ಕ್ರೈಸ್ಟ್ ಕಿಂಗ್ ಪ್ರೌಢ ಶಾಲೆಯ ವಾರ್ಷಿಕೋತ್ಸವ ಕಾರ್ಯಕ್ರಮ

ಕಾರ್ಕಳ: ಇಲ್ಲಿನ ಕ್ರೈಸ್ಟ್ ಕಿಂಗ್ ಆಂಗ್ಲಮಾಧ್ಯಮ ಪ್ರೌಢ ಶಾಲೆಯ ವಾರ್ಷಿಕೋತ್ಸವ ಕಾರ್ಯಕ್ರಮವು ಜ. 22 ರಂದು ಸಂಸ್ಥೆಯ ಹೊಸ ಸಭಾಂಗಣದಲ್ಲಿ ನಡೆಯಿತು.

ಕಾರ್ಕಳದ ಪ್ರಸಿದ್ಧ ಚಾರ್ಟೆಡ್ ಅಕೌಂಟೆಂಟ್ ಆಗಿರುವ ಕೆ. ಕಮಾಲಾಕ್ಷ ಕಾಮತ್, ಇವರು ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು “ವಿದ್ಯಾರ್ಥಿಗಳು ದೇವರಿಗೆ, ಹೆತ್ತವರಿಗೆ, ಗುರುಗಳಿಗೆ ಗೌರವ ನೀಡುವುದನ್ನು ಎಳವೆಯಲ್ಲಿಯೇ ನಿಮ್ಮಲ್ಲಿ ರೂಢಿಸಿಕೊಳ್ಳಿ ಹಾಗೂ ಉತ್ತಮ ಸಂಸ್ಕಾರದಿಂದ ಕೂಡಿದ ವಿದ್ಯೆಯನ್ನು ಕಲಿತು ಬದುಕಿನಲ್ಲಿ ಯಶಸ್ವಿಯಾಗಿ” ಎಂದು ಹಾರೈಸಿದರು. ಅತಿಥಿಗಳಾಗಿ ಆಗಮಿಸಿದ್ದ ಬೈಲೂರು ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕಿಯಾಗಿರುವ ಪ್ರೇಮ ಜತ್ತನ್ನ ಅವರು ಮಾತನಾಡುತ್ತಾ “ಹದಿಹರೆಯದ ವಿದ್ಯಾರ್ಥಿಗಳಾದ ನೀವು ಜೀವನದಲ್ಲಿ ಎಲ್ಲಿಯೂ ಎಡವದೆ ಸಂಸ್ಕಾರದಿಂದ ಕೂಡಿದ ಜೀವನವನ್ನು ನಡೆಸಿ, ಹೆತ್ತವರಿಗೂ ಹಾಗೂ ಗುರುಗಳಿಗೂ ಕೀರ್ತಿಯನ್ನು ತನ್ನಿ” ಎಂದು ಕರೆ ನೀಡಿದರು. ಇನ್ನೋರ್ವ ಅತಿಥಿಯಾಗಿ ಆಗಮಿಸಿದ್ದ ಸರ್ಕಾರಿ ಪ್ರಾಥಮಿಕ ಶಾಲೆ ಕೂಡಬೆಟ್ಟು ಮಾಳ ಇಲ್ಲಿಯ ಮುಖ್ಯ ಶಿಕ್ಷಕಿಯಾದ ಪ್ರಭಾವತಿ ಇವರು ಮಾತನಾಡಿ “ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿಯೂ ಪ್ರತಿಭೆಯಿರುತ್ತದೆ. ಇದನ್ನು ಗುರುತಿಸಿ, ಪ್ರೋತ್ಸಾಹಿಸುವುದು ಶಿಕ್ಷಕರ ಕರ್ತವ್ಯವಾಗಿದೆ.

ಇಲ್ಲಿನ ಈ ವಿದ್ಯಾಸಂಸ್ಥೆಯಲ್ಲಿರುವ ಶಿಕ್ಷಕರು ವಿದ್ಯಾರ್ಥಿಗಳಲ್ಲಿರುವ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುತ್ತಿರುವುದು ಸಂತೋಷದ ವಿಷಯವಾಗಿದೆ”. ಎಂದು ಹೇಳಿದರು. ಮತ್ತೋರ್ವ ಅತಿಥಿಯಾಗಿರುವ ಉಡುಪಿ ಜಿಲ್ಲಾಮಟ್ಟದ ಅತ್ಯುತ್ತಮ ದೈಹಿಕ ಶಿಕ್ಷಣ ಶಿಕ್ಷಕ ಪ್ರಶಸ್ತಿ ವಿಜೇತ ಸರ್ಕಾರಿ ಪ್ರಾಥಮಿಕ ಶಾಲೆ ಕೊಳಕೆ, ಇರ್ವತ್ತೂರು ಇಲ್ಲಿನ ದೈಹಿಕ ಶಿಕ್ಷಣ ಶಿಕ್ಷಕರಾಗಿರುವ ಆನಂದ ಪೂಜಾರಿ ಅವರು ಮಾತನಾಡಿ “ಈ ವಿದ್ಯಾಸಂಸ್ಥೆಯು ತಾಲೂಕಿನಲ್ಲಿಯೇ ಅತ್ಯುತ್ತಮ ವಿದ್ಯಾಸಂಸ್ಥೆಗಳಲ್ಲಿ ಒಂದಾಗಿದೆ. ಗ್ರಾಮೀಣ ಪ್ರದೇಶಗಳಿಂದ ವಿದ್ಯೆಗಾಗಿ ಈ ಸಂಸ್ಥೆಯನ್ನು ಅರಸಿಕೊಂಡು ಬರುತ್ತಿರುವುದು ಇದಕ್ಕೆ ಸಾಕ್ಷಿಯಾಗಿದೆ” ಎಂದು ಹೇಳಿದರು. ಕ್ರೈಸ್ಟ್ ಕಿಂಗ್ ಎಜುಕೇಷನ್ ಟ್ರಸ್ಟ್ ನ ಕಾರ್ಯದರ್ಶಿಗಳಾದ ಅವೆಲಿನ್ ಲೂಯಿಸ್‍ರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಪ್ರೌಢಶಾಲಾ ವಿಭಾಗದ ಮುಖ್ಯಶಿಕ್ಷಕಿಯಾಗಿರುವ ಜೋಸ್ನಾ ಸ್ನೇಹಲತಾ ಶಾಲಾ ವಾರ್ಷಿಕ ವರದಿಯನ್ನು ವಾಚಿಸಿದರು. ಪದವಿ ಪೂರ್ವ ವಿಭಾಗದ ಉಪಪ್ರಾಚಾರ್ಯರಾದ ಡಾ. ಪ್ರಕಾಶ್ ಭಟ್, ಸಂಸ್ಥೆಯ ಆಪ್ತ ಸಮಾಲೋಚಕಿಯಾಗಿರುವ ಡಾ. ಸಿ.ಶಾಲೆಟ್ ಸಿಕ್ವೇರಾ, ಸಂಸ್ಥೆಯ ಆಡಳಿತಾಧಿಕಾರಿಯಾಗಿರುವ ಕಿರಣ್ ಕ್ರಾಸ್ತ, ಪ್ರಾಥಮಿಕ ವಿಭಾಗದ ಮುಖ್ಯಶಿಕ್ಷಕರಾದ ರುಡಾಲ್ಫ್ ಕಿಶೋರ್ ಲೋಬೋ, ಶಿಕ್ಷಕ- ರಕ್ಷಕ ಸಂಘದ ಅಧ್ಯಕ್ಷರಾದ ಶರೀಟಾ ನೊರೋನ್ಹ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ವಿವಿಧ ಸಾಂಸ್ಕೃಾತಿಕ, ಸಾಹಿತ್ಯಿಕ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ನಂತರ ಮಕ್ಕಳಿಂದ ವಿವಿಧ ಮನೋರಂಜನಾ ಕಾರ್ಯಕ್ರಮಗಳು ಜರುಗಿದವು. ಸಂಸ್ಥೆಯ ಶಿಕ್ಷಕಿಯರಾದ ಆಶಾಜ್ಯೋತಿ ಸ್ವಾಗತಿಸಿ ಮಂಗಳ ಕುಮಾರಿ ವಂದಿಸಿದರು. ನೀತಿ ಆಚಾರ್ಯ ಅವರು ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *