ನಿಟ್ಟೆ: ‘ದೇಶದ ಅಭಿವೃದ್ಧಿಯಲ್ಲಿ ನಮ್ಮನ್ನು ಹೇಗೆ ತೊಡಗಿಸಿಕೊಳ್ಳಬೇಕು ಎಂಬುದನ್ನು ದೇಶದ ಪ್ರತಿಯೊಬ್ಬ ಪ್ರಜೆಯೂ ಚಿಂತಿಸಬೇಕು. ಸಣ್ಣಪುಟ್ಟ ಸಮಸ್ಯೆಗಳನ್ನು ಮೆಟ್ಟಿನಿಂತು ಸರ್ವಕ್ಷೇತ್ರಗಳಲ್ಲೂ ಸಾಧನೆಯ ಪಥವನ್ನು ನಾವು ಕಾಣಬೇಕು’ ಎಂದು ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಅಂತಾರಾಷ್ಟ್ರೀಯ ಸಹಯೋಗ ವಿಭಾಗದ ನಿರ್ದೇಶಕ ಪ್ರೊ. ಹರಿಕೃಷ್ಣ ಭಟ್ ಅಭಿಪ್ರಾಯಪಟ್ಟರು.

ನಿಟ್ಟೆ ಸಮೂಹ ವಿದ್ಯಾಸಂಸ್ಥೆಗಳು ಜಂಟಿಯಾಗಿ ಜ. 26ರಂದು ನಿಟ್ಟೆಯ ಬಿಸಿ ಆಳ್ವ ಕ್ರೀಡಾ ಸಂಕೀರ್ಣದಲ್ಲಿ ಆಯೋಜಿಸಿದ್ದ 77ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅವರು ರಾಷ್ಟ್ರಧ್ವಜಾರೋಹಣವನ್ನು ನೆರವೇರಿಸಿ ಮಾತನಾಡಿದರು. ‘ದೇಶದ ಪ್ರಜ್ಞಾವಂತ ಪ್ರತಿಯೋರ್ವ ಪ್ರಜೆಯೂ ತಲೆಯೆತ್ತಿ ಗೌರವಿಸುವಂತಹ ಶ್ರೇಷ್ಠತೆ ರಾಷ್ಟ್ರ ಧ್ವಜಕ್ಕೆ ಇದೆ. ಪ್ರಸ್ತುತ ದಿನದಲ್ಲಿ ವಿವಿಧ ಕ್ಷೇತ್ರಗಳ ಬೆಳವಣಿಗೆಯಲ್ಲಿ ಎಐ ಯಂತಹ ತಂತ್ರಜ್ಞಾನದ ಪಾತ್ರ ಗಮನಾರ್ಹ. ಇಂತಹ ತಂತ್ರಜ್ಞಾನದ ಬೆಳವಣಿಗೆಯಲ್ಲಿ ನಮ್ಮ ನಾಗರೀಕರ ಪಾತ್ರವು ಹೆಚ್ಚಾಗಬೇಕು’ ಎಂದರು.
ಕಾರ್ಯಕ್ರಮದಲ್ಲಿ ಕ್ಯಾಂಪಸ್ ನ ಮೈಂಟೆನೆನ್ಸ್ ಮತ್ತು ಅಭಿವೃದ್ದಿ ವಿಭಾಗದ ನಿರ್ದೇಶಕ ಯೋಗೀಶ್ ಹೆಗ್ಡೆ, ನಿಟ್ಟೆ ಸಮೂಹ ವಿದ್ಯಾಸಂಸ್ಥೆಗಳ ಪ್ರಾಂಶುಪಾಲರು, ಶಿಕ್ಷಕವೃಂದ, ಶಿಕ್ಷಕೇತರ ವರ್ಗದವರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು. ನಿಟ್ಟೆ ಎನ್.ಎಸ್.ಎ.ಎಂ ಶಾಲೆಯ ಆರ್ಮಿ ಎನ್.ಸಿ.ಸಿ ಘಟಕ, ತಾಂತ್ರಿಕ ಕಾಲೇಜಿನ ಎನ್.ಸಿ.ಸಿ ನೇವಲ್ ಘಟಕ ಹಾಗೂ ಕಾಲೇಜು ಕ್ಯಾಂಪಸ್ ನ ಭಗ್ರತಾ ಸಿಬ್ಬಂದಿಗಳ ವತಿಯಿಂದ ಆಕರ್ಷಕ ಪಥಸಂಚಲನ ಹಮ್ಮಿಕೊಳ್ಳಲಾಗಿತ್ತು.
ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ನಿರಂಜನ್ ಎನ್. ಚಿಪ್ಳೂಣ್ಕರ್ ಸ್ವಾಗತಿಸಿ ಅತಿಥಿಗಳನ್ನು ಪರಿಚಯಿಸಿದರು. ರಸಾಯನಶಾಸ್ತ್ರ ವಿಭಾಗ ಸಹಪ್ರಾಧ್ಯಾಪಕ ಹಾಗೂ ಎನ್.ಸಿ.ಸಿ ನೇವಲ್ ಘಟಕದ ಸಂಯೋಜಕ ಡಾ. ಶಿವಪ್ರಸಾದ್ ಶೆಟ್ಟಿ ವಂದಿಸಿದರು. ನಿಟ್ಟೆ ಶಾಲೆಯ ಎನ್.ಸಿ.ಸಿ ಸಂಯೋಜಕಿ ಹಾಗೂ ದೈಹಿಕ ಶಿಕ್ಷಣ ವಿಭಾಗದ ಉಷಾ ಕಾರ್ಯಕ್ರಮ ನಿರೂಪಿಸಿದರು.
