ಮೂಡುಬಿದಿರೆ: ಆಳ್ವಾಸ್ ಪದವಿ ಸ್ವಾಯತ್ತಾ ಕಾಲೇಜಿನ 22 ಅಂತರ ಫೋರಂಗಳ ಸ್ಪರ್ಧೆ ‘ಇನಾಮು-2026’ರ ಉದ್ಘಾಟನಾ ಕಾರ್ಯಕ್ರಮ ಶುಕ್ರವಾರ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಜರುಗಿತು.



ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ ಆಳ್ವ, ವಿದ್ಯಾರ್ಥಿಗಳ ಸಮಗ್ರ ವ್ಯಕ್ತಿತ್ವ ವಿಕಸನದಲ್ಲಿ ಕಾಲೇಜು ಫಾರಂಗಳು ಅತ್ಯಂತ ಮಹತ್ವದ ಪಾತ್ರ ವಹಿಸುತ್ತವೆ. ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳನ್ನು ಸಕ್ರಿಯವಾಗಿ ತೊಡಗಿಸುವುದು ಈ ಫಾರಂಗಳ ಮುಖ್ಯ ಉದ್ದೇಶ. ಇವು ವಿದ್ಯಾರ್ಥಿಗಳಲ್ಲಿನ ನಾಯಕತ್ವ, ಸಂವಹನ ಕೌಶಲ್ಯ, ಸಂಘಟನಾ ಸಾಮಥ್ರ್ಯ ಮತ್ತು ಸಾಮಾಜಿಕ ಜವಾಬ್ದಾರಿಯನ್ನು ಬೆಳೆಸುವ ವೇದಿಕೆಗಳಾಗಿವೆ. ಈ ಹಿನ್ನೆಲೆಯಲ್ಲಿ ಆಳ್ವಾಸ್ ಸ್ವಾಯತ್ತಾ ಕಾಲೇಜು 22 ವಿವಿಧ ಫೋರಂಗಳನ್ನು ಹೊಂದಿರುವುದು ಹೆಮ್ಮೆಯ ವಿಷಯ ಎಂದರು.
ಈ ಉದ್ಘಾಟನಾ ಕಾರ್ಯಕ್ರಮ ಕೇವಲ ಕಾರ್ಯಕ್ರಮಕ್ಕೆ ಸೀಮಿತವಾಗದೆ, ವಿದ್ಯಾರ್ಥಿಗಳಲ್ಲಿ ನಾಯಕತ್ವವನ್ನು ಸ್ವೀಕರಿಸುವ, ಸಮಾಜಮುಖಿ ಚಿಂತನೆ ಬೆಳೆಸುವ ಮತ್ತು ಸಕ್ರಿಯ ಭಾಗವಹಿಸುವಿಕೆಗೆ ಪ್ರೇರಣೆಯಾಗಲಿ. ಸವಾಲುಗಳನ್ನು ಸ್ವೀಕರಿಸುವ ಮಾನಸಿಕತೆ ಬೆಳೆಸಿಕೊಳ್ಳಿ. ಸೋಲು, ಟೀಕೆ, ವಿಫಲತೆ ಇವೆಲ್ಲವೂ ಜೀವನದ ಭಾಗವೇ. ಅವುಗಳಿಂದ ಕುಗ್ಗದೆ ಎದ್ದು ನಿಲ್ಲುವ ಶಕ್ತಿಯೇ ನಿಜವಾದ ಜಯದ ಗುಟ್ಟು. ಜಾತಿ, ಧರ್ಮ, ಭಾಷೆ, ಪ್ರದೇಶದ ಹೆಸರಿನಲ್ಲಿ ಜನರನ್ನು ಬೇರ್ಪಡಿಸುವವರ ಬಲೆಗೆ ಎಂದೂ ಬೀಳಬಾರದು. ಏಕತೆ, ಸಹಬಾಳ್ವೆ ಮತ್ತು ಪರಸ್ಪರ ಗೌರವವೇ ನಮ್ಮ ನಿಜವಾದ ಶಕ್ತಿ. ಹಳೆಯ ಮಾರ್ಗದಲ್ಲಿ ನಡೆಯುವುದರಿಂದ ಯಶಸ್ಸು ಸೀಮಿತವಾಗಿರುತ್ತದೆ. ಹೊಸತನ ಮತ್ತು ಸೃಜನಶೀಲತೆ ನಮ್ಮ ಬೆಳವಣಿಗೆಯ ವೇಗವನ್ನು ಹೆಚ್ಚಿಸುತ್ತವೆ ಎಂದರು.
ಫೆಬ್ರವರಿ 2 ರಿಂದ ಮಾರ್ಚ 20ರ ತನಕ ಮಾಡೆಲ್ ಪೇಕಿಂಗ್, ಪೋಸ್ಟರ್ ಮೇಕಿಂಗ್, ಕಟ್ ಔಟ್ ಅನಿಮೇಶನ್, ಸ್ಪೆಲ್ಮೇನಿಯಾ, ಬಾಟಲ್ ಪೈಂಟಿಂಗ್, ಮೈಂಡ್ ಮಾರ್ಕೆಟಿಂಗ್, ನವರಸ, ಸ್ಕಿಟ್, ಕೇಸ್ ಕ್ವೆಸ್ಟ್, ಮೇಲೋಡಿ ವಿಥ್ ಎ ಮೆಸೇಝ್, ಕೇರ್ ಫಾರ್ ವಿಂಗ್ಸ, ಡ್ಯಾನ್ಸ್ ವೆರೈಟಿ, ಫೋಕ್ ಗ್ರೂಪ್ ಸಾಂಗ್, ಕ್ಲೇ ಮಾಡೆಲಿಂಗ್ , ಸಿಕ್ರೆಟ್ ಫ್ಲಿಟಿಕ್ಸ್, ಸ್ಕಲ್ಪ್ಚರ್ ಆರ್ಟ್, ಮೈಮ್ ಶೋ, ನಾಟ್ಯ ಸಂಗಮ, ಬಾಷಣ ಸ್ಪರ್ಧೆ, ಟಗ್ ಆಫ್ ವಾರ್, ಸೆಟ್ಅಪ್ ಪ್ಲಾನ್ ನಂತಹ ಸ್ಪರ್ಧೆಗಳು ನಡೆಯಲಿವೆ.
ಕಾರ್ಯಕ್ರಮದಲ್ಲಿ ಕಾಲೇಜಿನ ಆಡಳಿತಾಧಿಕಾರಿ ಬಾಲಕೃಷ್ಣ ಶೆಟ್ಟಿ, ಫೋರಂಗಳ ಮುಖ್ಯ ಸಂಯೋಜಕ ಡಾ ಯೋಗೀಶ್ ಕೈರೋಡಿ, ಇನಾಮು ಕಾರ್ಯಕ್ರಮದ ಸಂಯೋಜಕ ಮನು ಡಿ ಎಲ್, ಕೋರ್ ಕಮಿಟಿಯ ವಿದ್ಯಾರ್ಥಿ ಸಂಯೋಜಕ ನಿರ್ಮಲ್ ಪೈ ಇದ್ದರು.
ಪ್ರಥ್ವಿತಾ ಕಾರ್ಯಕ್ರಮ ನಿರೂಪಿಸಿ, ಆಶ್ವಿಜಾ ಪ್ರಾರ್ಥಿಸಿ, ರಶ್ಮಿ ಸ್ವಾಗತಿಸಿ, ಶ್ರಾವ್ಯ ಶೆಟ್ಟಿ ವಂದಿಸಿದರು.
