ಚಿಕ್ಕ ವಯಸ್ಸಿನಲ್ಲೇ ಮಕ್ಕಳನ್ನು ಹಾಸ್ಟೆಲ್‌ಗೆ ಕಳುಹಿಸುತ್ತಿದ್ದೀರಾ? ಹಾಗಾದರೆ ಈ ಲೇಖನ ಒಮ್ಮೆ ಓದಿ…

ಲೇಖನ: ನವೀನ್ ಹಬೀಬ್
(ಶಿಕ್ಷಕರು, ಬರಹಗಾರರು ಹಾಗೂ ಜೀವನ ಕೌಶಲ್ಯ ಮಾರ್ಗದರ್ಶಕರು)

ನೆಚ್ಚಿನ ಓದುಗರೇ, ಇಂದಿನ ಪ್ರಸ್ತುತ ಸಮಾಜದಲ್ಲಿ ಒಂದು ಹೊಸ ಬದಲಾವಣೆ ಕಂಡುಬರುತ್ತಿದೆ. ಅದೇನೆಂದರೆ ಇತ್ತೀಚಿನ ಮಕ್ಕಳಿಗೆ ತಂದೆ-ತಾಯಿ ಹಾಗೂ ಕುಟುಂಬದ ಮೇಲಿನ ಆಸಕ್ತಿ ಕಡಿಮೆಯಾಗಿ ಕೊನೆಗೊಳ್ಳುವ ಹಂತಕ್ಕೆ ಬಂದು ತಲುಪುತ್ತಿದೆ. ಮಕ್ಕಳು ತಂದೆ-ತಾಯಿಯಿಂದ ಹಣ ಹಾಗೂ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಬಯಸುತ್ತಾರೆ, ಆದರೆ ಅವರ ವೈಯಕ್ತಿಕ ಜೀವನದಲ್ಲಿ ಪಾಲಕರ ಹಸ್ತಕ್ಷೇಪ ಬಯಸುತ್ತಿಲ್ಲ ಮತ್ತು ಸಹಿಸುತ್ತಿಲ್ಲ. ಇನ್ನು ಕೆಲವು ಮಕ್ಕಳು ತಮ್ಮ ಪಾಲಕರ ಯಾವದೇ ಮಾತುಗಳನ್ನ ಅನುಸರಿಸುತ್ತಿಲ್ಲ. ಮಕ್ಕಳ ಈ ವರ್ತನೆಗಳಿಂದ ಪಾಲಕರು ಬೇಸತ್ತು ಶಾಲಾ-ಕಾಲೇಜಿನ ಸಲಹೆಗಾರರ ಬಳಿ ಹೋಗಿ ತಮ್ಮ ನೋವನ್ನು, ಪರಿಸ್ಥಿತಿಯನ್ನು ಹೇಳಿ ಚಡಪಡಿಸುತ್ತಿದ್ದಾರೆ.

ಅಷ್ಟಕ್ಕೂ ಈ ಸಮಸ್ಯೆಗೆ ಕಾರಣವೇನು..?

ತುಂಬಾ ಜನ ಹೇಳೋದನ್ನ ನಾನು ಕೇಳಿದ್ದೇನೆ—ಇಂದಿನ ಮಕ್ಕಳಿಗೆ ತಾಳ್ಮೆ, ಸಮಾಧಾನ, ಸಂಯಮ ಮತ್ತು ತಂದೆ-ತಾಯಿ ಮೇಲೆ ಯಾವದೇ ವಿಶೇಷವಾದ ಹೊಂದಾಣಿಕೆಯಾಗಲಿ ಆಸಕ್ತಿಯಾಗಲಿ ಉಳಿದಿಲ್ಲವೆಂದು. ನೀವು ಕೇಳಿರಬಹುದು. ಆದರೆ ನನ್ನ ಪ್ರಕಾರ ಈ ಸಮಸ್ಯೆಗೆ ಮುಖ್ಯತಃ ಮೂಲತಃ ಪ್ರಮುಖ ಕಾರಣ ಪಾಲಕರು ಅಂದ್ರೆ ತಂದೆ-ತಾಯಿ. ಹೌದು ಓದುಗರೇ, ಇದು ನಿಜ. ಇಂದಿನ ಕೆಲ ತಂದೆ-ತಾಯಿ ಮಕ್ಕಳ ಪ್ರತಿ ಅವರ ಸರಿಯಾದ ಜವಾಬ್ದಾರಿಯನ್ನು ಹೊರುವಲ್ಲಿ ವಿಫಲರಾಗಿರುವುದೇ ಇದಕ್ಕೆ ಕಾರಣ.

ತಂದೆ-ತಾಯಿ ಯೋಚನೆ ಮಾಡ್ತಾರೆ—ಮಕ್ಕಳ ಒಳ್ಳೆಯ ಭವಿಷ್ಯಕ್ಕಾಗಿ ನಾವು ಹಣ ಸಂಪಾದನೆ ಮಾಡಬೇಕು, ಅವರಿಗೆ ಒಳ್ಳೇ ಸ್ಕೂಲ್ ಕಾಲೇಜಿನಲ್ಲಿ ಅಡ್ಮಿಶನ್ ಮಾಡಿಸಬೇಕು, ಅವರ ಎಲ್ಲಾ ಬೇಕು-ಬೇಡಿಕೆಗಳನ್ನ, ಇಚ್ಛೆಗಳನ್ನ ಸಂಪಾದನೆ ಮಾಡಿದ ಹಣದಿಂದ ಪೂರ್ತಿ ಮಾಡಿದರೆ ನಮ್ಮ ಜವಾಬ್ದಾರಿ ಮುಂದಾಳತ್ವ ಮುಗಿಯಿತೆಂದು ತಿಳಿಯುತ್ತಾರೆ. ಆದರೆ ಅದು ಹಾಗಲ್ಲ. ನಿಮ್ಮ ಈ ಯೋಚನೆಯಿಂದಾನೆ ನಿಮ್ಮ ಮಕ್ಕಳು ನಿಮ್ಮಿಂದ ಇವತ್ತು ದೂರಾಗುತ್ತಾ ಇದ್ದಾರೆ. ನಿಮ್ಮ ಈ ಯೋಚನೆಯಿಂದಾನೆ ಅವರ ಭಾವನೆಗಳು ಪ್ರತಿದಿನ ನಿಮ್ಮ ಪ್ರತಿ ಕಡಿಮೆ ಆಗ್ತಾ ಅವರು ಒಂದು ಯಂತ್ರದ ರೀತಿಯಲ್ಲಿ ಬದುಕುತ್ತಿದ್ದಾರೆ. ಹಾಗೂ ಅವರಿಗೆ ಅವರ ಸ್ನೇಹಿತರ ಮೇಲೆ ಇರುವಷ್ಟು ಪ್ರೀತಿ, ಆಸಕ್ತಿ, ಬೆರೆಯುವಿಕೆ ತಮ್ಮ ತಂದೆ-ತಾಯಿ, ಕುಟುಂಬದ ಮೇಲೆ ಇಲ್ಲಾ.

ನಾನು ಕೆಲ ತಿಂಗಳ ಹಿಂದೆ ಒಂದು ಪ್ರತಿಷ್ಠಿತ ಸ್ಕೂಲ್‍ಗೆ ಶಿಕ್ಷಕ ಹುದ್ದೆಯ ಸಂದರ್ಶನಕ್ಕಾಗಿ ಹೋಗಿದ್ದೆ. ಅಲ್ಲಿಯ ಪ್ರಾಚಾರ್ಯರು ತರಗತಿಗೆ ಹೋಗಿದ್ದ ಕಾರಣ ನನಗೆ ಅಲ್ಲಿಯ ಸಿಬ್ಬಂದಿ ಅವರ ಕಚೇರಿಯಲ್ಲಿ ಕೂರಲು ಹೇಳಿದರು. ಆಗ ಆ ಸ್ಕೂಲ್‍ನಲ್ಲಿ ಮಕ್ಕಳ ದಾಖಲಾತಿ (ಅಡ್ಮಿಶನ್) ನಡೆಯುತ್ತಾ ಇತ್ತು. ಹೀಗಿರುವಾಗ ನಾನು ಅಲ್ಲಿ ಇದ್ದ ಸಂದರ್ಭದಲ್ಲಿ ಒಬ್ಬ ಪಾಲಕರು ತಮ್ಮ ಪುಟ್ಟ ಮಗಳನ್ನು ಆ ಸ್ಕೂಲ್‍ನಲ್ಲಿ ಎಲ್.ಕೆ.ಜಿ.ಗೆ ದಾಖಲಾತಿ ಮಾಡಿಸಲು ಕರೆದುಕೊಂಡು ಬಂದಿದ್ದರು.

ಅವರು ಬಂದು ಕೂತು ದಾಖಲಾತಿಗೆ ಕುಳಿತ ಮೇಡಂ ಅವರಿಗೆ ಹೇಳಿದರು: “ಮೇಡಂ, ಇವಳು ನಮ್ಮ ಮಗಳು, ನಾವು ಇವಳಿಗೆ ಇಲ್ಲೇ ಎಲ್.ಕೆ.ಜಿ.ಗೆ ಅಡ್ಮಿಶನ್ ಮಾಡಿಸಲು ಬಂದಿದ್ದೇವೆ.”
ಅದಕ್ಕೆ ಮೇಡಂ: “ಹೌದಾ ಸರ್, ಆಯ್ತು, ನಿಮ್ಮ ಮಗಳ ಡಾಕ್ಯುಮೆಂಟ್ಸ್ ಕೊಡಿ” ಅಂತ ಕೇಳಿದ್ರು.
ಅದಕ್ಕೆ ಅವರು: “ಮೇಡಂ, ಡಾಕ್ಯುಮೆಂಟ್ಸ್ ಕೊಡ್ತೀವಿ, ಆದ್ರೇ ಅದಕ್ಕೂ ಮೊದಲು ಇನ್ನೊಂದು ವಿಚಾರ ನಿಮಗೆ ಕೇಳ್ಬೇಕು” ಅಂದ್ರು.
ಅದಕ್ಕೆ ಮೇಡಂ: “ಹಾ, ಹೇಳಿ” ಅಂದ್ರು.
ಆಗ ಆ ದಂಪತಿಗಳು ಹೇಳಿದ್ರು: “ಮೇಡಂ, ನಮ್ಮ ಮಗಳಿಗೆ ಇಲ್ಲೇ ಹಾಸ್ಟೆಲ್‍ನಲ್ಲೇ ಬಿಡ್ತೀವಿ ಅಂದ್ರು.”
ಅದಕ್ಕೆ ಮೇಡಂ: “ಅಲ್ಲರೀ, ಅದು ಇನ್ನು ಪುಟ್ಟ ಮಗು, ಅದನ್ನ ಹಾಸ್ಟೆಲ್‍ಗೇ ಬಿಡ್ತೀರಾ? ಅದು ನಿಮ್ಮಿಂದ ಸಾಧ್ಯನಾ?” ಅಂತ ಕೇಳಿದ್ರು.
ಅದಕ್ಕೆ ಅವರಿಂದ ಬಂದ ಉತ್ತರ: “ಹಾ ಮೇಡಂ, ಬಿಡ್ತೀವಿ. ನಿಮ್ಮ ಸ್ಕೂಲ್‍ನಲ್ಲೇ ನಮ್ಮ ಮಗಳು ಇದ್ದಾಳೆ, ಅವಳು ಈ ವರ್ಷ 3ನೇ ಕ್ಲಾಸ್. ಅವಳು ಇವಳನ್ನ ನೋಡ್ಕೋತಾಳೆ” ಅಂತ ಹೇಳಿದ್ರು!

ಅವರ ಆ ಮಾತು ಕೇಳಿ ಆ ಮೇಡಂ ಮತ್ತು ನಾನು ಶಾಕ್ ಆದ್ವಿ; ಏನಪ್ಪಾ ಇದು ಅಂತ. ಅವರ ಆ ಮಾತು ಕೇಳಿ ನನಗೆ ತುಂಬಾ ಕೋಪ ಬಂತು, ಮೇಡಂಗೂ ಬಂತು. ಅದಕ್ಕೆ ಆ ಮೇಡಂ ಅವರಿಗೆ ಹೇಳಿದ್ರು: “ನೋಡಿ ಸರ್, ಈ ಮಗುವನ್ನೇ ನಿಮಗೆ ನೋಡಿಕೊಳ್ಳೋಕೆ ಆಗುತ್ತಿಲ್ಲ, ಇಲ್ಲಿ ಬಂದು ಹಾಸ್ಟೆಲ್‍ಗೆ ಹಾಕ್ತೀವಿ ಅಂತಿದೀರಾ! ಇನ್ನು ನಿಮ್ಮ ಮಗಳು ಈಗ 3ನೇ ಕ್ಲಾಸ್, ಅವಳು ಚಿಕ್ಕವಳು, ಅವಳು ಹೇಗೆ ನೋಡ್ಕೋಬೇಕು? ನೀವು ಹೇಗೆ ಯೋಚನೆ ಮಾಡ್ತೀರಾ? ಇಷ್ಟು ಚಿಕ್ಕ ಮಗುನಾ ಇಲ್ಲಿ ಹಾಸ್ಟೆಲ್‍ನಲ್ಲಿ ಇಡೋಕೆ ಆಗಲ್ಲ” ಅಂತ ಹೇಳಿ ಅವರನ್ನ ಕಳುಹಿಸಿದರು.

ನೋಡಿ, ಇನ್ನು ಚಿಕ್ಕದಾಗಿ ಇರೋ ಮಗುನಾ, ಪ್ರಪಂಚದ ಸರಿಯಾದ ಜ್ಞಾನ ಇಲ್ಲದ ಮಗುನಾ, ತಂದೆ-ತಾಯಿಯ ಬೆಚ್ಚನೆಯ ಅಪ್ಪುಗೆ, ಪ್ರೀತಿಯನ್ನ ಬಯಸೋ ಮಗುನಾ ಹಾಸ್ಟೆಲ್‍ನಲ್ಲಿ ಬಿಡ್ತಿವಿ ಅಂತ ಬಂದಿದಾರಲ್ಲ, ಇವರಿಗೆ ಏನು ಹೇಳ್ಬೇಕು?

ಹೇಳಿ ಪಾಲಕರೇ, ನೀವು ಈ ರೀತಿ ಪುಟ್ಟ ಮಕ್ಕಳನ್ನ ಪೂರ್ತಿಯಾಗಿ ಬೋರ್ಡಿಂಗ್ ಸ್ಕೂಲ್‍ನಲ್ಲಿ, ಹಾಸ್ಟೆಲ್‍ನಲ್ಲಿ ಇಟ್ಟು ಶಿಕ್ಷಣ ಕೊಡಿಸುತ್ತಾ, ನಿಮ್ಮಿಂದ, ನಿಮ್ಮ ಕುಟುಂಬದಿಂದ ದೂರ ಇಟ್ಟರೆ, ಅವರಿಗೆ ಹೇಗೆ ನಿಮ್ಮ ಮೇಲೆ, ನಿಮ್ಮ ಕುಟುಂಬದ ಮೇಲೆ ಪ್ರೀತಿ, ಮಮತೆ, ಆಸಕ್ತಿ ಇರೋಕೆ ಸಾಧ್ಯ? ಹೇಳಿ, ಉತ್ತರ ಕೊಡಿ. ಯಾವಾಗ ಅವರಿಗೆ ನಿಮ್ಮ ತುಂಬಾ ಅವಶ್ಯಕತೆ ಇತ್ತೋ, ಆಗ ನೀವು ಅವರನ್ನ ದೂರ ಇಟ್ತ್ರಿ.

ಮಕ್ಕಳನ್ನ ಜೊತೆಯಲ್ಲೇ ಇಟ್ಟು ಪ್ರೀತಿ, ಮಮತೆ, ವಾತ್ಸಲ್ಯ, ಸಂಸ್ಕೃತಿ, ಸಂಸ್ಕಾರ ಎಲ್ಲಾ ಕೊಟ್ಟು ಒಳ್ಳೇ ಶಿಕ್ಷಣ ಕೊಟ್ಟರೆ, ಅವರ ಪ್ರೀತಿ ಎಲ್ಲಾ ಯಾವತ್ತೂ ನಿಮ್ಮ ಜೊತೆಗೆ ಇರುತ್ತೆ. ಅದನ್ನ ಬಿಟ್ಟು ಅವರು ಚಿಕ್ಕವರು ಇರುವಾಗಲೇ ಅವರನ್ನ ಹಾಸ್ಟೆಲ್‍ನಲ್ಲಿ ಹಾಕಿ ಅವರ ಭಾವನೆಗಳನ್ನ ಕೊಂದೋರೆ ನೀವು. ಈಗ “ನಮ್ಮ ಮಕ್ಕಳಿಗೆ ನಮ್ಮ ಮೇಲೆ ಪ್ರೀತಿ ಇಲ್ಲಾ, ಅವರಿಗೆ ತಂದೆ-ತಾಯಿ ಕುಟುಂಬ ಅಂದ್ರೆ ಕೀಳರಿಮೆ” ಅಂತ ಕಣ್ಣೀರು ಹಾಕೋರು ನೀವೇ… ಅವರ ಆ ವರ್ತನೆಗೇ ಕಾರಣ ನೀವೇ…

ಮತ್ತೊಂದು ಸನ್ನಿವೇಶ ನಾನು ಕಳೆದ ವರುಷಗಳ ಹಿಂದೆ ಟಿ.ವಿ. ನ್ಯೂಸ್‍ನಲ್ಲಿ ನೋಡಿದ್ದೆ. ಒಬ್ಬ ಶ್ರೀಮಂತ ದಂಪತಿಗಳು ಕಾರ್ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಅವರಿಗೆ ಇಬ್ಬರು ಮಕ್ಕಳು—ಒಂದು ಹೆಣ್ಣು, ಒಂದು ಗಂಡು. ತಂದೆ-ತಾಯಿಗೆ ಆಕ್ಸಿಡೆಂಟ್ ಆಗಿ ಸತ್ತೋಗಿರೋ ಸುದ್ದಿ ಕೇಳಿದಾಗಿಂದ ಹಿಡಿದು ಅವರ ಎಲ್ಲಾ ಕಾರ್ಯಗಳು ಮುಗಿಯೋವರೆಗೂ ಅವರ ಕಣ್ಣಲ್ಲಿ ಒಂದು ಹನಿ ನೀರು ಕೂಡ ಬಂದಿರಲಿಲ್ಲವಂತೆ! ಆಮೇಲೆ ಯಾಕೆ ಹಾಗೆ ಅಂತ ನೋಡಿದಾಗ ಗೊತ್ತಾಗಿದ್ದು—ಆ ದಂಪತಿಗಳು ಆ ಮಕ್ಕಳು ಹುಟ್ಟಿದಾಗಿಂದ ಹಿಡಿದು ಅಷ್ಟು ದೊಡ್ಡವರಾದರೂ ಅವರನ್ನ ಆಯಾ ಹತ್ತಿರ,, ಹಾಸ್ಟೆಲ್‍ನಲ್ಲೇ ಇಟ್ಟು ಬೆಳೆಸಿದ್ದರು ಅಂತ! ಅದಕ್ಕೆ ಅವರಿಗೆ ತಂದೆ-ತಾಯಿ ಅಂದ್ರೆ ಏನು, ಅವರ ಮಹತ್ವ ಏನು ಚೂರು ಗೊತ್ತಿರಲಿಲ್ಲ ಅಂತೇ… ಇದಕ್ಕೂ ಕಾರಣ ಅದೇ, ಮಕ್ಕಳನ್ನ ಪೂರ್ತಿಯಾಗಿ ಹಾಸ್ಟೆಲ್‍ನಲ್ಲಿ ಇಟ್ಟು ಬೆಳೆಸೋದು. ಪಾಲಕರು ಮಕ್ಕಳಿಗೆ ಹಾಸ್ಟೆಲ್‍ನಲ್ಲಿ ಇಟ್ಟರೆ, ಮುಂದೆ ಅದೇ ಮಕ್ಕಳು ಅವರನ್ನ ವೃದ್ಧಾಶ್ರಮದಲ್ಲಿ ಇಡುತ್ತಾರೆ ಅಷ್ಟೇ.

ಇನ್ನು ಬೇಕಿದ್ರೆ ಪಿ.ಯು.ಸಿ. ಪದವಿವರೆಗೂ ಜೊತೆಯಲ್ಲಿ ಬೆಳೆಸಿ, ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಬೇರೆ ಕಡೆ ಕಳುಹಿಸಿದರೆ, ಹಾಸ್ಟೆಲ್ ಕಳುಹಿಸಿದರೆ ಇಷ್ಟು ಸಮಸ್ಯೆಯಾಗುವುದಿಲ್ಲ.

ಇದಕ್ಕೆ ಪರಿಹಾರ: ನೀವು ನಿಮ್ಮ ಮಕ್ಕಳನ್ನು ನಿಮ್ಮ ಜೊತೆಯಲ್ಲಿ ಇಟ್ಟು, ಒಳ್ಳೇ ಶಿಕ್ಷಣ, ಸಂಸ್ಕಾರ, ಪ್ರೀತಿ, ಸಮಯ ಕೊಟ್ಟು ಬೆಳೆಸಿ. ನೀವು ಹೀಗೆ ಬೆಳೆಸಿದ್ದೆ ಆದರೆ ನಿಮ್ಮ ಮಕ್ಕಳು ಕೊನೆಯವರೆಗೂ ನಿಮ್ಮನ್ನ ಅಪಾರವಾದ ಪ್ರೀತಿ, ಗೌರವ ಕೊಟ್ಟು ನೋಡಿಕೊಳ್ಳುತ್ತಾರೆ.

“”ಪೋಷಕರೇ, ಮಕ್ಕಳ ಭವಿಷ್ಯ ರೂಪಿಸುವ ಭರದಲ್ಲಿ ಅವರ ‘ಭಾವನೆಗಳನ್ನು’ ಕೊಲ್ಲದಿರಿ!””

ಧನ್ಯವಾದಗಳು.

ವಿಶೇಷ ಸೂಚನೆ : “ಜೀವನ ಕೌಶಲ್ಯಗಳು (Life Skills) ಹಾಗೂ ನೈತಿಕ ಮೌಲ್ಯಗಳ ಕುರಿತಾದ ನನ್ನ ಮುಂದಿನ ಪ್ರತಿಯೊಂದು ಹೊಸ ಬರಹ ಮತ್ತು ಚಿಂತನೆಗಳನ್ನು ನೇರವಾಗಿ ಓದಲು ‘ಪ್ರತಿಲಿಪಿ’ಯಲ್ಲಿ ನವೀನ ಗೋಪಾಲಸಾ ಹಬೀಬ ಆದ ನನ್ನನ್ನು ಫಾಲೋ ಮಾಡಿ. ನಿಮ್ಮ ಅಮೂಲ್ಯ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ಹಂಚಿಕೊಳ್ಳಿ. ಧನ್ಯವಾದಗಳು!”

Leave a Reply

Your email address will not be published. Required fields are marked *