ವ್ಯಕ್ತಿಯ ಜೊತೆ ಒತ್ತಾಯಪೂರ್ವಕವಾಗಿ ಮದುವೆ ಮಾಡಿದಾಗ, ಭವಿಷ್ಯದಲ್ಲಿ ಹೊಂದಾಣಿಕೆಯ ಕೊರತೆಯಿಂದ ಇಂತಹ ಸಮಸ್ಯೆಗಳು ತಲೆದೂರುತ್ತವೆ.

ಪರಿಹಾರ: ಪೋಷಕರೇ, ಮಕ್ಕಳ ಭವಿಷ್ಯದ ಜೊತೆ ಆಟವಾಡಬೇಡಿ. ಮದುವೆ ನಿಶ್ಚಯಿಸುವ ಮುನ್ನ ಅವರ ಸಂಪೂರ್ಣ ಒಪ್ಪಿಗೆಯನ್ನು ಪಡೆದು, ಅವರ ಮನಸ್ಸಿಗೆ ಒಪ್ಪುವ ಜೋಡಿಯೊಂದಿಗೆ ವಿವಾಹ ಮಾಡಿಸಿ.

೫. ದೀರ್ಘಕಾಲದ ದೂರದ ಬದುಕು
ಕೆಲಸದ ನಿಮಿತ್ತ ಅಥವಾ ವೃತ್ತಿಬದುಕಿನ ಕಾರಣಗಳಿಂದಾಗಿ ದಂಪತಿಗಳು ದೀರ್ಘಕಾಲ ಬೇರೆ ಬೇರೆ ಊರುಗಳಲ್ಲಿ ವಾಸಿಸುವುದು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದೆ. ಗಂಡ ಒಂದು ಕಡೆ, ಹೆಂಡತಿ ಇನ್ನೊಂದು ಕಡೆ ಇದ್ದಾಗ ಸಹಜವಾಗಿಯೇ ಒಂಟಿತನ ಆವರಿಸುತ್ತದೆ. ಇದು ಕೂಡ ದಾರಿ ತಪ್ಪಲು ಪ್ರಮುಖ ಪ್ರಚೋದನೆಯಾಗುತ್ತದೆ.

ಪರಿಹಾರ: ಸಾಧ್ಯವಾದಷ್ಟು ಮಟ್ಟಿಗೆ ದಂಪತಿಗಳು ಒಂದೇ ಊರಿನಲ್ಲಿ, ಒಂದೇ ಸೂರಿನಡಿ ವಾಸಿಸಲು ವ್ಯವಸ್ಥೆ ಮಾಡಿಕೊಳ್ಳಿ. ವೃತ್ತಿಗಿಂತ ಸಂಸಾರದ ನೆಮ್ಮದಿ ಮುಖ್ಯ ಎಂಬುದನ್ನು ಮರೆಯಬೇಡಿ.

೬. ಅತಿಯಾದ ಮದ್ಯಪಾನ ಮತ್ತು ದುರ್ವ್ಯಸನಗಳು
ತನ್ನ ಹೆತ್ತವರನ್ನು, ಹುಟ್ಟಿ ಬೆಳೆದ ಮನೆಯನ್ನು ಬಿಟ್ಟು, ಕೇವಲ ಗಂಡನನ್ನು ನಂಬಿ ಬರುವ ಹೆಣ್ಣಿಗೆ ನೂರೆಂಟು ಆಸೆಗಳಿರುತ್ತವೆ. ಆದರೆ, ಗಂಡ ದಿನಾಲೂ ಕಂಠಪೂರ್ತಿ ಕುಡಿದು ಬಂದು ಗಲಾಟೆ ಮಾಡಿದರೆ ಅಥವಾ ಪ್ರಜ್ಞೆಯಿಲ್ಲದೆ ಬಿದ್ದರೆ ಆಕೆಯ ಕನಸುಗಳು ನುಚ್ಚುನೂರಾಗುತ್ತವೆ. ಇಂತಹ ನರಕಸದೃಶ ಬದುಕಿನಿಂದ ಬೇಸತ್ತು, ನೆಮ್ಮದಿಯನ್ನು ಹುಡುಕುತ್ತಾ ಹೆಣ್ಣು ದಾರಿ ತಪ್ಪುವ ಸಾಧ್ಯತೆಗಳಿರುತ್ತವೆ.

ಪರಿಹಾರ: ಮದ್ಯಪಾನದಂತಹ ದುರ್ವ್ಯಸನಗಳಿಗೆ ದಾಸರಾಗಿ ಸುಂದರವಾದ ಕುಟುಂಬವನ್ನು ಬೀದಿಗೆ ತರಬೇಡಿ. ಕುಡಿತಕ್ಕಿಂತ ನಿಮ್ಮ ಹೆಂಡತಿ, ಮಕ್ಕಳ ಭವಿಷ್ಯ ದೊಡ್ಡದು ಎಂಬುದನ್ನು ಅರಿಯಿರಿ.

ದಾಂಪತ್ಯದ ನಿಷ್ಕರ್ಷ
ಆತ್ಮೀಯ ಓದುಗರೇ, ಅನೈತಿಕ ಸಂಬಂಧಗಳಿಗೆ ಇರುವ ಮುಖ್ಯ ಕಾರಣಗಳು ಮತ್ತು ಅವುಗಳನ್ನು ದಾಟುವ ಮಾರ್ಗಗಳನ್ನು ನಾನು ನಿಮ್ಮ ಮುಂದೆ ಇಟ್ಟಿದ್ದೇನೆ. ಕೊನೆಯದಾಗಿ ನಾನು ಹೇಳಬಯಸುವ ಸುವರ್ಣ ಸೂತ್ರವೊಂದೇ: ನಿಮ್ಮ ಸಂಗಾತಿಗೆ ಗೌರವ ನೀಡಿ, ಅವರ ಭಾವನೆಗಳಿಗೆ ಸ್ಪಂದಿಸಿ.

ಒಂದು ಪ್ರಸಿದ್ಧ ತತ್ವವಿದೆ: “ಮನುಷ್ಯ ತನ್ನ ಬಳಿ ಇರುವುದನ್ನು ಎಂದಿಗೂ ಆಶಿಸುವುದಿಲ್ಲ, ತನ್ನ ಬಳಿ ಇಲ್ಲದೇ ಇರುವುದನ್ನೇ ಪಡೆಯಲು ಹಂಬಲಿಸುತ್ತಾನೆ.”

ಹೊಟ್ಟೆ ತುಂಬ ಉಂಡ ವ್ಯಕ್ತಿಗೆ ನೀವು ಎಷ್ಟೇ ರುಚಿಕರವಾದ ಮೃಷ್ಟಾನ್ನ ಭೋಜನವನ್ನು ನೀಡಿದರೂ ಅವನು ಅದನ್ನು ಮುಟ್ಟಲು ಕೂಡ ಹೋಗಲ್ಲ. ಅದೇ ರೀತಿ, ನಿಮ್ಮ ಸಂಗಾತಿಗೆ ಮನೆಯಲ್ಲೇ ಸತ್ಕಾರ, ನಂಬಿಕೆ, ನಿರಂತರ ಪ್ರೀತಿ ಮತ್ತು ಕಾಳಜಿ ಸಿಕ್ಕರೆ, ಅವರು ಹೊರಗಿನ ಪ್ರಪಂಚದ ಕಡೆಗೆ ಕಣ್ಣೆತ್ತಿಯೂ ನೋಡುವುದಿಲ್ಲ. ಪರಸ್ಪರ ನಂಬಿಕೆಯೇ ಸಂಸಾರದ ರಥಕ್ಕೆ ದಿವ್ಯ ಚಕ್ರ. ಅದನ್ನು ಕಾಪಾಡಿಕೊಳ್ಳೋಣ, ಸುಂದರ ಕುಟುಂಬಗಳನ್ನು ಉಳಿಸೋಣ.

  • ಲೇಖನ: ನವೀನ ಗೋಪಾಲಸಾ ಹಬೀಬ
  • (ಖ್ಯಾತ ಚಿಂತಕರು ಹಾಗೂ ಪ್ರೇರಕ ಭಾಷಣಕಾರರು)

Leave a Reply

Your email address will not be published. Required fields are marked *