ಯುವಶಕ್ತಿಗೆ ಮಾರ್ಗದರ್ಶನ ನೀಡಿ ಸಂಸ್ಕೃತಿ ಉಳಿಸಿ: ಡಾ. ಮೋಹನ ಆಳ್ವ

ಮೂಡುಬಿದಿರೆ: ಬದಲಾಗುತ್ತಿರುವ ಸಮಾಜದಲ್ಲಿ ಯುವಶಕ್ತಿಯನ್ನು ಮುಖ್ಯವಾಹಿನಿಗೆ ತಂದು, ಸಂಘರ್ಷವಿಲ್ಲದ ಸಾಮರಸ್ಯದ ಪರಂಪರೆಯನ್ನು ಉಳಿಸಿ ಬೆಳೆಸಬೇಕು. ಭಾಷೆ ಮತ್ತು ಸಂಸ್ಕೃತಿಯನ್ನು ಮುನ್ನಡೆಸುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಹೇಳಿದರು.

ಅವರು ರವಿವಾರ ಸಂಜೆ ಸಮಾಜ ಮಂದಿರದ ಎಚ್. ಉದಯ ಶಂಕರ ಪ್ರಭು ಸಭಾಂಗಣದಲ್ಲಿ ಸಮಾಜ ಮಂದಿರ ಸಭಾ ಆಯೋಜಿಸಿದ ಐದು ದಿನಗಳ 79ನೇ ದಸರಾ ಸಾಹಿತ್ಯ ಮತ್ತು ಸಾಂಸ್ಕೃತಿಕ ಉತ್ಸವವನ್ನು ಉದ್ಘಾಟಿಸಿ ಮಾತನಾಡಿದರು.

ಕೆ. ಗುಣಪಾಲ ಕಡಂಬರಿಗೆ ಸಮಾಜ ಮಂದಿರ ಪುರಸ್ಕಾರ

ಶಿಕ್ಷಣ, ಕ್ರೀಡೆ, ಕೃಷಿ ಹಾಗೂ ಧಾರ್ಮಿಕ ಮತ್ತು ಸಾಂಸ್ಕೃತಿಕ ಕ್ಷೇತ್ರಗಳ ಸಾಧಕ ಕೆ. ಗುಣಪಾಲ ಕಡಂಬ ಅವರಿಗೆ 2026ನೇ ಸಾಲಿನ ಸಮಾಜ ಮಂದಿರ ಪುರಸ್ಕಾರ ಪ್ರದಾನ ಮಾಡಲಾಯಿತು. ಸನ್ಮಾನ ಸ್ವೀಕರಿಸಿದ ಅವರು, ತುಳು ಭಾಷೆ ಮತ್ತು ಕಂಬಳ ಕ್ಷೇತ್ರದ ಬೆಳವಣಿಗೆಯನ್ನು ಸ್ಮರಿಸಿ, ಮೂಡುಬಿದಿರೆಯ ಅಭಿವೃದ್ಧಿಗೆ ಡಾ. ಮೋಹನ ಆಳ್ವ ಅವರ ಕೊಡುಗೆಯನ್ನು ಶ್ಲಾಘಿಸಿದರು. ಇದೇ ಸಂದರ್ಭದಲ್ಲಿ 75ನೇ ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಡಾ. ಮೋಹನ ಆಳ್ವ ಅವರನ್ನು ಗೌರವಿಸಲಾಯಿತು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸಮಾಜ ಮಂದಿರ ಸಭಾದ ಅಧ್ಯಕ್ಷ, ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಮಾತನಾಡಿ, ತುಳು ಭಾಷೆಯನ್ನು ಸಂವಿಧಾನದ ಎಂಟನೇ ಅನುಸೂಚಿಗೆ ಸೇರಿಸಲು ಸಂಸದರು ಅಗತ್ಯ ಪ್ರಯತ್ನ ಮಾಡಬೇಕು ಎಂದರು.

ದಸರಾ ಉತ್ಸವದ ಸಂಚಾಲಕ ಡಾ. ಪುಂಡಿಕಾಯ್ ಗಣಪಯ್ಯ ಭಟ್ ಸ್ವಾಗತಿಸಿದರು. ಎಚ್. ಸುರೇಶ್ ಪ್ರಭು ಸನ್ಮಾನ ಪತ್ರ ವಾಚಿಸಿದರು. ಎಂ. ಗಣೇಶ ಕಾಮತ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ಸಮಾಜ ಮಂದಿರ ಸಭಾದ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು. ಬಳಿಕ ಸಂತೋಷ್ ಕುಮಾರ್ ಮತ್ತು ಬಳಗದವರಿಂದ ಸಂಗೀತ ರಸಮಂಜರಿ ನಡೆಯಿತು.

Leave a Reply

Your email address will not be published. Required fields are marked *