ಕರಾವಳಿ ತ್ಯಾಜ್ಯ ನಿರ್ವಹಣೆ ಮತ್ತು ಪರಿಸರ ಸುಸ್ಥಿರತೆಗೆ ರಾಷ್ಟ್ರೀಯ ಕಾರ್ಯಾಗಾರ: ‘ಹಸಿರು ಸಂವಾದ’ ಅಭಿಯಾನಕ್ಕೆ ಚಾಲನೆ

ಮೂಡುಬಿದಿರೆ: ಕರಾವಳಿ ನದಿಗಳ ಮೂಲಕ ಸಮುದ್ರ ಸೇರುವ ಪ್ಲಾಸ್ಟಿಕ್ ಹಾಗೂ ಇತರ ತ್ಯಾಜ್ಯವನ್ನು ಮೂಲದಲ್ಲೇ ತಡೆಗಟ್ಟುವ ಉದ್ದೇಶದಿಂದ ರೂಪಿಸಲಾದ ಮಹತ್ವಾಕಾಂಕ್ಷೆಯ ‘ಹಸಿರು ಸಂವಾದ’ ಅಭಿಯಾನಕ್ಕೆ ಆಳ್ವಾಸ್ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಭಾನುವಾರ ಚಾಲನೆ ದೊರೆಯಿತು.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ, ಪರ್ಯಾವರಣ ಸಂರಕ್ಷಣಾ ತಂಡ ಹಾಗೂ ವಿವಿಧ ಶೈಕ್ಷಣಿಕ ಸಂಸ್ಥೆಗಳು, ಸ್ವಯಂಸೇವಾ ಸಂಘಟನೆಗಳು, ಕೈಗಾರಿಕೆಗಳು ಮತ್ತು ಆಡಳಿತ ವ್ಯವಸ್ಥೆಯ ಸಹಭಾಗಿತ್ವದಲ್ಲಿ ಈ ರಾಷ್ಟ್ರೀಯ ಮಟ್ಟದ ಕಾರ್ಯಕ್ರಮ ಆರಂಭಗೊಂಡಿದ್ದು, ವೈಜ್ಞಾನಿಕ ತ್ಯಾಜ್ಯ ನಿರ್ವಹಣೆ ಮತ್ತು ಸುಸ್ಥಿರ ಪರಿಸರ ಸಂರಕ್ಷಣೆಗೆ ಮಾದರಿಯಾಗುವ ಗುರಿ ಹೊಂದಿದೆ.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಜಯಲಕ್ಷ್ಮಿ ರಾಯ್ಕೋಡ್ ಮಾತನಾಡಿ, ಪರಿಸರ ಸಂರಕ್ಷಣೆ ಮತ್ತು ಸಾರ್ವಜನಿಕ ಆರೋಗ್ಯ ಪರಸ್ಪರ ಸಂಬಂಧ ಹೊಂದಿದ್ದು, ಸರ್ಕಾರದ ಯೋಜನೆಗಳು ಯಶಸ್ವಿಯಾಗಬೇಕಾದರೆ ಜನರ ಸಕ್ರಿಯ ಸಹಭಾಗಿತ್ವ ಅತ್ಯಗತ್ಯ. ಸರ್ಕಾರ ಮತ್ತು ಸಾರ್ವಜನಿಕರ ಸಹಕಾರ ಚಪ್ಪಾಳೆಯ ಎರಡು ಕೈಗಳಂತೆ ಒಂದಾದಾಗ ಮಾತ್ರ ಅಭಿವೃದ್ಧಿಯ ಸದ್ದು ಮೂಡುತ್ತದೆ.

ಅವೈಜ್ಞಾನಿಕ ತ್ಯಾಜ್ಯ ವಿಲೇವಾರಿ ಪರಿಸರಕ್ಕೂ ಸಾರ್ವಜನಿಕ ಆರೋಗ್ಯಕ್ಕೂ ಗಂಭೀರ ಅಪಾಯವನ್ನುಂಟು ಮಾಡುತ್ತಿದೆ. ಆರೋಗ್ಯಕರ ಜೀವನಶೈಲಿ ಮತ್ತು ಪರಿಸರ ಸ್ನೇಹಿ ಅಭ್ಯಾಸಗಳನ್ನು ಆಳವಡಿಸಿಕೊಳ್ಳುವುದು ಇಂದಿನ ಅಗತ್ಯ. ಪರಿಸರದ ಬಗ್ಗೆ ಪ್ರತಿಯೊಬ್ಬರೂ ವೈಯಕ್ತಿಕ ಹೊಣೆಗಾರಿಕೆ ಹೊಂದಿದಾಗ ಮಾತ್ರ ಸುಸ್ಥಿರ ಅಭಿವೃದ್ಧಿಯ ಗುರಿ ತಲುಪಲು ಸಾಧ್ಯವಾಗುತ್ತದೆ ಎಂದು ಹೇಳಿದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಹಲವು ವರ್ಷಗಳಿಂದ ಪರಿಸರ ಸಂರಕ್ಷಣೆ, ಸಾಮಾಜಿಕ ಜಾಗೃತಿ ಹಾಗೂ ಮೌಲ್ಯಾಧಾರಿತ ಕಾರ್ಯಕ್ರಮಗಳ ಮೂಲಕ ಮಾದರಿ ಕಾರ್ಯಗಳನ್ನು ನಡೆಸುತ್ತಿದೆ ಎಂದು ಶ್ಲಾಘಿಸಿದರು.

ಇತ್ತೀಚಿನ ದಿನಗಳಲ್ಲಿ ಮಹಿಳೆಯರಲ್ಲಿ ಹೆಚ್ಚುತ್ತಿರುವ ಕೆಲವು ಆರೋಗ್ಯ ಸಮಸ್ಯೆಗಳಿಗೆ, ವಿಶೇಷವಾಗಿ ಗರ್ಭಕೋಶ ಸಂಬಂಧಿತ ತೊಂದರೆಗಳಿಗೆ, ಒಂದು ಬಾರಿ ಬಳಸಿ ತ್ಯಜಿಸುವ ಸ್ಯಾನಿಟರಿ ಹಾಗೂ ಅಡಲ್ಟ್ ಪ್ಯಾಡ್‍ಗಳಲ್ಲಿ ಬಳಸಲಾಗುವ ಕೆಲವು ರಾಸಾಯನಿಕಗಳ ಪರಿಣಾಮವೂ ಕಾರಣವಾಗಿರಬಹುದೆಂಬ ಆತಂಕಗಳು ವ್ಯಕ್ತವಾಗುತ್ತಿವೆ. ಆದ್ದರಿಂದ ಇಂತಹ ಉತ್ಪನ್ನಗಳ ಬಳಕೆ, ಸುರಕ್ಷಿತ ವಿಲೇವಾರಿ ಹಾಗೂ ಪರಿಸರ ಸ್ನೇಹಿ ಪರ್ಯಾಯಗಳ ಬಗ್ಗೆ ಸಮಾಜದಲ್ಲಿ ಹೆಚ್ಚಿನ ಅರಿವು ಮೂಡಿಸುವ ಅಗತ್ಯವಿದೆ ಎಂದರು.
ಪರ್ಯಾವರಣ ಸಂರಕ್ಷಣಾ ತಂಡದ ಪ್ರಾಂತ ಸಂಯೋಜಕ ವೆಂಕಟೇಶ್ ಸಂಗನಾಳ್ ಮಾತನಾಡಿ, ಪರಿಸರ ಸಂರಕ್ಷಣೆ ಕೇವಲ ಸ್ವಚ್ಛತಾ ಅಭಿಯಾನವಾಗಿರದೆ, ಜನರ ಜೀವನಶೈಲಿಯಲ್ಲಿ ಬದಲಾವಣೆ ತರುವ ಸಾಮಾಜಿಕ ಚಳವಳಿಯಾಗಬೇಕು ಎಂದರು. ‘ಹಸಿರು ಸಂವಾದ’ ಅಭಿಯಾನವು ಕೇವಲ ಒಂದು ಕಾರ್ಯಕ್ರಮವಲ್ಲ; ಅದು ಪ್ರತಿ ಮನೆ ಮತ್ತು ಪ್ರತಿ ಗ್ರಾಮವನ್ನು ತಲುಪುವ ಜನಾಂದೋಲನವಾಗಿ ಮೂಡಿಬರಬೇಕು ಎಂದರು.

ಇಂದಿನ ದಿನಗಳಲ್ಲಿ ಜನರ ಖರೀದಿ ಸಾಮಥ್ರ್ಯ ಹೆಚ್ಚುತ್ತಿರುವಂತೆ ಬಳಕೆಯ ವಸ್ತುಗಳ ಪ್ರಮಾಣವೂ ಹೆಚ್ಚುತ್ತಿದ್ದು, ಅದರೊಂದಿಗೆ ತ್ಯಾಜ್ಯದ ಪ್ರಮಾಣವೂ ಗಣನೀಯವಾಗಿ ಏರಿಕೆಯಾಗುತ್ತಿದೆ. ಬಳಕೆ ಆಧಾರಿತ ಜೀವನಶೈಲಿಯ ಪರಿಣಾಮವಾಗಿ ಪರಿಸರದ ಮೇಲೆ ಹೆಚ್ಚುತ್ತಿರುವ ಒತ್ತಡವನ್ನು ಪ್ರತಿಯೊಬ್ಬರೂ ಅರಿತುಕೊಳ್ಳಬೇಕಾಗಿದೆ ಎಂದು ಹೇಳಿದರು. ಈ ಹಿಂದೆ ನಗರ ಪ್ರದೇಶಗಳಿಗೆ ಮಾತ್ರ ಸೀಮಿತವಾಗಿದ್ದ ಜೀವನಶೈಲಿಯ ಬದಲಾವಣೆಗಳು ಈಗ ಗ್ರಾಮೀಣ ಪ್ರದೇಶಗಳಿಗೂ ವೇಗವಾಗಿ ವ್ಯಾಪಿಸುತ್ತಿವೆ. ಇದರ ಪರಿಣಾಮವಾಗಿ ಗ್ರಾಮಗಳಲ್ಲಿಯೂ ಪ್ಲಾಸ್ಟಿಕ್ ಹಾಗೂ ಇತರ ಘನ ತ್ಯಾಜ್ಯದ ಸಮಸ್ಯೆ ಗಂಭೀರ ಸ್ವರೂಪ ಪಡೆಯುತ್ತಿದೆ. ಆದ್ದರಿಂದ ಸಮಸ್ಯೆ ಉಲ್ಬಣವಾಗುವ ಮುನ್ನವೇ ವೈಜ್ಞಾನಿಕ ತ್ಯಾಜ್ಯ ನಿರ್ವಹಣೆ ಮತ್ತು ಪರಿಸರ ಸ್ನೇಹಿ ಜೀವನಶೈಲಿಯನ್ನು ಅಳವಡಿಸಿಕೊಳ್ಳುವುದು ಅಗತ್ಯ ಎಂದು ಅವರು ತಿಳಿಸಿದರು. ‘ಹಸಿರು ಸಂವಾದ’ ಅಭಿಯಾನದ ಮೂಲಕ ಸಮುದಾಯದ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸಿ, ಗ್ರಾಮ ಮಟ್ಟದಲ್ಲೇ ಸುಸ್ಥಿರ ತ್ಯಾಜ್ಯ ನಿರ್ವಹಣೆಯ ಮಾದರಿಯನ್ನು ನಿರ್ಮಿಸುವ ಗುರಿ ಹೊಂದಲಾಗಿದೆ ಎಂದು ಅವರು ತಿಳಿಸಿದರು.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ, ಕರಾವಳಿ ಕರ್ನಾಟಕವು ಒಂದು ಕಡೆ ಅರಬ್ಬಿ ಸಮುದ್ರ ಹಾಗೂ ಮತ್ತೊಂದು ಕಡೆ ವಿಶ್ವದ ಜೀವವೈವಿಧ್ಯದ ಅತ್ಯಂತ ಸೂಕ್ಷ್ಮ ಪರಿಸರ ವಲಯಗಳಲ್ಲಿ ಒಂದಾದ ಪಶ್ಚಿಮ ಘಟ್ಟಗಳಿಂದ ಆವೃತವಾಗಿರುವ ಅಪರೂಪದ ಭೌಗೋಳಿಕ ಪ್ರದೇಶವಾಗಿದೆ. ಇಂತಹ ಅಮೂಲ್ಯ ನೈಸರ್ಗಿಕ ಪರಿಸರ ವ್ಯವಸ್ಥೆಯನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ಉಳಿಸುವ ಜವಾಬ್ದಾರಿ ಪ್ರತಿಯೊಬ್ಬ ನಾಗರಿಕನ ಮೇಲಿದೆ ಎಂದರು.

ಪಶ್ಚಿಮ ಘಟ್ಟಗಳು ಈ ಭಾಗದ ಜೀವನಾಡಿ ಹಾಗೂ ಶ್ವಾಸಕೋಶದಂತಿವೆ. ಅವು ಕೇವಲ ಜೀವವೈವಿಧ್ಯದ ತಾಣಗಳಷ್ಟೇ ಅಲ್ಲ, ಕರಾವಳಿ ಭಾಗದ ಹವಾಮಾನ ಸಮತೋಲನ, ಜಲಸಂಪನ್ಮೂಲ ಮತ್ತು ಪರಿಸರ ಆರೋಗ್ಯವನ್ನು ಕಾಪಾಡುವ ಪ್ರಮುಖ ನೈಸರ್ಗಿಕ ವ್ಯವಸ್ಥೆಯಾಗಿವೆ. ಆದ್ದರಿಂದ ಪರಿಸರ ಸಂರಕ್ಷಣೆಯನ್ನು ಅಭಿವೃದ್ಧಿಗೆ ವಿರುದ್ಧವಾದ ವಿಚಾರವಾಗಿ ನೋಡದೆ, ಸುಸ್ಥಿರ ಅಭಿವೃದ್ಧಿಯ ಅವಿಭಾಜ್ಯ ಅಂಗವಾಗಿ ಪರಿಗಣಿಸಬೇಕು ಎಂದರು. ‘ಹಸಿರು ಸಂವಾದ’ ಅಭಿಯಾನವು ಕೇವಲ ತ್ಯಾಜ್ಯ ನಿರ್ವಹಣೆಯ ಕಾರ್ಯಕ್ರಮವಾಗಿರದೆ, ಸಮಾಜದಲ್ಲಿ ಪರಿಸರದ ಬಗ್ಗೆ ಜಾಗೃತಿ, ಹೊಣೆಗಾರಿಕೆ ಮತ್ತು ವರ್ತನಾತ್ಮಕ ಬದಲಾವಣೆಯನ್ನು ತರುವ ಜನಾಂದೋಲನವಾಗಿ ರೂಪುಗೊಳ್ಳಬೇಕು. ಈ ಅಭಿಯಾನದ ನಿಜವಾದ ಯಶಸ್ಸು ಸಾಮಾಜಿಕ ಪರಿವರ್ತನೆಯಲ್ಲಿ ಅಡಗಿದೆ ಎಂದರು.

‘ಹಸಿರು ಸಂವಾದ’ ಅಭಿಯಾನದ ಕುರಿತು ವಿವರಣೆ ನೀಡಿ ಮಾತನಾಡಿದ ಆಳ್ವಾಸ್ ಕಾಲೇಜಿನ ಪ್ರಾಚಾರ್ಯ ಡಾ. ಕುರಿಯನ್, ಸಾಂಪ್ರದಾಯಿಕ ಸ್ವಚ್ಛತಾ ಕಾರ್ಯಾಚರಣೆಗಳನ್ನು ಮೀರಿ, ತ್ಯಾಜ್ಯವು ನದಿಗಳ ಮೂಲಕ ಸಮುದ್ರ ಸೇರಿ ಮೈಕ್ರೋಪ್ಲಾಸ್ಟಿಕ್ ಆಗಿ ಪರಿವರ್ತನೆಯಾಗುವುದನ್ನು ತಡೆಯಲು ಮೂಲ ಹಂತದಲ್ಲೇ ವೈಜ್ಞಾನಿಕ ಹಾಗೂ ಸಮುದಾಯ ಆಧಾರಿತ ವ್ಯವಸ್ಥೆಯನ್ನು ರೂಪಿಸುವುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ. ಜನರ ಪಾಲ್ಗೊಳ್ಳುವಿಕೆ, ಸ್ಥಳೀಯ ಆಡಳಿತದ ಹೊಣೆಗಾರಿಕೆ ಮತ್ತು ವಲಯ ಆರ್ಥಿಕತೆ ಆಧಾರಿತ ತ್ಯಾಜ್ಯ ನಿರ್ವಹಣೆಯ ಮಾದರಿಯನ್ನು ನಿರ್ಮಿಸಲು ಅಭಿಯಾನ ಒತ್ತು ನೀಡಲಿದೆ.

ಈ ಯೋಜನೆಯಡಿ ಪಾವಂಜೆ (ಗುರುಪುರ), ನಂದಿನಿ ಹಾಗೂ ಶಾಂಭವಿ ನದಿಗಳ ಜಲಾನಯನ ಪ್ರದೇಶದ 46 ಗ್ರಾಮಗಳನ್ನು ಆಯ್ಕೆ ಮಾಡಲಾಗಿದೆ. ಈ ನದಿಗಳ ಮೂಲಕ ಸಮುದ್ರಕ್ಕೆ ಸೇರುವ ಪ್ಲಾಸ್ಟಿಕ್ ತ್ಯಾಜ್ಯವನ್ನು ಕಡಿತಗೊಳಿಸಲು ಗ್ರಾಮ ಮಟ್ಟದಲ್ಲಿಯೇ ವೈಜ್ಞಾನಿಕ ತ್ಯಾಜ್ಯ ನಿರ್ವಹಣಾ ವ್ಯವಸ್ಥೆ ಜಾರಿಗೊಳಿಸಲಾಗುತ್ತದೆ.
ಅಭಿಯಾನವನ್ನು ಮೂರು ಹಂತಗಳಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ. ಮೊದಲ ಹಂತವು ಜುಲೈ–ಆಗಸ್ಟ್ 2026ರ ವರೆಗೆ ನಡೆಯಲಿದ್ದು, ಕ್ಷೇತ್ರ ಸಮೀಕ್ಷೆ, ಮಾಹಿತಿ ಸಂಗ್ರಹ, ತ್ಯಾಜ್ಯ ಸಮಸ್ಯೆಗಳ ಮೌಲ್ಯಮಾಪನ ಹಾಗೂ ಜನಜಾಗೃತಿ ಕಾರ್ಯಕ್ರಮಗಳಿಗೆ ಆದ್ಯತೆ ನೀಡಲಾಗಿದೆ. ಗ್ರಾಮ ಪಂಚಾಯಿತಿ ಪ್ರತಿನಿಧಿಗಳು, ಸ್ಥಳೀಯ ಸಂಘಟನೆಗಳು ಮತ್ತು ಸಾರ್ವಜನಿಕರೊಂದಿಗೆ ಸಂವಾದ ನಡೆಸಿ ಪರಿಸರ ಸಂರಕ್ಷಣೆಯಲ್ಲಿ ಸಮುದಾಯದ ಪಾಲುದಾರಿಕೆಯನ್ನು ಬಲಪಡಿಸಲಾಗುತ್ತದೆ ಎಂದರು.

ಶಾಲಾ ಹಾಗೂ ಕಾಲೇಜು ವಿದ್ಯಾರ್ಥಿಗಳನ್ನು ಪರಿಸರ ಸಂರಕ್ಷಣೆಯಲ್ಲಿ ಸಕ್ರಿಯವಾಗಿ ತೊಡಗಿಸಲು ‘ಚೋಟಾ ಕಾಪ್’ ಯೋಜನೆ ಜಾರಿಗೊಳ್ಳಲಿದೆ. ಮಕ್ಕಳಲ್ಲಿ ಪರಿಸರ ಕಾಳಜಿ ಮತ್ತು ಹೊಣೆಗಾರಿಕೆಯನ್ನು ಬೆಳೆಸುವ ಉದ್ದೇಶದಿಂದ ಈ ಕಾರ್ಯಕ್ರಮ ರೂಪಿಸಲಾಗಿದೆ. ಯುವಜನರಲ್ಲಿ ಹೊಸ ತಂತ್ರಜ್ಞಾನ ಹಾಗೂ ನವೀನ ಆಲೋಚನೆಗಳಿಗೆ ಉತ್ತೇಜನ ನೀಡಲು ಐಡಿಯಾಥಾನ್ ಆಯೋಜಿಸಲಾಗುತ್ತಿದ್ದು, ಆಯ್ಕೆಯಾಗುವ ಪರಿಸರ ಸ್ನೇಹಿ ಆವಿಷ್ಕಾರಗಳಿಗೆ ಅಭಿವೃದ್ಧಿ ನಿಧಿಯನ್ನೂ ಒದಗಿಸಲಾಗುತ್ತದೆ.
ಎರಡನೇ ಹಂತವು ಆಗಸ್ಟ್‍ನಿಂದ ನವೆಂಬರ್‍ವರೆಗೆ ನಡೆಯಲಿದ್ದು, ಘನ ತ್ಯಾಜ್ಯ ನಿರ್ವಹಣಾ ನಿಯಮಾವಳಿ–2026 ಅನುಸಾರ ವಿವಿಧ ಕಾರ್ಯಚಟುವಟಿಕೆಗಳನ್ನು ಕೈಗೊಳ್ಳಲಾಗುತ್ತದೆ. ನದಿಗಳ ಮೇಲ್ಮೈ ಹಾಗೂ ನೀರಿನ ಅಡಿಯಲ್ಲಿರುವ ತ್ಯಾಜ್ಯ ತೆರವು, ತ್ಯಾಜ್ಯದ ವೈಜ್ಞಾನಿಕ ಸಂಸ್ಕರಣೆ, ಸಂಗ್ರಹ ಮತ್ತು ಮರುಬಳಕೆ ವ್ಯವಸ್ಥೆ, ಮರುಸಂಸ್ಕರಣೆಗೆ ಅಸಾಧ್ಯವಾದ ತ್ಯಾಜ್ಯದ ಸೂಕ್ತ ವಿಲೇವಾರಿ, ‘ಸ್ವಚ್ಛ ಗ್ರಾಮ’ ಸ್ಪರ್ಧೆ, ಪರಿಸರ ಜಾಗೃತಿ ಮೂಡಿಸುವ ರೀಲ್ಸ್ ಸ್ಪರ್ಧೆ, ಫನ್ನಿ ರಿಪೋರ್ಟರ್ಸ್, ವಿದ್ಯಾರ್ಥಿ ಚಟುವಟಿಕೆಗಳು ಹಾಗೂ ವಿವಿಧ ಜನಜಾಗೃತಿ ಕಾರ್ಯಕ್ರಮಗಳು ನಡೆಯಲಿವೆ.

ಮೂರನೇ ಹಂತವಾಗಿ ಡಿಸೆಂಬರ್ 2026ರಲ್ಲಿ ಎರಡು ದಿನಗಳ ರಾಷ್ಟ್ರೀಯ ಸಮ್ಮೇಳನ ಆಯೋಜಿಸಲಾಗುತ್ತದೆ. ಭಾಗವಹಿಸುವ ಗ್ರಾಮ ಪಂಚಾಯಿತಿಗಳು ತಮ್ಮ ತ್ಯಾಜ್ಯ ನಿರ್ವಹಣಾ ಅನುಭವ ಮತ್ತು ಸಾಧನೆಗಳನ್ನು ಪ್ರಸ್ತುತಪಡಿಸಲಿದ್ದು, ದೇಶದ ಖ್ಯಾತ ಪರಿಸರ ವಿಜ್ಞಾನಿಗಳು, ತಜ್ಞರು ಮತ್ತು ಪರಿಸರ ಹೋರಾಟಗಾರರು ವೈಜ್ಞಾನಿಕ ಅಧಿವೇಶನಗಳಲ್ಲಿ ಭಾಗವಹಿಸಲಿದ್ದಾರೆ. ಸ್ಥಳೀಯ ಮಟ್ಟದ ಯಶಸ್ವಿ ಮಾದರಿಗಳನ್ನು ರಾಷ್ಟ್ರೀಯ ಮಟ್ಟದ ಉತ್ತಮ ಪದ್ಧತಿಗಳೊಂದಿಗೆ ಸಂಪರ್ಕಿಸುವ ವೇದಿಕೆಯಾಗಲಿದೆ.

ಸಮ್ಮೇಳನದ ಸಮಾರೋಪದಲ್ಲಿ ಪ್ಲಾಸ್ಟಿಕ್ ತ್ಯಾಜ್ಯವನ್ನು ನದಿಗಳಿಗೆ ಸೇರುವ ಪ್ರಮಾಣವನ್ನು ಅತ್ಯಂತ ಪರಿಣಾಮಕಾರಿಯಾಗಿ ಕಡಿಮೆಗೊಳಿಸಿದ ಗ್ರಾಮಕ್ಕೆ ಪ್ರತಿಷ್ಠಿತ ‘ಸ್ವಚ್ಛ ಗ್ರಾಮ ಪ್ರಶಸ್ತಿ’ ಪ್ರದಾನ ಮಾಡಲಾಗುವುದು. ಉತ್ತಮ ಸಾಧನೆ ತೋರಿದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಪರಿಸರ ಪ್ರಶಸ್ತಿಗಳಿಗೆ ಶಿಫಾರಸು ಮಾಡಲಾಗುವುದು. ಪರಿಸರ ಸಂರಕ್ಷಣೆಯಲ್ಲಿ ವಿಶೇಷ ಸೇವೆ ಸಲ್ಲಿಸಿದ ‘ವೇಸ್ಟ್ ವಾರಿಯರ್ಸ್’, ವಿದ್ಯಾರ್ಥಿಗಳು ಹಾಗೂ ಸ್ಪರ್ಧೆಗಳ ವಿಜೇತರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಗುವುದು ಎಂದರು.
ಕರಾವಳಿ ಪರಿಸರ ಸಂರಕ್ಷಣೆಯಲ್ಲಿ ಸಮುದಾಯ, ಶಿಕ್ಷಣ ಸಂಸ್ಥೆಗಳು, ಸ್ಥಳೀಯ ಆಡಳಿತ ಮತ್ತು ತಜ್ಞರನ್ನು ಒಂದೇ ವೇದಿಕೆಗೆ ತರುವ ಈ ‘ಹಸಿರು ಸಂವಾದ’ ಅಭಿಯಾನವು, ಕರಾವಳಿ ಕರ್ನಾಟಕದಲ್ಲಿ ವೈಜ್ಞಾನಿಕ ಹಾಗೂ ಶಾಶ್ವತ ತ್ಯಾಜ್ಯ ನಿರ್ವಹಣೆಗೆ ಹೊಸ ಮಾದರಿಯಾಗಿ ರೂಪುಗೊಳ್ಳುವ ನಿರೀಕ್ಷೆ ವ್ಯಕ್ತವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಪರ್ಯಾವರಣ ಸಂರಕ್ಷಣಾ ತಂಡದ ಜಯರಾಮ್ ಬೊಳ್ಳಾಜೆ, ಹೊಸದಿಂಗತ ಪತ್ರಿಕೆಯ ಸಿಇಒ ಪಿ.ಎಸ್ ಪ್ರಕಾಶ್, ಪರಿಸರ ವಿಜ್ಞಾನಿ ಡಾ. ಬಿನಿಷಾ ಪಿ., ಘನ ತ್ಯಾಜ್ಯ ನಿರ್ವಹಣಾ ತಜ್ಞ ಹಾಗೂ ‘ಫ್ರೆಂಡ್ಸ್ ಆಫ್ ಲೇಕ್ಸ್’ ಸಂಸ್ಥೆಯ ಸಂಸ್ಥಾಪಕ ರಾಮಪ್ರಸಾದ್, ಸ್ವಚ್ಛ ಕಾರ್ಕಳ ಬ್ರಿಗೇಡ್‍ನ ಅರ್ಜುನ ಕುಮಾರ್ ಇದ್ದರು.
ಹಸಿರು ಸಂವಾದ ಅಭಿಯಾನದ ಮಂಜುನಾಥ್ ಸ್ವಾಗತಿಸಿ, ಆಳ್ವಾಸ್ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಪ್ರಸಾದ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *