ಕಾರ್ಕಳ: ಇತ್ತೀಚೆಗೆ ಸುರತ್ಕಲ್ ನ ಎನ್.ಐ.ಟಿ.ಕೆ ಯಲ್ಲಿ ನಡೆದ ನದಿ ಆರೋಗ್ಯ ಮೌಲ್ಯಮಾಪನ ಮತ್ತು ಸಂರಕ್ಷಣೆ ಕುರಿತ ವಿಚಾರ ಸಂಕಿರಣದಲ್ಲಿ ನಿಟ್ಟೆಯ ಎನ್ಎಂಎಎಂ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಸಿವಿಲ್ ಎಂಜಿನಿಯರಿಂಗ್ ವಿಭಾಗದ ಸಹಪ್ರಾಧ್ಯಾಪಕ ಡಾ. ಭೋಜರಾಜ್ ಬಿ.ಇ. ಅವರು ರಿಮೋಟ್ ಸೆನ್ಸಿಂಗ್ ಮತ್ತು ಜಿಐಎಸ್ ಎಂಬ ವಿಷಯದ ಅಡಿಯಲ್ಲಿ “ಗೂಗಲ್ ಅರ್ಥ್ ಎಂಜಿನ್ ಬಳಸಿ ಶಾಂಭವಿ ನದಿ ಜಲಾನಯನ ಪ್ರದೇಶದಲ್ಲಿ ಪ್ರವಾಹ ಅಪಾಯದ ಮುನ್ಸೂಚನೆಗಾಗಿ ಬಹು-ಮಾನದಂಡ ವಿಶ್ಲೇಷಣೆ” ಎಂಬ ಪ್ರಬಂಧವನ್ನು ಪ್ರಸ್ತುತಿಪಡಿಸಿ ಪ್ರಥಮ ಸ್ಥಾನ ಪಡೆದಿದ್ದಾರೆ.

ಈ ಸಂಶೋಧನೆಯನ್ನು ಸುಮನ್ ಮತ್ತು ಹರೀಶ್ ಕುಮಾರ್ ಎಸ್ ಸಹ-ಲೇಖಕರ ಸಹಕಾರದೊಂದಿಗೆ ನಡೆಸಿ, ಪ್ರವಾಹ ಅಪಾಯದ ಮೌಲ್ಯಮಾಪನ ಮತ್ತು ಸುಸ್ಥಿರ ನದಿ ಜಲಾನಯನ ನಿರ್ವಹಣೆಗಾಗಿ ಸುಧಾರಿತ ಜಿಯೋಸ್ಪೇಷಿಯಲ್ ಸಾಧನಗಳ ಅನ್ವಯವನ್ನು ಅವರು ಈ ಸಂದರ್ಭದಲ್ಲಿ ಪ್ರದರ್ಶಿಸಿದರು. ಜಲಶಕ್ತಿ ಸಚಿವಾಲಯದ ಜಲಸಂಪನ್ಮೂಲ, ನದಿ ಅಭಿವೃದ್ಧಿ ಮತ್ತು ಗಂಗಾ ಪುನರುಜ್ಜೀವನ ಇಲಾಖೆಯ ಆಶ್ರಯದಲ್ಲಿ, ಕೃಷ್ಣಾ ನದಿ ಜಲಾನಯನ ನಿರ್ವಹಣೆ ಮತ್ತು ಅಧ್ಯಯನ ಕೇಂದ್ರದ ಸಹಯೋಗದಲ್ಲಿ ರಾಷ್ಟ್ರೀಯ ನದಿ ಸಂರಕ್ಷಣಾ ನಿರ್ದೇಶನಾಲಯ ಮತ್ತು ರಾಷ್ಟ್ರೀಯ ಶುದ್ಧ ಗಂಗಾ ಮಿಷನ್ (ಎನ್ಎಂಸಿಜಿ) ಮೂಲಕ ಎನ್.ಐ.ಟಿ.ಕೆ ಸುರತ್ಕಲ್ ನ ಸಿವಿಲ್ ಎಂಜಿನಿಯರಿಂಗ್ ವಿಭಾಗವು ಈ ವಿಚಾರ ಸಂಕಿರಣವನ್ನು ಆಯೋಜಿಸಿತ್ತು. ಈ ಸಂಶೋಧನೆಯು ರಿಮೋಟ್ ಸೆನ್ಸಿಂಗ್, ಜಿಐಎಸ್ ಮತ್ತು ಜಲ ಸಂಪನ್ಮೂಲ ಎಂಜಿನಿಯರಿಂಗ್ ಕ್ಷೇತ್ರಗಳಿಗೆ ಮಹತ್ವದ ಕೊಡುಗೆಯನ್ನು ನೀಡಲಿದೆ ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.
