ಮೂಡುಬಿದಿರೆ: ಯಾರಿಗೂ ಇತರರಿಗೆ ಎನೂ ಮಾಡಲಾಗದು. ಕುದಿಯುವವರು ಆವಿಯಾದರೆ ಉರಿಯುವವರು ಬೂದಿಯಾಗುತ್ತಾರೆ. ನಮ್ಮಲ್ಲಿ ಜೀವನೋತ್ಸಾಹವಿರಬೇಕು. ಆಗ ಮಾತ್ರ ಇತರರಲ್ಲೂ ಅದನ್ನು ಬೆಳೆಸಲು ಸಾಧ್ಯವಾಗುತ್ತದೆ ಎಂದು ವಿಶ್ರಾಂತ ಪ್ರಾಂಶುಪಾಲ ಸಾಲಿಗ್ರಾಮದ ಪ್ರೊ. ಎಂ. ಬಾಲಕೃಷ್ಣ ಶೆಟ್ಟಿ ಹೇಳಿದರು.

ಸಮಾಜ ಮಂದಿರ ಸಭಾದ 79ನೇ ದಸರಾ ಸಾಹಿತ್ಯ ಮತ್ತು ಸಾಂಸ್ಕೃತಿಕ ಉತ್ಸವದ ಎರಡನೇ ದಿನ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ”ನಗು – ಒಂದು ದಿವ್ಯೌಷಧ” ಕುರಿತು ಉಪನ್ಯಾಸ ನೀಡಿದರು. ನಾವು ಸಂತಸವಾಗಿದ್ದು ಇತರರನ್ನೂ ಸಂತಸದಲ್ಲಿಡಬೇಕು. ಎಂದ ಅವರು ಸಾಹಿತ್ಯ ಪರಂಪರೆಯ ಇತಿಹಾಸದ ಅರಿವಿನ ಕೊರತೆ ಅಭಾಸಗಳಿಗೆ ಕಾರಣವಾಗುತ್ತದೆ ಎನ್ನುವುದನ್ನು ಬೇಂದ್ರೆಯವರ ಕುರಿತು ಉದಾಹರಿಸಿ ಬೆಂದು ಬೆಂದು ಬೇಂದ್ರೆಯಾದವರ ಸಾಹಿತ್ಯ ಮೇಲ್ನೋಟಕ್ಕೆ ಪ್ರಣಯ ಸಾಹಿತ್ಯದಂತಿದ್ದರೂ ಅದರ ಹಿಂದೆ ವಿಷಾದವಿತ್ತು ಎಂದು ವಿವರಿಸಿದರು.
ತಹಶೀಲ್ದಾರ್ ಶ್ರೀಧರ್ ಎಸ್. ಮುಂದಲಮನಿ ಅಧ್ಯಕ್ಷತೆ ವಹಿಸಿ ಸಮಾಜ ಮಂದಿರದ ಪರಂಪರೆಯನ್ನು ಶ್ಲಾಘಿಸಿ ಇಂದಿನ ಯುವ ಪೀಳಿಗೆಯಲ್ಲಿ ಸಾಹಿತ್ಯ, ಸಂಸ್ಕೃತಿಯ ಒಲವು ಮೂಡಿಸುವ ಕೆಲಸವಾಗಬೇಕಾಗಿದೆ ಎಂದರು.
ಸಮಾಜ ಮಂದಿರ ಗೌರವ:
ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಮೂಡುಬಿದಿರೆಯ ಅನುಷಾ ಪ್ರಜ್ವಲ್ ಆಚಾರ್ ( ಔಷಧೀಯ ಆಹಾರ ಕ್ಷೇತ್ರ) , ಜೆ.ಜೆ. ಪಿಂಟೋ ( ಶಿಕ್ಷಣ ಕ್ಷೇತ್ರ), ಅಬುಲಾಲ್ ಪುತ್ತಿಗೆ (ಉದ್ಯಮ ಮತ್ತು ಸಮಾಜ ಸೇವೆ )ನ್ಯಾಯವಾದಿ ಹರೀಶ್ ಪಿ. ಅವರಿಗೆ (ನ್ಯಾಯಾಂಗ ) ಕ್ಷೇತ್ರದಲ್ಲಿ ಸಲ್ಲಿಸಿದ ಸಾಧನೆಗಾಗಿ ಸಮಾಜ ಮಂದಿರ ಗೌರವ ನೀಡಲಾಯಿತು.
ಸಮಾಜ ಮಂದಿರ ಸಭಾದ ಅಧ್ಯಕ್ಷ ಕೆ. ಅಭಯಚಂದ್ರ ಜೈನ್ ಮತ್ತು ಆಡಳಿತ ಮಂಡಳಿಯ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು. ಸಮ್ಮಾನಿತರ ಕುರಿತು ಅಭಿನಂದನಾ ಮಾತುಗಳನ್ನಾಡಿದ ದಸರಾ ಉತ್ಸವ ಸಂಚಾಲಕ ಗಣೇಶ್ ಕಾಮತ್ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ಯಕ್ಷ ಧ್ರುವ ಪಟ್ಲ ಸತೀಶ್ ಶೆಟ್ಟಿ ಅವರ ಸಾರಥ್ಯದಲ್ಲಿ ಯಕ್ಷನಿಧಿ ಮೂಡುಬಿದಿರೆ ಬಳಗದಿಂದ ”ಶಾಂಭವಿ-ವಿಜಯ” ಯಕ್ಷಗಾನ ಪ್ರದರ್ಶನ ನಡೆಯಿತು.
