ಮಂಗಳೂರು: ಬೆಂಗಳೂರು ಕಂಟೋನ್ಮೆಂಟ್–ಮಡಗಾಂವ್ ನಡುವೆ ಸಂಚರಿಸಲಿರುವ ವಿಶೇಷ ಎಕ್ಸ್‌ಪ್ರೆಸ್ ರೈಲಿಗೆ ಮಂಗಳೂರಿನಲ್ಲಿ ನಿಲುಗಡೆ ಕಲ್ಪಿಸುವಂತೆ ಹಾಗೂ ಮಂಗಳೂರಿನ ಒಟ್ಟಾರೆ ರೈಲ್ವೆ ಸಂಪರ್ಕವನ್ನು ಸಮಗ್ರವಾಗಿ ಪರಿಶೀಲಿಸಿ ಅಗತ್ಯ Course Correction ಕೈಗೊಳ್ಳುವಂತೆ ಕರ್ನಾಟಕ ವಿಧಾನ ಪರಿಷತ್ ಪ್ರದಾನ ಸದಸ್ಯ ಪಿ.ವಿ. ಮೋಹನ್ ಅವರು ಮೈಸೂರು ವಿಭಾಗದ ವಿಭಾಗೀಯ ರೈಲ್ವೆ ವ್ಯವಸ್ಥಾಪಕರಿಗೆ (DRM) ಮನವಿ ಸಲ್ಲಿಸಿದ್ದಾರೆ.

ವಾರಾಂತ್ಯದ ಹೆಚ್ಚುವರಿ ಪ್ರಯಾಣಿಕರ ದಟ್ಟಣೆಯನ್ನು ನಿರ್ವಹಿಸಲು ನೈರುತ್ಯ ರೈಲ್ವೆ ಪ್ರಕಟಿಸಿರುವ ಬೆಂಗಳೂರು ಕಂಟೋನ್ಮೆಂಟ್–ಮಡಗಾಂವ್ ವಿಶೇಷ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 06597/06598) ರೈಲಿನ ನಿಲುಗಡೆಗಳ ಪಟ್ಟಿಯಲ್ಲಿ ಮಂಗಳೂರು ಸೆಂಟ್ರಲ್, ಮಂಗಳೂರು ಜಂಕ್ಷನ್ ಅಥವಾ ಪಡೀಲ್—ಯಾವುದೇ ನಿಲ್ದಾಣವನ್ನು ಸೇರಿಸದಿರುವುದು ಗಮನಾರ್ಹವಾಗಿದೆ ಎಂದು ಅವರು ತಿಳಿಸಿದ್ದಾರೆ.
“ಮಂಗಳೂರಿನಂತಹ ಪ್ರಮುಖ ನಗರಕ್ಕೆ ಯಾವುದೇ ನಿಲುಗಡೆ ಇಲ್ಲದಿರುವುದನ್ನು ಕೇವಲ ವೇಳಾಪಟ್ಟಿಯ ಒಂದು ಸಣ್ಣ ವಿಚಾರವಾಗಿ ನೋಡಬಾರದು. ಮಂಗಳೂರಿನ ಪ್ರಸ್ತುತ ಪ್ರಯಾಣಿಕರ ಬೇಡಿಕೆ, ನಗರದ ಬೆಳವಣಿಗೆ ಮತ್ತು ಅದರ ಆರ್ಥಿಕ ಹಾಗೂ ಪ್ರಾದೇಶಿಕ ಮಹತ್ವದ ಹಿನ್ನೆಲೆಯಲ್ಲಿ ರೈಲ್ವೆ ಸೇವೆಗಳನ್ನು ಸಮಗ್ರವಾಗಿ ಮರುಪರಿಶೀಲಿಸುವ ಅಗತ್ಯವಿದೆ”ಎಂದು ಪಿ.ವಿ. ಮೋಹನ್ ಹೇಳಿದ್ದಾರೆ.
ಮಂಗಳೂರು ಕರ್ನಾಟಕದ ಪ್ರಮುಖ ಕರಾವಳಿ ನಗರವಾಗಿದ್ದು, ಬಂದರು, ಕೈಗಾರಿಕೆ, ವ್ಯಾಪಾರ, ಶಿಕ್ಷಣ, ಆರೋಗ್ಯ, ಪ್ರವಾಸೋದ್ಯಮ ಮತ್ತು ಉದ್ಯೋಗದ ಪ್ರಮುಖ ಕೇಂದ್ರವಾಗಿದೆ. ಬೆಂಗಳೂರು, ಕರಾವಳಿ ಕರ್ನಾಟಕ ಮತ್ತು ಗೋವಾ ನಡುವಿನ ಪ್ರಮುಖ ಸಂಪರ್ಕ ಕೇಂದ್ರವಾಗಿರುವುದರಿಂದ ಮಂಗಳೂರಿಗೆ ಪರಿಣಾಮಕಾರಿ ರೈಲು ಸಂಪರ್ಕವು ಪ್ರಾದೇಶಿಕ ಆರ್ಥಿಕ ಬೆಳವಣಿಗೆ ಮತ್ತು ಪ್ರಯಾಣಿಕರ ಅನುಕೂಲಕ್ಕೆ ಅತ್ಯಂತ ಅಗತ್ಯವಾಗಿದೆ ಎಂದು ಅವರು ಮನವಿಯಲ್ಲಿ ತಿಳಿಸಿದ್ದಾರೆ.
ಮಂಗಳೂರಿನ ಅಭಿವೃದ್ಧಿ ಮತ್ತು ಮೂಲಸೌಕರ್ಯ ವಿಸ್ತರಣೆಗೆ ರಾಜ್ಯಸರ್ಕಾರದ ಮಟ್ಟದಲ್ಲಿ ಹೆಚ್ಚಿನ ಗಮನ ನೀಡಲಾಗುತ್ತಿರುವ ಸಂದರ್ಭದಲ್ಲಿ, ರೈಲ್ವೆ ಸಂಪರ್ಕವೂ ಈ ಅಭಿವೃದ್ಧಿಯ ಅವಿಭಾಜ್ಯ ಭಾಗವಾಗಬೇಕು. ಉತ್ತಮ ರೈಲು ಸೇವೆಗಳು ವಿದ್ಯಾರ್ಥಿಗಳು, ರೋಗಿಗಳು, ಉದ್ಯೋಗಿಗಳು, ಪ್ರವಾಸಿಗರು, ವ್ಯಾಪಾರಿಗಳು ಸೇರಿದಂತೆ ಸಾವಿರಾರು ಪ್ರಯಾಣಿಕರಿಗೆ ಅನುಕೂಲ ಕಲ್ಪಿಸುವುದರ ಜೊತೆಗೆ ಕರಾವಳಿ ಪ್ರದೇಶದ ಆರ್ಥಿಕ ಚಟುವಟಿಕೆಗಳಿಗೆ ಉತ್ತೇಜನ ನೀಡಲಿವೆ ಎಂದು ಅವರು ಹೇಳಿದ್ದಾರೆ.
ಮಂಗಳೂರಿಗೆ ಸೇವೆ ನೀಡುವ ರೈಲ್ವೆ ಮಾರ್ಗಗಳು ಮೈಸೂರು ವಿಭಾಗದ ವ್ಯಾಪ್ತಿಗೆ ಬಂದಿರುವ ಹಿನ್ನೆಲೆಯಲ್ಲಿ, ಪ್ರಸ್ತುತ ಪ್ರಯಾಣಿಕರ ಬೇಡಿಕೆ, ರೈಲುಗಳ ಬಳಕೆ, ಜನಸಂಖ್ಯೆಯ ಬೆಳವಣಿಗೆ, ವಾಣಿಜ್ಯ ಚಟುವಟಿಕೆ ಮತ್ತು ಮಂಗಳೂರಿನ ಹೆಚ್ಚುತ್ತಿರುವ ಪ್ರಾದೇಶಿಕ ಮಹತ್ವವನ್ನು ಪರಿಗಣಿಸಿ ಈಗಿರುವ ವ್ಯವಸ್ಥೆ ಹಾಗೂ ಭವಿಷ್ಯದ ರೈಲು ಸೇವೆಗಳನ್ನು ಮರುಪರಿಶೀಲಿಸುವಂತೆ ಪಿ.ವಿ. ಮೋಹನ್ಅವರು ಮನವಿ ಮಾಡಿದ್ದಾರೆ.
ಅವರು ಮುಖ್ಯವಾಗಿ ಕೆಳಗಿನ ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ:
- ಬೆಂಗಳೂರು ಕಂಟೋನ್ಮೆಂಟ್–ಮಡಗಾಂವ್ ವಿಶೇಷ ಎಕ್ಸ್‌ಪ್ರೆಸ್‌ಗೆ ಮಂಗಳೂರು ಸೆಂಟ್ರಲ್ಅಥವಾ ಮಂಗಳೂರು ಜಂಕ್ಷನ್‌ನಲ್ಲಿ ನಿಲುಗಡೆ ಕಲ್ಪಿಸುವುದು.
- ಮಂಗಳೂರು–ಬೆಂಗಳೂರು ಮತ್ತು ಮಂಗಳೂರು–ಗೋವಾ ಮಾರ್ಗಗಳಲ್ಲಿ ಹೆಚ್ಚುವರಿ ರೈಲು ಸೇವೆಗಳು ಹಾಗೂ ಅಗತ್ಯ ನಿಲುಗಡೆಗಳ ಸಾಧ್ಯತೆಯನ್ನು ಪರಿಶೀಲಿಸುವುದು.
- ಮಂಗಳೂರಿಗೆ ಸೇವೆ ನೀಡುವ ರೈಲುಗಳ ವೇಳಾಪಟ್ಟಿ ಮತ್ತು ಒಟ್ಟಾರೆ ಸೇವೆಗಳನ್ನು ಪ್ರಯಾಣಿಕರ ಬೇಡಿಕೆ ಹಾಗೂ ನಗರದ ಆರ್ಥಿಕ ಮಹತ್ವದ ಆಧಾರದ ಮೇಲೆ ಸಮಗ್ರವಾಗಿ ಪರಿಶೀಲಿಸುವುದು.
- ಪ್ರಮುಖ ರೈಲ್ವೆ ಸೇವೆಗಳು ಮತ್ತು ಮೂಲಸೌಕರ್ಯ ಯೋಜನೆಗಳನ್ನು ರೂಪಿಸುವಾಗ ಸ್ಥಳೀಯ ಜನಪ್ರತಿನಿಧಿಗಳು, ಪ್ರಯಾಣಿಕರ ಸಂಘಟನೆಗಳು ಮತ್ತು ಸಂಬಂಧಪಟ್ಟ ಹಿತಾಸಕ್ತಿದಾರರ ಅಭಿಪ್ರಾಯಗಳನ್ನು ಪರಿಗಣಿಸುವ ವ್ಯವಸ್ಥೆ ರೂಪಿಸುವುದು.
“ಮಂಗಳೂರು ಕರ್ನಾಟಕದ ಅಂಚಿನ ನಗರವಲ್ಲ; ಕರಾವಳಿ ಕರ್ನಾಟಕದ ಹೆಬ್ಬಾಗಿಲು ಮತ್ತು ರಾಜ್ಯದ ಆರ್ಥಿಕ ಬೆಳವಣಿಗೆಯ ಪ್ರಮುಖ ಕೇಂದ್ರ. ಮಂಗಳೂರಿನ ಪ್ರಸ್ತುತ ಮತ್ತು ಭವಿಷ್ಯದ ಅಗತ್ಯಗಳಿಗೆ ಅನುಗುಣವಾಗಿ ರೈಲ್ವೆ ಸಂಪರ್ಕವನ್ನು ಬಲಪಡಿಸುವುದು ಅತ್ಯಗತ್ಯ”ಎಂದು ಅವರು ತಿಳಿಸಿದ್ದಾರೆ.
ಪ್ರಸ್ತುತ ವಿಶೇಷ ರೈಲಿನ ನಿಲುಗಡೆ ಕುರಿತು ಕೈಗೊಂಡಿರುವ ನಿರ್ಧಾರವನ್ನು ಮರುಪರಿಶೀಲಿಸಿ, ಮಂಗಳೂರಿನಲ್ಲಿ ಸೂಕ್ತ ನಿಲುಗಡೆ ಕಲ್ಪಿಸುವ ಮೂಲಕ ಅಗತ್ಯ Course Correction ಕೈಗೊಳ್ಳಬೇಕು ಎಂದು ಅವರು DRM ಅವರನ್ನು ಒತ್ತಾಯಿಸಿದ್ದಾರೆ. ಅಗತ್ಯವಿದ್ದಲ್ಲಿ ಈ ವಿಷಯವನ್ನು ಸಂಬಂಧಪಟ್ಟ ಉನ್ನತ ಅಧಿಕಾರಿಗಳ ಗಮನಕ್ಕೂ ಕೊಂಡೊಯ್ದು ಅನುಮೋದನೆ ಪಡೆಯುವಂತೆ ಅವರು ಮನವಿ ಮಾಡಿದ್ದಾರೆ.
ಮಂಗಳೂರಿನ ಪ್ರಯಾಣಿಕರು ಮತ್ತು ಸಾರ್ವಜನಿಕರ ರೈಲ್ವೆ ಅಗತ್ಯತೆಗಳ ಕುರಿತು ವಿವರವಾದ ಪ್ರಾತಿನಿಧಿಕ ಮನವಿಯನ್ನು ಸಲ್ಲಿಸಲು DRM ಅವರನ್ನು ವೈಯಕ್ತಿಕವಾಗಿ ಭೇಟಿ ಮಾಡಲು ತಾವು ಸಿದ್ಧರಿರುವುದಾಗಿ ಪಿ.ವಿ. ಮೋಹನ್ ತಿಳಿಸಿದ್ದಾರೆ..
ಈ ಕುರಿತು ಅವರು ಪತ್ರ ಮತ್ತು ಇಮೇಲ್ ಮೂಲಕ ಅವರು ರೈಲ್ವೆ ವಿಭಾಗೀಯ ಮುಖ್ಯಸ್ಥರಾದ ಮುದಿತ್ಮಿತ್ತಲ್ಅವರನ್ನು ಸಂಪರ್ಕಿಸಿದ್ದಾರೆ.
